More

    ಶಿಶು-ತಾಯಿ ಮರಣ ಪ್ರಮಾಣ ತಗ್ಗಿಸಿ

    ಧಾರವಾಡ: ಜಿಲ್ಲೆಯಲ್ಲಿ ನವಜಾತ ಶಿಶುಗಳ ಮತ್ತು ತಾಯಂದಿರ ಮರಣ ಪ್ರಮಾಣ ಕಡಿಮೆಗೊಳಿಸಲು ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ನಿರ್ಲಕ್ಷ್ಯದಿಂದ ಜೀವಹಾನಿ ಆಗಬಾರದು. ತೀವ್ರ ಚಿಕಿತ್ಸೆ ಅಗತ್ಯವಿರುವ ಪ್ರಕರಣಗಳನ್ನು ಮುಂಚಿತವಾಗಿಯೇ ಗುರುತಿಸಿ ಸುಸಜ್ಜಿತ ಆಸ್ಪತ್ರೆಗಳಿಗೆ ಶಿಫಾರಸು ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚಿಸಿದರು.

    ಗುರುವಾರ ಜರುಗಿದ ಸಂತಾನೋತ್ಪತ್ತಿ ಹಾಗೂ ಮಕ್ಕಳ ಆರೋಗ್ಯ ಕಾರ್ಯಕ್ರಮಗಳ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ 24,549 ಹೆರಿಗೆಗಳಾಗಿವೆ. ಇದರಲ್ಲಿ 57 ತಾಯಂದಿರು ಹಾಗೂ 337 ನವಜಾತ ಶಿಶುಗಳು ಮರಣ ಹೊಂದಿವೆ. ವೈದ್ಯಕೀಯ ನಿರ್ಲಕ್ಷ್ಯದಿಂದ ತಾಯಿ ಮತ್ತು ನವಜಾತ ಶಿಶುಗಳ ಪ್ರಕರಣಗಳು ಸಂಭವಿಸಬಾರದು. ಮಗುವಿನ ತೂಕ, ತಾಯಿಯ ಆರೋಗ್ಯ, ಮತ್ತಿತರ ದೌರ್ಬಲ್ಯಗಳನ್ನು ಪೂರ್ವ ಹಂತದ ಭೇಟಿಗಳಲ್ಲಿಯೇ ಅಧ್ಯಯನ ಮಾಡಿ ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಅಗತ್ಯ ಕಂಡುಬಂದರೆ ಹೆರಿಗೆ ಮುನ್ನವೇ ಸುಸಜ್ಜಿತ ಆಸ್ಪತ್ರೆಗಳಿಗೆ ಶಿಫಾರಸು ಮಾಡಬೇಕು. ಹೆರಿಗೆಯ ನಂತರ ಕೊನೆಯ ಗಳಿಗೆಯಲ್ಲಿ ಅಪಾಯಕ್ಕೆ ಅವಕಾಶ ಮಾಡಿಕೊಡಬಾರದು. ಅನಗತ್ಯವಾಗಿ ಸಿಸೇರಿಯನ್ ಮಾಡುವ ಆಸ್ಪತ್ರೆಗಳ ಕುರಿತು ಪರಿಶೀಲನೆ ಮಾಡಲಾಗುವುದು. ಶೇ. 30ಕ್ಕಿಂತಲೂ ಹೆಚ್ಚು ಸಿಸೇರಿಯನ್ ಹೆರಿಗೆ ಮಾಡಿಸಿರುವ ಆಸ್ಪತ್ರೆಗಳ ಮಾಹಿತಿ ಸಂಗ್ರಹಿಸಿ ಸಾರ್ವಜನಿಕರಿಗೆ ಪಾರದರ್ಶಕವಾಗಿ ತಿಳಿವಳಿಕೆ ನೀಡಲಾಗುವುದು ಎಂದರು. ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಹೆರಿಗೆ ಸಂದರ್ಭದಲ್ಲಿ ರಕ್ತಸ್ರಾವ ನಿಲ್ಲಿಸಲು ತ್ವರಿತವಾಗಿ ದಿಟ್ಟ ಮತ್ತು ಸೂಕ್ತ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಬಲೂನು ಚಿಕಿತ್ಸೆ ಹಾಗೂ ಇತರ ಕೆಲವು ಸರಳ ವಿಧಾನಗಳ ಮೂಲಕ ಜೀವ ಉಳಿಸುವ ಸಾಧ್ಯತೆಗಳಿವೆ ಎಂದರು. ಜಿಲ್ಲಾ ಆರ್​ಸಿಎಚ್ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ, ಡಿಎಚ್​ಒ ಡಾ. ಯಶವಂತ ಮದೀನಕರ, ಇತರರಿದ್ದರು.

    ಅಪೌಷ್ಟಿಕತೆ ನಿವಾರಿಸಿ
    ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ವಿಕಾಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ವಿಶೇಷ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಜಿಲ್ಲೆಯಲ್ಲಿ ಕಡಿಮೆ ತೂಕವಿರುವ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ 104 ಮಕ್ಕಳಿದ್ದಾರೆ. 18,000 ಮಕ್ಕಳು ಮಧ್ಯಮ ಹಂತದಲ್ಲಿದ್ದಾರೆ. ಕಡಿಮೆ ತೂಕವಿರುವ 104 ಮಕ್ಕಳ ವಿಕಾಸಕ್ಕೆ ವಿಶೇಷ ಕಾರ್ಯಕ್ರಮ ರೂಪಿಸ ಬೇಕು. ಉದ್ಯಮಗಳ ಸಿಎಸ್​ಆರ್ ನಿಧಿ ಅಥವಾ ಸರ್ಕಾರಿ ಅಧಿಕಾರಿಗಳು, ನೌಕರರರಿಂದ ಈ ಮಕ್ಕಳ ಪೋಷಣೆಗೆ ಅಗತ್ಯ ನೆರವು ನೀಡಲು ಏರ್ಪಾಡು ಮಾಡಲಾಗುವುದು. ಅಂಥ ಮಕ್ಕಳ ಕುಟುಂಬಕ್ಕೆ ಅಗತ್ಯ ಸಹಾಯ ಮಾಡಲು ವಿಶೇಷ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

    ಪೋಲಿಯೋ ಲಸಿಕೆ 31ರಿಂದ
    ಧಾರವಾಡ ಜಿಲ್ಲೆಯಲ್ಲಿ ಜ. 31ರಂದು 900 ಕೇಂದ್ರಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುವುದು. ಫೆ. 1ರಿಂದ 3ರವರೆಗೆ ಮನೆಮನೆಗೆ ತೆರಳಿ ಲಸಿಕೆ ನೀಡಲಾಗುವುದು. 5 ವರ್ಷದೊಳಗಿನ 2,11,740 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು. ಜಿಲ್ಲೆಯ ನಗರ ಪ್ರದೇಶದಲ್ಲಿ 1,32,319, ಗ್ರಾಮೀಣ ಪ್ರದೇಶದಲ್ಲಿ 79,421 ಸೇರಿ 5 ವರ್ಷದೊಳಗಿನ 52,11,740 ಮಕ್ಕಳನ್ನು ಲಸಿಕೆಗೆ ಗುರುತಿಸಲಾಗಿದೆ. 4,15,675 ಮನೆಗಳಿಗೆ ತೆರಳಿ ಲಸಿಕೆ ಹಾಕಲಾಗುವುದು. ಮನೆಗೆ ತೆರಳಿ ಲಸಿಕೆ ಹಾಕಲು 1,785 ತಂಡ ರಚಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಲಸಿಕಾ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts