More

    ಶಿರಸಿ- ಹುಬ್ಬಳ್ಳಿ ಹೈವೇ ಪ್ರಯಾಣ ಹೈರಾಣ

    ಶಶಿಧರ ಕುಲಕರ್ಣಿ ಮುಂಡಗೋಡ

    ಪಟ್ಟಣದ ಶಿರಸಿ- ಹುಬ್ಬಳ್ಳಿ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಗಳಲ್ಲಿ ದೊಡ್ಡ ಹೊಂಡಗಳು ನಿರ್ವಣವಾಗಿ ಮೃತ್ಯುಕೂಪಕ್ಕೆ ಆಹ್ವಾನಿಸುವಂತಾಗಿವೆ. ಬೈಕ್ ಸವಾರರು ಮತ್ತು ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೆ ರಸ್ತೆ ದುರಸ್ತಿ ಮಾಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ರಾಜ್ಯ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಪಟ್ಟಣದಿಂದ ಶಿರಸಿಗೆ ಹೋಗುವ ರಸ್ತೆಯಲ್ಲಿ ಮಹಾಲೆ ಮಿಲ್ ಹತ್ತಿರ, ಕಾತೂರ, ಪಾಳಾ, ಮಳಗಿ ಮತ್ತು ಬಾಚಣಕಿ, ಅರಶಿಣಗೇರಿ ರಸ್ತೆಯಲ್ಲಿ ಗುಂಡಿಗಳು ಬಿದ್ದು ವಾಹನಗಳ ಸಂಚಾರಕ್ಕೆ ತುಂಬಾ ಅಡಚಣೆಯಾಗುತ್ತಿದೆ.

    ಕೊಂಚ ಯಾಮಾರಿದರೂ ದುರಂತ ಸಂಭವಿಸುವುದು ಕಟ್ಟಿಟ್ಟ ಬುತ್ತಿ. ಇದೇ ರಸ್ತೆಗಳಲ್ಲಿ ಹಲವು ಅಪಘಾತಗಳು ಸಂಭವಿಸಿ ಸಾವು-ನೋವುಗಳು ಉಂಟಾಗಿವೆ. ಅಲ್ಲದೆ, ರಸ್ತೆಗಳು ಹದಗೆಟ್ಟಿರುವುದರಿಂದ ಪ್ರಯಾಣಿಕರ ಸಮಯ ಕೂಡ ವ್ಯರ್ಥವಾಗುತ್ತಿದೆ. ಇಷ್ಟೆಲ್ಲ ತೊಂದರೆ ಇದ್ದರೂ ರಸ್ತೆ ದುರಸ್ತಿ ಮಾಡಿಸದೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸದ ಸಂಗತಿ. ಮಳೆಗಾಲದ ನಂತರ ರಸ್ತೆಗಳ ನಿರ್ವಹಣೆ ಮಾಡಲು ಸರ್ಕಾರದಿಂದ ಲಕ್ಷಾಂತರ ರೂ. ಅನುದಾನ ಬಿಡುಗಡೆ ಆಗುತ್ತದೆ. ಆದರೂ ಈವರೆಗೆ ರಸ್ತೆ ನಿರ್ವಹಣೆ ಮಾಡದೆ ಉದಾಸೀನತೆ ತೋರುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಅಲ್ಲದೆ, ಕಲಘಟಗಿ ಮತ್ತು ಬಂಕಾಪುರಕ್ಕೆ ಹೋಗುವ ರಸ್ತೆಗಳೂ ಹದಗೆಟ್ಟಿದ್ದು ಜಿಲ್ಲಾ ಉಸ್ತುವಾರಿ ಸಚಿವರು ರಸ್ತೆ ದುರಸ್ತಿ ಮಾಡಿಸಬೇಕು ಎಂದು ವಡಗಟ್ಟ ನಿವಾಸಿ ಕೆ.ಎ. ರಾಜ್, ಬಾಚಣಕಿಯ ಸೋಮಶೇಖರ ಕುಲಕರ್ಣಿ, ಕಾತೂರಿನ ನಿತಿನ್ ರಾಯ್ಕರ ಇತರರು ಒತ್ತಾಯಿಸಿದ್ದಾರೆ.

    ಕಾಳೇಬೈಲ್ ಗಡಿಯಿಂದ ಬಾಚಣಕಿ ಗ್ರಾಮದ ಗಡಿವರೆಗೆ 42 ಕಿ.ಮೀ. ಮುಂಡಗೋಡ ತಾಲೂಕಿನ ವ್ಯಾಪ್ತಿಗೆ ಬರುತ್ತದೆ. ಮಳೆ ಹಾನಿ ಅನುದಾನ 1.35 ಕೋ.ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಕೂಡ ಆಗಿದೆ. 5 ಕಿ.ಮೀ. (ಕಾತೂರ, ಶಿಂಗನಳ್ಳಿ, ಹಿರೇಹಳ್ಳಿ ಮತ್ತು ಗಣೇಶಪುರ ಭಾಗ) ರಸ್ತೆಗೆ ಹೊಸದಾಗಿ ಡಾಂಬರ್ ಹಾಕಲಾಗುವುದು. ಉಳಿದ ಗುಂಡಿಗಳನ್ನು ಮುಚ್ಚಲಾಗುವುದು. ಪಟ್ಟಣದಿಂದ ಬಾಚಣಕಿ ಗಡಿವರೆಗೆ 80 ಲಕ್ಷ ರೂ. ನವೀಕರಣ ಅನುದಾನ ಬಂದಿದ್ದು ಟೆಂಡರ್ ಆಗಬೇಕು.
    | ದಯಾನಂದ ಬಿ.ಆರ್., ಪಿಡಬ್ಲು್ಯಡಿ ಎಇಇ

    ಶಿರಸಿ- ಹುಬ್ಬಳ್ಳಿ ರಾಜ್ಯ ಹೆದ್ದಾರಿ ಯಲ್ಲಿನ ರಸ್ತೆಗಳು ತೀರಾ ಹದಗೆಟ್ಟಿದ್ದನ್ನು ನಾನು ಕೂಡ ಕಂಡಿದ್ದೇನೆ. ಸಾರ್ವ ಜನಿಕರಿಗೂ ಇದರಿಂದ ಬಹಳ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಪಿಡಬ್ಲ್ಯುಡಿ ಅಧಿಕಾರಿಗಳ ಜತೆ ಮಾತನಾಡಿ ತುರ್ತು ಕ್ರಮ ಕೈಗೊಳ್ಳುತ್ತೇನೆ.
    | ಶಿವರಾಮ ಹೆಬ್ಬಾರ ಜಿಲ್ಲಾ ಉಸ್ತುವಾರಿ ಸಚಿವ

    ನಾವು ಕೆಲಸದ ನಿಮಿತ್ತ ಶಿರಸಿ ಮತ್ತು ಹುಬ್ಬಳ್ಳಿಗೆ ಹೋಗಬೇಕಾಗುತ್ತದೆ. ರಸ್ತೆಗಳು ಹದಗೆಟ್ಟಿರುವುದರಿಂದ ಪ್ರಯಾಣ ಬಹಳ ದುಸ್ತರವಾಗಿದೆ. ಅಲ್ಲದೆ, ಸಾಮಾನ್ಯವಾಗಿ ವ್ಯಾಪಾರಸ್ಥರು ಮತ್ತು ಬಹಳಷ್ಟು ಜನರು ಹುಬ್ಬಳ್ಳಿ ಮತ್ತು ಶಿರಸಿಯನ್ನು ಅವಲಂಬಿ ಸಿದ್ದಾರೆ. ಹೀಗಾಗಿ ಆದಷ್ಟು ಬೇಗ ಇವೆರಡೂ ರಸ್ತೆಗಳನ್ನು ದುರಸ್ತಿ ಮಾಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು.
    | ಕಿರಣ ವೆರ್ಣೆಕರ ಜುವೇಲರಿ ಶಾಪ್ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts