More

    ಶಿಥಿಲಗೊಂಡ ಉಡುತೊರೆ ಹಳ್ಳದ ಸೇತುವೆ ದುರಸ್ತಿಗೊಳಿಸಿ


    ಹನೂರು: ತಾಲೂಕಿನ ಕುಡುವಾಳೆ ಉಯಿಲನತ್ತ ಮಾರ್ಗದಲ್ಲಿ ಶಿಥಿಲಗೊಂಡಿರುವ ಉಡುತೊರೆ ಹಳ್ಳದ ಕಿರು ಸೇತುವೆಯನ್ನು ದುರಸ್ತಿಪಡಿಸಬೇಕು. ಇಲ್ಲವಾದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಉಯಿಲನತ್ತ ಗ್ರಾಮಸ್ಥರು ಗುರುವಾರ ಒತ್ತಾಯಿಸಿದರು.


    ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, ಈ ಮಾರ್ಗದ ರಸ್ತೆಯು ಕುಡುವಾಳೆ ಗ್ರಾಮದ ಮೂಲಕ ಉಯಿಲನತ್ತ, ಜಡೇಗೌಡನದೊಡ್ಡಿ, ಪೀಕನಾಯಕನ ದೊಡ್ಡಿ, ನಿಂಗೇಗೌಡನ ದೊಡ್ಡಿ, ಮರಿಗೌಡನದೊಡ್ಡಿ, ನೇಕಾರರ ದೊಡ್ಡಿ ಹಾಗೂ ಪಿಜಿ ಪಾಳ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಉಯಿಲನತ್ತ ಗ್ರಾಮ ಸಮೀಪವಿರುವ ಉಡುತೊರೆ ಹಳ್ಳದ ಕಿರು ಸೇತುವೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಶಿಥಿಲಗೊಂಡಿದೆ. ಇದರಿಂದ ಮಳೆಗಾಲದ ವೇಳೆ ಯಥೇಚ್ಛವಾದ ನೀರು ಸೇತುವೆ ಮೇಲೆ ಹರಿಯುತ್ತದೆ. ಈ ಸಂದರ್ಭದಲ್ಲಿ ಸಂಚರಿಸಲು ಪಡಬಾರದ ಕಷ್ಟ ಪಡುತ್ತಿದ್ದೇವೆ. ಅಲ್ಲದೇ ಗುಂಡಿಗಳನ್ನು ತಪ್ಪಿಸಲು ಹೋಗಿ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳು ಆಗಾಗ್ಗೆ ಜರುಗುತ್ತಲೇ ಇವೆ. ಜತೆಗೆ ಸೇತುವೆ ಶಿಥಿಲಗೊಂಡಿರುವುದರಿಂದ ಈ ಮಾರ್ಗದಲ್ಲಿ ಬಸ್‌ಗಳು ಸಹ ಬರುತ್ತಿಲ್ಲ. ಪರಿಣಾಮ ಲೊಕ್ಕನಹಳ್ಳಿ, ಒಡೆಯರಪಾಳ್ಯ ಹಾಗೂ ಕೊಳ್ಳೇಗಾಲದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು 8 ಕಿಮೀ ದೂರವಿರುವ ಚಿಕ್ಕರಂಗಶೆಟ್ಟಿ ಕ್ರಾಸ್‌ವರೆಗೆ ನಡದೇ ಸಾಗಬೇಕಿದ್ದು, ತುಂಬಾ ತೊಂದರೆ ಅನುಭವಿಸುವಂತಾಗಿದೆ.


    ಇತ್ತ ಕಳೆದ 6 ತಿಂಗಳ ಹಿಂದೆ ಗ್ರಾಮ ಸಮೀಪದ ಮಾಳಿಗನತ್ತ ಕಿರು ಸೇತುವೆಯಲ್ಲಿ ತಡೆಗೋಡೆ ಇಲ್ಲದ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್ಸೊಂದು ಹಳ್ಳಕ್ಕೆ ಬಿದ್ದು ಐವರು ಮೃತಪಟ್ಟಿದ್ದು, ಇನ್ನು ಜೀವಭಯ ಕಾಡುತ್ತಿದೆ. ಈ ದಿಸೆಯಲ್ಲಿ ಶಿಥಿಲಗೊಂಡಿರುವ ಸೇತುವೆಯನ್ನು ದುರಸ್ತಿಪಡಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಕಳೆದ ಒಂದೂವರೆ ವರ್ಷದಿಂದ ಆಗಾಗ್ಗೆ ಮನವಿ ಮಾಡುತ್ತಾ ಬರಲಾಗಿದೆ. ಆದರೆ ಈ ಬಗ್ಗೆ ಕಿಂಚಿತ್ತೂ ಗಮನಹರಿಸಿಲ್ಲ. ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಕೂಡಲೇ ಸೇತುವೆಯನ್ನು ದುರಸ್ತಿಪಡಿಸಬೇಕು. ಇಲ್ಲವಾದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು. ಜತೆಗೆ ಮತಪೆಟ್ಟಿಗೆ ಇಡಲು ಸಹ ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಗ್ರಾಮಸ್ಥರಾದ ಮುತ್ತುರಾಜು, ಮಾದೇಗೌಡ, ಮಲ್ಲು, ಕಪನಿಗೌಡ, ನಿಂಗರಾಜು, ಬಸವರಾಜು, ಶೋಭಾ, ರತ್ನಮಣಿ, ಗೌರಮ್ಮ, ಶಶಿಕಲಾ, ಮಹದೇವಮ್ಮ, ಸಿದ್ದಮ್ಮ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts