More

    ಶಿರೂರನಲ್ಲಿ ಟೋಲ್ ವಸೂಲಿಗೆ ವಿರೋಧ

    ಭಟ್ಕಳ: ರಸ್ತೆ ವಿಸ್ತರಣೆ ಪೂರ್ಣಗೊಳಿಸದೆ, ಗಡಿ ವಿವಾದ ಬಗೆ ಹರಿಸದೆ ಶಿರೂರು ಟೋಲ್ ಪ್ಲಾಜಾದಲ್ಲಿ ಟೋಲ್ ಆಕರಣೆ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಟ್ಯಾಕ್ಸಿ ಯೂನಿಯನ್ ಸದಸ್ಯರು, ಸ್ಥಳೀಯರು ಶಿರೂರು ಟೋಲ್​ಗೇಟ್ ಬಳಿ ತೆರಳಿ ಬುಧವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

    ಹೆದ್ದಾರಿ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸದೆ ಟೋಲ್​ಗೇಟ್ ಆರಂಭಿಸುವುದಿಲ್ಲ. ಒಂದು ವೇಳೆ ಆರಂಭಿಸಿದರು ಸ್ಥಳೀಯರಿಗೆ ವಿನಾಯಿತಿ ನೀಡಲಾಗುವುದು ಎನ್ನುತ್ತಿದ್ದ ಐಆರ್​ಬಿ ಅಧಿಕಾರಿಗಳು ಮಂಗಳವಾರ ಸಂಜೆಯಿಂದಲೇ ಏಕಾಏಕಿ ಟೋಲ್ ವಸೂಲಿ ಆರಂಭಿಸಿದ್ದರು. ಸ್ಥಳೀಯರಿಗೆ ಮಾಹಿತಿ ನೀಡಿ ನಂತರವಷ್ಟೆ ಮುಂದುವರಿಸುವುದಾಗಿ ಹೇಳಿದ್ದ ಸಂಸ್ಥೆಯ ಈ ನಡೆ, ವಾಹನ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಟೋಲ್ ಪ್ಲಾಜಾ ಶಿರೂರು ಸೇರುತ್ತಿದೆ ಎನ್ನುವ ಕಾರಣಕ್ಕೆ ಭಟ್ಕಳ ತಾಲೂಕಿನ ಸ್ಥಳೀಯರನ್ನು ವಿನಾಯಿತಿಯಿಂದ ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎನ್ನುವ ಆರೋಪವು ಈ ವೇಳೆ ಕೇಳಿ ಬಂತು.

    ಗುತ್ತಿಗೆ ಪಡೆದ ಸಂಸ್ಥೆ ಸಮರ್ಪಕವಾದ ವ್ಯವಸ್ಥೆ ಮಾಡಿಲ್ಲ. ಚತುಷ್ಪಥ ರಸ್ತೆ, ಸಬ್ ರಸ್ತೆ, ಸರ್ವಿಸ್ ರಸ್ತೆಯನ್ನು ನಿರ್ವಿುಸದೇ ಐಆರ್​ಬಿ ಕಂಪನಿಯೂ ಟೋಲ್ ಆರಂಭಿಸಿದ್ದು, ಭಟ್ಕಳ ಟ್ಯಾಕ್ಸಿ ಯೂನಿಯನ್ ಪದಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದರು. ಟೂರಿಸ್ಟ್ ಗಾಡಿಗಳಿಗೂ ರಿಯಾಯಿತಿ ನೀಡಬೇಕು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಟೋಲ್ ಪ್ಲಾಜಾದ ವ್ಯವಸ್ಥಾಪಕರಿಗೆ ಭಟ್ಕಳ ಟ್ಯಾಕ್ಸಿ ಯೂನಿಯನ್​ನವರು ಮನವಿ ನೀಡಿದರು.

    ಟೋಲ್ ಪ್ಲಾಜಾದ ವ್ಯವಸ್ಥಾಪಕರು ಮನವಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಿ ಅವರಿಂದ ಸೂಚನೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು. ಅಲ್ಲದೆ, ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ಮುಂದಿನ 2 ದಿನಗಳವರೆಗೆ ಅಂದರೆ ಫೆ. 14ರವರೆಗೆ ಸ್ಥಳೀಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದರು. ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

    ಬೆಳಕೆ ಗ್ರಾಪಂ ಅಧ್ಯಕ್ಷ ರಮೇಶ ನಾಯ್ಕ, ಕಾಂಗ್ರೆಸ್ ಮುಖಂಡ ಅಬ್ದುಲ್ ಮಜೀದ್, ಭಟ್ಕಳ ಟ್ಯಾಕ್ಸಿ ಯೂನಿಯನ್ ಪದಾಧಿಕಾರಿಗಳಾದ ಗಣೇಶ ದೇವಾಡಿಗ, ರಾಕಿ ಫರ್ನಾಂಡೀಸ್, ವಾಸು ನಾಯ್ಕ, ಸುರೇಶ ಮೊಗೇರ, ಸರ್ಪರಾಜ್ ಶಾಬಂದ್ರಿ, ಜಗದೀಶ ನಾಯ್ಕ, ಫಯಾಜ್, ಮಂಜು ನಾಯ್ಕ ಸೇರಿ ಇತರ ಟ್ಯಾಕ್ಸಿ ಯೂನಿಯನ್ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts