More

    ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಮೇಲ್ದರ್ಜೆ ಭಾಗ್ಯ

    ಶಿರಸಿ: ಇಲ್ಲಿನ ಪಂಡಿತ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ 200 ಹಾಸಿಗೆಗಳಿಗೆ ಸ್ಥಳಾವಕಾಶ ನೀಡುವುದಾಗಿ ರಾಜ್ಯ ಸರ್ಕಾರ ಬಜೆಟ್​ನಲ್ಲಿ ಘೊಷಿಸಿದೆ. ಇದರಿಂದಾಗಿ ನಾಗರಿಕರ ಬಹುದಿನಗಳ ಬೇಡಿಕೆ ಈಡೇರಿಕೆ ಸನ್ನಿಹಿತವಾಗಿದೆ.

    1870ರಲ್ಲಿ ಆರಂಭವಾದ ಈ ಆಸ್ಪತ್ರೆಯಲ್ಲಿ ಪ್ರಸ್ತುತ ನಿತ್ಯ 600ಕ್ಕೂ ಹೆಚ್ಚು ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತಿಂಗಳಿಗೆ 300 ರಿಂದ 400ರಷ್ಟು ಹೆರಿಗೆಯಾಗುತ್ತವೆ. ಒಮ್ಮೊಮ್ಮೆ ರೋಗಿಗಳಿಗೆ ಮಲಗಲು ಹಾಸಿಗೆ ಕೂಡ ಇರುವುದಿಲ್ಲ. ಶತಮಾನ ಪೂರೈಸಿದ ಕಾರಣ ಆಸ್ಪತ್ರೆಯ ಕಟ್ಟಡಗಳ ಕೆಲ ಭಾಗಗಳು ಶಿಥಿಲಗೊಂಡಿವೆ. ಪ್ರಸಕ್ತ ಬಜೆಟ್​ನಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಕೈಗೊಂಡ ಕ್ರಮ ಸಾರ್ವಜನಿಕರಿಗೆ ನೆಮ್ಮದಿ ತಂದಿದೆ.

    ಉತ್ತಮ ಆಡಳಿತ ವ್ಯವಸ್ಥೆ ಹೊಂದಿದ್ದು, ಖಾಸಗಿ ಆಸ್ಪತ್ರೆಗಿಂತ ಸರ್ಕಾರಿ ಆಸ್ಪತ್ರೆಯತ್ತ ಜನರ ಒಲವು ಹೆಚ್ಚಿದೆ. ಬೇಡಿಕೆಗೆ ತಕ್ಕ ಸೌಲಭ್ಯ ನೀಡಲಾಗದೆ ಸಮಸ್ಯೆ ಉಂಟಾಗಿತ್ತು. ಹಲವು ಬಾರಿ ಸೌಲಭ್ಯಕ್ಕಾಗಿ ರೋಗಿಗಳು ಹಾಗೂ ಸಿಬ್ಬಂದಿ ನಡುವೆ ಮಾತಿನ ಚಕಮಕಿ ಕೂಡ ನಡೆದಿತ್ತು.

    ಕಾಟೇಜ್ ಹಾಸ್ಪಿಟಲ್: 1870ರಲ್ಲಿ ಪುರಸಭೆ ಆಡಳಿತಕ್ಕೆ ಒಳಪಟ್ಟು ಕಾಟೇಜ್ ಹಾಸ್ಪಿಟಲ್ ಆಗಿ ಜನಸಾಮಾನ್ಯರ ಆರೋಗ್ಯ ರಕ್ಷಣ ಕಾರ್ಯದಲ್ಲಿ ನಿರತವಾಗಿದ್ದ ಆಸ್ಪತ್ರೆಯನ್ನು 1881ರಲ್ಲಿ ಸಾರ್ವಜನಿಕರ ದೇಣಿಗೆ ಹಣ ಹಾಗೂ ಪುರಸಭೆಯ ಅನುದಾನದಡಿ ಅಚ್ಚುಕಟ್ಟಾಗಿ ಕಟ್ಟಲಾಗಿತ್ತು. ಸ್ಥಳೀಯ ಸಂಸ್ಥೆ ಆಶ್ರಯದಲ್ಲಿ ರಾವ್ ಬಹಾದ್ದೂರ್ ಪಿ.ಎನ್.ಪಂಡಿತ ಅವರು 1912ರಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದ ಕಾರಣ ಪಂಡಿತ ಸಾರ್ವಜನಿಕ ಆಸ್ಪತ್ರೆಯಾಗಿ ಮರುನಾಮಕರಣಗೊಂಡಿದೆ.

    ರಾಜ್ಯ ಸರ್ಕಾರ ಬಜೆಟ್​ನಲ್ಲಿ ಘೊಷಿಸಿದಂತೆ ಪಂಡಿತ ಆಸ್ಪತ್ರೆಯು 200 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೆ ಜಿಲ್ಲಾಸ್ಪತ್ರೆ ಮಟ್ಟಕ್ಕೆ ಹೋಗುತ್ತದೆ. ಎಲ್ಲ ವಿಭಾಗಗಳಲ್ಲಿ ಇಬ್ಬರು ತಜ್ಞ ವೈದ್ಯರು ಬರಲು ಅವಕಾಶ ಆಗುತ್ತದೆ. ಈಗಿರುವ 98 ಸಿಬ್ಬಂದಿಯಿಂದ 198 ಸಿಬ್ಬಂದಿ ನೇಮಕಕ್ಕೆ ಮಂಜೂರಾತಿ ಸಿಗುತ್ತದೆ. ಆಸ್ಪತ್ರೆ ವತಿಯಿಂದ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ಮಹತ್ವದ ಪ್ರಸ್ತಾವದಲ್ಲಿ ಪ್ರಥಮ ಹಂತವಾಗಿ 200 ಹಾಸಿಗೆ ಆಸ್ಪತ್ರೆ ಮಂಜೂರಾಗಿದೆ. | ಗಜಾನನ ಭಟ್ಟ ಪಂಡಿತ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts