More

    ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸಲು ಸಿದ್ಧತೆ

    ಹಾವೇರಿ: ಕರೊನಾ ಸೋಂಕು ಇನ್ನೂ ನಿಯಂತ್ರಣಕ್ಕೆ ಬರದಿರುವ ಹಿನ್ನೆಲೆಯಲ್ಲಿ ಈ ಬಾರಿ ಶೈಕ್ಷಣಿಕ ವರ್ಷ ಆರಂಭವಾದರೂ ಶಾಲೆಗಳು ಆರಂಭವಾಗಿಲ್ಲ.

    ಆದರೆ, ಶಾಲೆಗೆ ಶಿಕ್ಷಕರು ಹಾಜರಾಗುವಂತೆ ಸರ್ಕಾರ ಸೂಚಿಸಿರುವುದರಿಂದ ಸರ್ಕಾರಿ ಶಾಲೆ ಶಿಕ್ಷಕರು ಶಾಲೆಗಳಿಗೆ ಹೋಗುತ್ತಿದ್ದು, ಶಾಲೆ ಸ್ವಚ್ಛತೆ, ಮುಂದಿನ ಶೈಕ್ಷಣಿಕ ಚಟುವಟಿಕೆಯ ತಯಾರಿಯಲ್ಲಿ ತೊಡಗಿದ್ದಾರೆ.

    ಖಾಸಗಿ ಶಾಲೆಗಳ ಶಿಕ್ಷಕರೂ ಶಾಲೆಗೆ ಆಗಮಿಸುತ್ತಿದ್ದು, ಪಾಲಕರ ಸಭೆಗಳನ್ನು ಕರೆದು ಅವರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಶಾಲೆ ಪುನರಾರಂಭದ ವೇಳೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಹಕಾರದೊಂದಿಗೆ ಅವರ ತರಗತಿ ಕೋಣೆಗಳನ್ನು ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ, ಈ ಬಾರಿ ಶಾಲೆಗೆ ವಿದ್ಯಾರ್ಥಿಗಳು ಬರದೇ ಇರುವುದರಿಂದ ಶಿಕ್ಷಕರೇ ತರಗತಿ ಕೋಣೆಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಶಿಕ್ಷಕರೇ ಶಾಲೆ ಆವರಣ ಸ್ವಚ್ಛ ಮಾಡಿದರೆ ಮತ್ತೆ ಕೆಲವು ಶಾಲೆಗಳಲ್ಲಿ ಕೆಲಸಗಾರರ, ಬಿಸಿಯೂಟದ ಅಡುಗೆ ಸಿಬ್ಬಂದಿ ಸಹಾಯದಿಂದ ಶಾಲೆ ಆವರಣ ಸ್ವಚ್ಛ ಮಾಡಿಸುತ್ತಿದ್ದಾರೆ. ಜತೆಗೆ ಎಲ್ಲ ಶಿಕ್ಷಕರು ತಮ್ಮ ವಿಷಯವಾರು ವಾರ್ಷಿಕ ಶೈಕ್ಷಣಿಕ ಪಠ್ಯ ಚಟುವಟಿಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರು ಶಾಲೆ ಮೈದಾನ ಸಮತಟ್ಟು ಮಾಡುತ್ತಿದ್ದಾರೆ. ಮುಂದಿನ ವಾರ ಹೊಸದಾಗಿ ಶಾಲೆ ಪ್ರವೇಶಕ್ಕಾಗಿ ಮನೆಮನೆ ಭೇಟಿ ಕಾರ್ಯಕ್ರಮ ಸಹ ಹಾಕಿಕೊಂಡಿದ್ದಾರೆ.

    ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ಮಕ್ಕಳ ಪಾಲಕರನ್ನು ಸಂರ್ಪಸಿ ಶಾಲೆಗಳ ಆರಂಭದ ಕುರಿತು ಸರ್ಕಾರ ನೀಡಿರುವ ಮಾದರಿಯಲ್ಲಿ ಅಭಿಪ್ರಾಯ ಸಂಗ್ರಹ ಕಾರ್ಯಕ್ಕೆ ಮುಂದಾಗಿದ್ದಾರೆ. ಕೆಲ ಶಾಲೆಗಳಲ್ಲಿ ಬುಧವಾರದಿಂದ ಈ ಚಟುವಟಿಕೆ ಆರಂಭಗೊಂಡಿದ್ದರೆ, ಇನ್ನು ಕೆಲ ಶಾಲೆಗಳಲ್ಲಿ ಶುಕ್ರವಾರ, ಶನಿವಾರ ದಿನ ನಿಗದಿಗೊಳಿಸಲಾಗಿದೆ. ಪಾಲಕರಿಗೆ ಮಾತ್ರ ಶಾಲೆಗೆ ಬರಲು ಸೂಚನೆ ನೀಡಲಾಗುತ್ತಿದೆ. ಅಲ್ಲದೆ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರುವಂತೆ ತಿಳಿಸಲಾಗಿದೆ. ಪಾಲಕರಿಂದ ಸಂಗ್ರಹಿಸಿದ ಅಭಿಪ್ರಾಯಗಳನ್ನು ಸರ್ಕಾರಕ್ಕೆ ಕಳಿಸಿಕೊಡಲಾಗುವುದು ಎಂದು ಖಾಸಗಿ ಶಾಲೆ ಆಡಳಿತ ಮಂಡಳಿಯ ಅಧ್ಯಕ್ಷರೊಬ್ಬರು ತಿಳಿಸಿದರು. ಕರೊನಾ ವೈರಸ್ ನಿಯಂತ್ರಣದ ಉದ್ದೇಶದಿಂದ ಈ ಬಾರಿ ಮಕ್ಕಳು ಶಾಲೆಗೆ ಬರುವ ಮುನ್ನವೇ ಶಿಕ್ಷಕರು ಶಾಲೆಗಳಿಗೆ ಹೋಗುತ್ತಿದ್ದು, ಮುಂದಿನ ಶೈಕ್ಷಣಿಕ ಚಟುವಟಿಕೆ ಸುಗಮವಾಗಿ ನಡೆಸಲು ಬೇಕಾದ ಸುಂದರ ಪರಿಸರ ನಿರ್ವಣ, ಚಟುವಟಿಕೆಗಳ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸರ್ಕಾರ ಮಕ್ಕಳ ಶಾಲೆ ಪ್ರವೇಶಕ್ಕೆ ಯಾವಾಗ ಸೂಚನೆ ನೀಡುತ್ತದೆಯೋ ಎಂದು ಕಾಯುತ್ತಿದ್ದಾರೆ.

    ಇಬ್ಬರು ಕೆಲಸಗಾರರ ಸಹಾಯದಿಂದ ಶಾಲೆಯ ಆವರಣದಲ್ಲಿದ್ದ ಗಿಡಗಳ ಟೊಂಗೆ ಕತ್ತರಿಸಿ ಸ್ವಚ್ಛಗೊಳಿಸಲಾಗುತ್ತಿದೆ. ಇನ್ನು ಶಿಕ್ಷಕರು ಸಹ ಶಾಲೆ ತರಗತಿ ಕೋಣೆ, ಆವರಣ ಸ್ವಚ್ಛತೆ ಮಾಡುತ್ತಿದ್ದಾರೆ. ಜತೆಗೆ ತಮ್ಮ ಶೈಕ್ಷಣಿಕ ಚಟುವಟಿಕೆ ಪಟ್ಟಿ ತಯಾರಿಸಿಕೊಳ್ಳುತ್ತಿದ್ದಾರೆ. ಶಾಲೆಯಲ್ಲಿ ಶಿಕ್ಷಕರ ಚಟುವಟಿಕೆ ಆರಂಭಗೊಂಡಿದೆ. ಸರ್ಕಾರದ ಸೂಚನೆಯಂತೆ ಮಕ್ಕಳನ್ನು ಶಾಲೆಗೆ ಕರೆತರಲಾಗುವುದು.
    | ಪಿ.ಎಸ್. ಕೊಪ್ಪದ ಮುಖ್ಯಾಧ್ಯಾಪಕರು, ನಂ. 3, ಸಹಿಪ್ರಾ ಶಾಲೆ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts