More

    ಶಿರಸಿ ಪ್ರತ್ಯೇಕ ಜಿಲ್ಲೆ ರಚನೆಗೆ ಆಗ್ರಹಿಸಿ ಧರಣಿ

    ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆ ಎಂದು ಘೊಷಣೆ ಮಾಡದಿದ್ದರೆ ನ. 1ರಂದು ರಾಜ್ಯೋತ್ಸವ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲಾಗುವುದು ಎಂದು ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಸಮಿತಿ ಎಚ್ಚರಿಸಿದೆ.

    ಸೋಮವಾರ ನಗರದ ರಾಘವೇಂದ್ರ ಸರ್ಕಲ್​ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮಿತಿ ಸದಸ್ಯರು ವಿಧಾನಸಭಾಧ್ಯಕ್ಷರ ಕಚೇರಿ ಎದುರು ಧರಣಿ ನಡೆಸಿದರು.

    ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ, ಪ್ರಸ್ತಾಪಿತ ಜಿಲ್ಲೆಯ ತಾಲೂಕುಗಳು ಸಾಕಷ್ಟು ಹೆಚ್ಚು ವಿಸ್ತೀರ್ಣ ಹೊಂದಿವೆ. ಆದರೆ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಈವರೆಗೂ ಪ್ರತ್ಯೇಕ ಜಿಲ್ಲೆ ರಚನೆ ಆಗಿಲ್ಲ. ಸ್ಥಳೀಯ ಶಾಸಕರೇ ವಿಧಾನಸಭಾಧ್ಯಕ್ಷರಿರುವ ಕಾರಣ ಪ್ರತ್ಯೇಕ ಜಿಲ್ಲೆ ಘೊಷಣೆ ಸುಲಭವಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಈಗಾಗಲೇ ಶಿರಸಿ ಶೈಕ್ಷಣಿಕ ಜಿಲ್ಲೆ ರಚನೆಯಾಗಿದೆ. ಪ್ರಸ್ತುತ ದಾಂಡೇಲಿ ಕೂಡ ತಾಲೂಕಾಗಿದ್ದು, ಎಲ್ಲ 12 ತಾಲೂಕುಗಳ ನಿರ್ವಹಣೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಷ್ಟಸಾಧ್ಯ. ಜನರಿಗೂ ಸಾಕಷ್ಟು ಸಮಸ್ಯೆಯಾಗುತ್ತಿದೆ. ಎಲ್ಲ ರೀತಿಯ ಸಮಸ್ಯೆ ನಿವಾರಣೆಗೆ ಶಿರಸಿ ಪ್ರತ್ಯೇಕ ಜಿಲ್ಲೆ ಆಗಲೇಬೇಕು ಎಂದು ಆಗ್ರಹಿಸಿದರು.

    ಸಮಿತಿ ಪದಾಧಿಕಾರಿ ಎಂ.ಎಂ. ಭಟ್ಟ ಮಾತನಾಡಿ, ಶಿರಸಿ ಪ್ರತ್ಯೇಕ ಜಿಲ್ಲೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟದ ಅಂಗವಾಗಿ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ತಮಟೆ ಅಭಿಯಾನ, ಅ. 14ರಂದು ದೀಪದ ಮೆರವಣಿಗೆ, 15ರಂದು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.

    ಸದಸ್ಯರಾದ ರಘು ಕಾನಡೆ, ಪರಮಾನಂದ ಹೆಗಡೆ, ನಂದಕುಮಾರ ಜೋಗಳೇಕರ, ಅಶೋಕ ಭಟ್ಟ, ಎಂ.ಎಂ. ಭಟ್ಟ, ಮಂಜು ಮೊಗೇರ, ಉದಯಕುಮಾರ ಕಾನಳ್ಳಿ, ಪವಿತ್ರಾ ಹೊಸೂರು, ಮಹೇಶ ನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts