More

    ಶಿರಾಳಕೊಪ್ಪದಲ್ಲಿ ಭೂಮಿ ಕಂಪಿಸಿದ ಅನುಭವ: ಭೂಕಂಪನದ ವದಂತಿ

    ಶಿವಮೊಗ್ಗ/ಶಿರಾಳಕೊಪ್ಪ: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಗುರುವಾರ ನಸುಕಿನಲ್ಲಿ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಆದರೆ ರಾಜ್ಯದ ಯಾವುದೇ ಪ್ರದೇಶದ ರಿಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲ. ಯಾವ ಕಾರಣಕ್ಕೆ ಭೂಮಿ ಕಂಪನ ಆಗಿದೆ ಎಂಬ ಪರಿಶೀಲನೆಗೆ ಮಂಗಳೂರಿನಿಂದ ತಜ್ಞರ ತಂಡ ಆಗಮಿಸುತ್ತಿದೆ.
    ಮೂರು ವರ್ಷಗಳ ಹಿಂದೆ ಶಿವಮೊಗ್ಗದಲ್ಲೂ ದೊಡ್ಡ ಪ್ರಮಾಣದಲ್ಲಿ ಭೂಮಿ ಕಂಪಿಸಿ ನಂತರ ಭೀಕರ ಶಬ್ಧ ಕೇಳಿಬಂದಿತ್ತು. ಜತೆಗೆ ಬೆಂಕಿಯ ಜ್ವಾಲೆಯೂ ಕಾಣಿಸಿಕೊಂಡಿತ್ತು. ನಂತರ ಈ ಘಟನೆಗೆ ಹುಣಸೋಡು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ದೊಡ್ಡ ಪ್ರಮಾಣದ ಸ್ಫೋಟವೇ ಕಾರಣ ಎಂಬುದು ಗೊತ್ತಾಗಿತ್ತು. ಶಿರಾಳಕೊಪ್ಪದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಕಂಪನ ಮತ್ತು ಶಬ್ಧ ಕೇಳಿ ಬಂದಿಲ್ಲ. ಆದರೆ ಅದೇ ರೀತಿಯ ಹೋಲಿಕೆ ಇದೆ. ಹೀಗಾಗಿ ಹುಣಸೋಡದಲ್ಲಿ ಸಂಭವಿಸಿದ ಸ್ಪೋಟ ಪ್ರಕರಣದ ರೀತಿ ಇರಬಹುದೇ ಎಂಬ ಅನುಮಾನಕ್ಕೆ ಕಾರಣವಾಗಿದೆ.
    ಇದು ಭೂಕಂಪನ ಅಲ್ಲ ಎಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಸ್ಪಷ್ಟಪಡಿಸಿದ್ದು, ಜನ ಭಯಭೀತರಾಗುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಭೂಕಂಪನ ರಿಕ್ಟರ್ ಮಾಪನದಲ್ಲಿ 4.1ರಷ್ಟಿತ್ತು ಎಂಬ ತಪ್ಪು ಮಾಹಿತಿಯನ್ನು ವೈರಲ್ ಮಾಡಿದವರ ಪತ್ತೆಗೆ ಪೊಲೀಸ್ ಅಧಿಕಾರಿಗಳು ಮುಂದಾಗಿದ್ದಾರೆ.
    ಭೂಕಂಪನ ರಿಕ್ಟರ್ ಮಾಪನದಲ್ಲಿ 4.1ರಷ್ಟಿತ್ತು ಎಂಬ ಮಾಹಿತಿ ಮೊಬೈಲ್‌ನಲ್ಲಿ ಎಲ್ಲೆಡೆ ಶೇರ್ ಆಗಿದೆ. ಆದರೆ ಭೂಕಂಪನ ಮಾಪನದ ಈ ವರದಿ ಸುಳ್ಳು. ಯಾವ ಕಾರಣಕ್ಕೆ ಭೂಮಿ ಕಂಪಿಸಿದೆ ಎಂಬ ಸಂಗತಿಯನ್ನು ಪತ್ತೆಹಚ್ಚಬೇಕಿದೆ. ಭೂಮಿಯಲ್ಲಿ ಸ್ಫೋಟಕಗಳನ್ನು ಹೂತಿಟ್ಟಾಗ ಕೆಲವೊಮ್ಮೆ ಸಿಡಿದು ಇಂತಹ ಶಬ್ಧ ಬರುತ್ತವೆ. ಆದ್ದರಿಂದ ನಿಜ ಸಂಗತಿ ತಿಳಿಯಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
    ಬುಧವಾರ ನಸುಕಿನಲ್ಲಿ ಭೂಮಿ ಕಂಪಿಸಿದ ಅನುಭವ ಆಗುತ್ತಿದ್ದಂತೆ ಜನ ನಿದ್ರೆಗಣ್ಣಿನಲ್ಲೇ ಎದ್ದು ಹೊರಗೆ ಓಡಿ ಬಂದಿದ್ದಾರೆ. ಮನೆಯಲ್ಲಿದ್ದ ಸಾಮಗ್ರಿಗಳು ಅಲುಗಾಡಿದ್ದರಿಂದ ಸ್ಥಳೀಯರ ಆತಂಕ ಮೂಡಿದೆ. ಆದರೆ ಲಿಂಗನಮಕ್ಕಿ ಸೇರಿದಂತೆ ರಾಜ್ಯದ ಐದಾರು ಕಡೆ ರಿಕ್ಟರ್ ಮಾಪನಗಳಲ್ಲಿ ಭೂಮಿ ಕಂಪಿಸಿದ ಬಗ್ಗೆ ವರದಿ ದಾಖಲಾಗದೆ ಇರುವುದು ಸಮಾಧಾನ ತರಿಸಿದ್ದರೂ ಶಬ್ದ ಉಂಟಾಗಿರುವುದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.
    ಶಿರಾಳಕೊಪ್ಪ ಸುತ್ತಮುತ್ತ 8ರಿಂದ 10 ಕಿಮೀ ವ್ಯಾಪ್ತಿಯಲ್ಲಿ ಜನರಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಬೆಳಗಿನ ಜಾವ ಸುಖನಿದ್ರೆಯಲ್ಲಿದ್ದ ಜನರು ಭೂಮಿ ಕಂಪಿಸಿದ್ದರಿಂದ ಎಚ್ಚರಗೊಂಡಿದ್ದಾರೆ. ಬೆಳಗಿನಜಾವ 3.50ರಿಂದ 4ರ ಸುಮಾರಿಗೆ ಎರಡು ಬಾರಿ ಭೂಕಂಪಿಸಿದೆ. ಮೊದಲ ಬಾರಿ ಭೂಮಿ ಕಂಪಿಸಿದ್ದರೆ, ಎರಡನೇ ಬಾರಿ ಕೇವಲ ಶಬ್ಧ ಮಾತ್ರ ಕೇಳಿಸಿದೆ.
    ಪಟ್ಟಣ ಸೇರಿ ಕೆಲ ಗ್ರಾಮಗಳಲ್ಲಿ ಜನರು ಎದ್ದು ಕುಳಿತು ಸುತ್ತಮುತ್ತ ಗ್ರಾಮಗಳಿಗೆ ಪೋನ್ ಮಾಡಿ ಭಾರಿ ಶಬ್ದದ ಬಗ್ಗೆ ಖಾತ್ರಿ ಪಡಿಸಿಕೊಂಡಿದ್ದಾರೆ. ಈ ಘಟನೆಯ ನಂತರ ಜನ ಮನೆಯೊಳಗೆ ಹೋಗುವುದಕ್ಕೂ ಹಿಂದೇಟು ಹಾಕಿದ್ದು, ಬಹಳಷ್ಟು ಜನ ಹೊರಗಡೆಯೇ ಕುಳಿತು ರಾತ್ರಿ ಕಳೆದಿದ್ದಾರೆ.
    ವದಂತಿ: ಆರಂಭದಲ್ಲಿ ಭೂಕಂಪನ ರಿಕ್ಟರ್ ಮಾಪನದಲ್ಲಿ 4.1ರಷ್ಟಿತ್ತು ಎಂದೇ ಹೇಳಲಾಗಿತ್ತು. ಆದರೆ ಎಲ್ಲಿಯೂ ಮನೆ ಗೋಡೆಗಳ ಬಿರುಕು ಸೇರಿದಂತೆ ಯಾವುದೇ ಹಾನಿಯಾಗಿಲ್ಲ. ಆನಂತರ ರಿಕ್ಟರ್ ಮಾಪನದಲ್ಲಿ 3.1, ಮತ್ತೆ 2.7ರಷ್ಟಿತ್ತು ಎಂದು ಗಾಳಿ ಸುದ್ದಿ ಹಬ್ಬಿದ್ದರಿಂದ ಸ್ಥಳೀಯರು ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದರು. ಆದರೆ ಜಿಲ್ಲಾಡಳಿತ ಸ್ಪಷ್ಟಪಡಿಸಿದ ಬಳಿಕ ಜನರು ನಿಟ್ಟುಸಿರುಬಿಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts