More

    ಶೋಷಿತರ ಶಕ್ತಿ ಪ್ರದರ್ಶನದ ಅಗತ್ಯವಿದೆ

    ಚಿತ್ರದುರ್ಗ: ಮೇಲ್ಜಾತಿಯವರು ಶೋಷಿತರ ಧ್ವನಿ ಅಡಗಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ದಲಿತರು, ಹಿಂದುಳಿದವರು, ಆದಿವಾಸಿ, ಅಲೆಮಾರಿಗಳು, ಅಲ್ಪಸಂಖ್ಯಾತರು ಶಕ್ತಿ ಪ್ರದರ್ಶಿಸಿ, ಸಮಾವೇಶದ ಮೂಲಕ ಸಂದೇಶ ರವಾನಿಸಿ ಎಂದು ಶೋಷಿತ ಸಮುದಾಯಗಳ ಒಕ್ಕೂಟದ ಪ್ರಧಾನ ಸಂಚಾಲಕ ರಾಮಚಂದ್ರಪ್ಪ ಸಲಹೆ ನೀಡಿದರು.

    ನಗರದ ಹೊರವಲಯದಲ್ಲಿ ಜ. 28ರಂದು ನಡೆಸಲು ಉದ್ದೇಶಿಸಿರುವ ಶೋಷಿತ ಸಮುದಾಯಗಳ ಬೃಹತ್ ಜಾಗೃತಿ ಸಮಾವೇಶದ ಅಂಗವಾಗಿ ಎನ್‌ಬಿಟಿ ಸಭಾಂಗಣದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.

    ದಾವಣಗೆರೆಯಲ್ಲಿ ಈಚೆಗೆ ನಡೆದ ವೀರಶೈವ-ಲಿಂಗಾಯತರ ಮಹಾ ಅಧಿವೇಶನದಲ್ಲಿ ಕಾಂತರಾಜ್ ಆಯೋಗದ ವರದಿಯನ್ನು ವಿರೋಧಿಸುವುದಾಗಿ ನಿರ್ಣಯ ತೆಗೆದುಕೊಳ್ಳುವ ಮೂಲಕ ಶೋಷಿತ ಸಮುದಾಯಗಳ ಮೇಲೆ ಸವಾರಿ ಮಾಡುವ ಸಂದೇಶ ರವಾನೆಯಾಗಿದೆ. ಸರ್ಕಾರ ಇನ್ನು ವರದಿಯನ್ನೇ ಬಿಡುಗಡೆಗೊಳಿಸಿಲ್ಲ. ವೈಜ್ಞಾನಿಕ-ಅವೈಜ್ಞಾನಿಕವೆಂದು ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

    92 ವರ್ಷಗಳ ನಂತರ ಜಾತಿವಾರು ಜನಗಣತಿಯಾಗಿದೆ. ಶೋಷಿತ ಸಮುದಾಯಗಳು ಮೈಮರೆತು ಕೂತರೆ ತೊಂದರೆಗೆ ಸಿಲುಕಬೇಕಾಗುತ್ತದೆ. ವಿ.ಪಿ.ಸಿಂಗ್ ದೇಶದ ಪ್ರಧಾನಿಯಾಗಿದ್ದ ವೇಳೆ ಮಂಡಲ್ ಆಯೋಗದ ವರದಿ ಜಾರಿಗೊಳಿಸಿದ ಪರಿಣಾಮ ಹಿಂದುಳಿದವರಿಗೆ ಮೀಸಲಾತಿ ಸಿಕ್ಕಿದೆ. ಆದರೀಗ ಆರ್‌ಎಸ್‌ಎಸ್ ವರದಿ ವಿರೋಧಿಸಿದೆ. ಮೇಲ್ಜಾತಿಯವರ ದಬ್ಬಾಳಿಕೆಗೆ ಕಡಿವಾಣ ಹಾಕಬೇಕಿದೆ ಎಂದು ಎಚ್ಚರಿಸಿದರು.

    ರಾಜ್ಯ ಸರ್ಕಾರ ಶೋಷಿತರ ಉದ್ದಾರ ಮಾಡಲು ಒತ್ತಾಯಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸೇರಿ ಎಲ್ಲಾ ಮುಖಂಡರನ್ನು ಆಹ್ವಾನಿಸಲಾಗುವುದು. ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

    ಸಾಮಾಜಿಕ ಸಂಘರ್ಷ ಸಮಿತಿ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಮಾತನಾಡಿ, ಈ ಸಮಾವೇಶ ಸಾಂಸ್ಕೃತಿಕ ಚಳವಳಿಯಾಗಿ ರೂಪುಗೊಂಡಾಗ ಮಾತ್ರ ಹಿಂದುಳಿದ ಶೋಷಿತ ಸಮುದಾಯಗಳ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇಲ್ಲದಿದ್ದರೆ, ಮನುವಾದ ಸಿದ್ಧಾಂತವುಳ್ಳವರು ನಮ್ಮನ್ನು ಆಳುವ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಎಚ್ಚರಿಸಿದರು.

    ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ. ಶೋಷಿತ ಸಮುದಾಯಗಳು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ರಾಜಕೀಯ ಶಕ್ತಿ ಪಡೆಯಲು ಸಾಧ್ಯ. ಅನೇಕ ಆಯೋಗಗಳ ವರದಿ ಜಾರಿಯಾದಂತೆ ಕಾಂತರಾಜ್ ವರದಿಯನ್ನು ಜಾರಿಗೊಳಿಸಬೇಕು. ಈ ವಿಚಾರವಾಗಿ ಸಿಎಂ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಕೆಪಿಸಿಸಿ ಸದಸ್ಯ ಡಾ.ಬಿ.ತಿಪ್ಪೇಸ್ವಾಮಿ ಜೆ.ಜೆ.ಹಟ್ಟಿ, ವಿವಿಧ ಸಮುದಾಯದ ಮುಖಂಡರಾದ ಎಣ್ಣೆಗೆರೆ ವೆಂಕಟರಾಮ್, ರಾಮಕೃಷ್ಣ, ಆರ್‌.ಪ್ರಸನ್ನಕುಮಾರ್‌, ವೆಂಕಟಪತಿ ಸುಬ್ಬರಾಜು, ಡಿ.ಬಸವರಾಜ್, ಟಿಪ್ಪು ಖಾಸಿಂ ಆಲಿ, ಆರ್.ಕೆ.ಸರ್ದಾರ್, ಎಂ.ಪಿ.ಶಂಕರ್, ರೂಪಾ ಕೃಷ್ಣಪ್ಪ, ಪ್ರಸನ್ನಕುಮಾರ್, ಪ್ರಕಾಶ್‌ನಾಯ್ಕ, ದೇವರಾಜ್, ಬಿ.ರಾಮಪ್ಪ, ಎಸ್.ಲಕ್ಷ್ಮಿಕಾಂತ್, ಕೃಷ್ಣಪ್ಪ, ರಾಜ್‌ಕುಮಾರ್ ಸೊಲೋಮನ್, ಮಾನವಿ ವೀರಣ್ಣ, ಬಸವರಾಜ್ ಬಸಲಿಗುಂದಿ, ಬಿ.ಯೋಗೇಶ್‌ಬಾಬು, ಸಿ.ಟಿ.ಕೃಷ್ಣಮೂರ್ತಿ, ಶ್ರೀರಾಮ್, ಬಿ.ಟಿ.ಜಗದೀಶ್, ಎನ್.ಡಿ.ಕುಮಾರ್, ಎಚ್.ಸಿ.ನಿರಂಜನಮೂರ್ತಿ, ಓ.ಶಂಕರ್‌ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts