More

    ಶಿವಮೊಗ್ಗ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದ ಗೌರಿ ಪೂಜೆ

    ಶಿವಮೊಗ್ಗ: ಕರೊನಾ ಕಾರಣದಿಂದ ಕಳೆದೆರಡು ವರ್ಷ ಸರಳವಾಗಿ ಆಚರಣೆಗೊಂಡಿದ್ದ ಗಣೇಶ ಚತುರ್ಥಿಗೂ ಮುನ್ನ ದಿನದ ಗೌರಿ ಹಬ್ಬಮಂಗಳವಾರ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ನೆರವೇರಿತು. ಮುತ್ತೈದೆಯರ ಸೌಭಾಗ್ಯ ಹೆಚ್ಚಿಸುವ ಗೌರಿಪೂಜೆಯನ್ನು ಮಹಿಳೆಯರು ತಮ್ಮ ಮನೆಗಳು ಮತ್ತು ದೇವಸ್ಥಾನಗಳಲ್ಲಿ ಆಚರಿಸಿದರು.
    ಹಬ್ಬದ ಹಿನ್ನಲೆಯಲ್ಲಿ ಮಹಿಳೆಯರು, ಮಕ್ಕಳು ಹೊಸ ಬಟ್ಟೆ ಧರಿಸಿ ಮನೆಯಲ್ಲಿ ಗೌರಿ ವಿಗ್ರಹ ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿಸಿದರು. ಕೆಲವರು ವಿವಿಧ ದೇವಾಲಯಗಳಿಗೆ ತೆರಳಿ ಗೌರಿ ಪೂಜೆ ಸಲ್ಲಿಸಿದರು.
    ಪ್ರತಿ ವರ್ಷದಂತೆ ಈ ಬಾರಿಯೂ ರಾಮಣ್ಣಶ್ರೇಷ್ಠಿ ಸರ್ವಸಿದ್ಧಿ ವಿನಾಯಕ ದೇವಾಲಯ, ಗಾಂಧಿಬಜಾರ್‌ನ ಬಸವೇಶ್ವರ ದೇವಸ್ಥಾನ ಮತ್ತು ವಿನೋಬನಗರ 100 ಅಡಿ ರಸ್ತೆ ಶಿವಾಲಯದಲ್ಲಿ ಪ್ರತಿಷ್ಠಾಪಿಸಿದ ಗೌರಮ್ಮನ ವಿಗ್ರಹಗಳಿಗೆ ಸುತ್ತಮುತ್ತಲಿನ ಭಕ್ತರು ಪೂಜೆ-ಪುನಸ್ಕಾರ ಮಾಡಿ ಭಕ್ತಿ ಪರಾಕಷ್ಟೆ ಮೆರೆದರು. ಅಲ್ಲದೇ ಗೌರಮ್ಮನಿಗೆ ಬಾಗಿನ ನೀಡುವ ಮೂಲಕ ಹರಕೆ ಸಲ್ಲಿಸಿದರು.
    ದೇವಿಯ ದರ್ಶನಕ್ಕೆ ಭಕ್ತಸಾಗರವೇ ನೆರೆದಿತ್ತು. ದೇಗುಲಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಮಹಿಳೆಯರು ತಂಡೋಪತಂಡೋವಾಗಿ ಆಗಮಿಸಿ ಪೂಜೆ ಸಲ್ಲಿಸಿದರು. ಬಳಿಕ ಕುಂಕುಮಾರ್ಚನೆ ಕೂಡ ನೆರವೇರಿತು. ಆಗಮಿಸಿದ ಭಕ್ತರು ಹಣ್ಣುಕಾಯಿ ಸಮರ್ಪಿಸಿದರು. ಕೆಲವು ಭಕ್ತರು ತಾವು ಖರೀದಿಸಿದ ಚಿನ್ನಾಭರಣವನ್ನು ವಿಗ್ರಹದ ಬಳಿ ಇಟ್ಟು ಪೂಜೆ ಮಾಡಿಸಿಕೊಂಡಿದ್ದು ವಿಶೇಷವಾಗಿತ್ತು. ಕೆಲವು ಮನೆಗಳಲ್ಲಿ ಹೆಣ್ಣುಮಕ್ಕಳಿಗೆ ತವರಿನಿಂದ ಸಹೋದರರು ಆಗಮಿಸಿ ಬಾಗಿನ ನೀಡಿದರು. ಹಬ್ಬ ಆಚರಿಸುವ ಎಲ್ಲರ ಮನೆಯಲ್ಲಿ ಅರಿಶಿಣ-ಕುಂಕುಮ ನೀಡಿ ಗೌರಿಗಣೇಶ ಹಬ್ಬದ ಮಹತ್ವ ಸಾರಿದರು.
    882 ಕಡೆ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ: ಜಿಲ್ಲೆಯಲ್ಲಿ ವಿವಿಧ ಸಂಘ, ಸಮಿತಿಗಳಿಂದ ಈ ಬಾರಿ 882 ಸಾರ್ವಜನಿಕ ಗಣಪತಿ ವಿಗ್ರಹ ಪ್ರತಿಷ್ಠಾಪನೆಯಾಗಲಿವೆ. ಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಶಿವಮೊಗ್ಗ ನಗರದಲ್ಲೇ ಪಾಲಿಕೆಯಿಂದ ತಾತ್ಕಲಿಕವಾಗಿ 36 ಕಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಕಟ್ಟೆಚ್ಚರ ವಹಿಸಲಾಗಿದೆ. ಅದರಲ್ಲೂ ಹಿಂದು ಮಹಾಸಭಾ ಹಾಗೂ ರಾಮಣ್ಣ ಶ್ರೇಷ್ಠಿ ಓಂ ಗಣಪತಿಯನ್ನು ವಿಶೇಷವಾಗಿ ಅಲಂಕಾರ ಮಾಡಿ ಪ್ರತಿಷ್ಠಾಪಿಸಲಾಗುವುದು. ವೀರ ಸಾವರ್ಕರ್ ಫ್ಲೆಕ್ಸ್ ವಿವಾದದ ಬೆನ್ನಲ್ಲೇ ಡಿಜೆ ಸೌಂಡ್ ಸಿಸ್ಟಂ ಅಳವಡಿವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಆದೇಶಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts