More

    ವಿಜೃಂಭಣೆಯ ಏಳುದಂಡೆ ಮುನೇಶ್ವರಸ್ವಾಮಿ ಜಾತ್ರೆ

    ಹನೂರು : ತಾಲೂಕಿನ ಕೂಡಲೂರು ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಶ್ರೀ ಏಳುದಂಡೆ ಮುನೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಬುಧವಾರ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.

    ಜಾತ್ರೆ ಅಂಗವಾಗಿ ದೇವರ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ದೇಗುಲವನ್ನು ತಳಿರು-ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

    ಬೆಳಗ್ಗೆ 5.30ರ ಬ್ರಾಹ್ಮೀ ಮುಹೂರ್ತದಲ್ಲಿ ಸ್ವಾಮಿಗೆ ನೂರೊಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಹಾಲು, ಎಣ್ಣೆ ಹಾಗೂ ತುಪ್ಪದ ಮಜ್ಜನ ಸೇವೆ ನೆರವೇರಿಸಲಾಯಿತು. ಈ ವೇಳೆ ದೇಗುಲದ ಆವರಣದಲ್ಲಿ ನೆರೆದಿದ್ದ ಭಕ್ತರು ಸ್ವಾಮಿಯ ಕುರಿತು ಜಯಘೋಷಗಳನ್ನು ಕೂಗಿದರು. ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

    ಎಡೆಸೇವೆ ಅರ್ಪಿಸಿದ ಭಕ್ತರು: ಜಾತ್ರೆಗೆ ಆಗಮಿಸಿ ಉಪವಾಸವಿದ್ದ ನೂರಾರು ಮಹಿಳಾ ಭಕ್ತರು ದೇಗುಲದ ಮುಂಭಾಗದ ಹಳ್ಳದ ಬಳಿ ಸೌದೆ ಒಲೆಯಿಂದ ಸಿಹಿ ಅನ್ನ ತಯಾರಿಸಿ ಸ್ವಾಮಿಗೆ ಎಡೆಸೇವೆಯನ್ನು ಅರ್ಪಿಸಿ ಹರಕೆ ತೀರಿಸಿದರು. ಜತೆಗೆ ದೇಗುಲದ ಮುಂಭಾಗ ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿದರು. ಕೆಲವರು ಮುಡಿಸೇವೆ ನೀಡಿ ಸ್ವಾಮಿ ಕೃಪೆಗೆ ಪಾತ್ರರಾದರು. ಕೆಲವರು ಹರಕೆ ಕಾಣಿಕೆಯನ್ನು ಸಲ್ಲಿಸಿದರು.

    ಬಾಡೂಟದ ಪಂಕ್ತಿಸೇವೆ: ಈ ಜಾತ್ರೆಯಲ್ಲಿ ಭಕ್ತರು ಕುರಿ, ಕೋಳಿಯನ್ನು ಬಲಿ ನೀಡಿ ಬಾಡೂಟದ ಪಂಕ್ತಿಸೇವೆ ನೆರವೇರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಪ್ರಾಣಿ ಬಲಿಯನ್ನು ಸಂಪೂರ್ಣ ನಿಷೇಧಿಸಿದ್ದರಿಂದ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಜತೆಗೆ ನಾಲ್‌ರೋಡ್ ಹಾಗೂ ಹೂಗ್ಯಂ ಮಾರ್ಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ಪರಿಶೀಲಿಸಲಾಯಿತು. ಜತೆಗೆ ದೇಗುಲದ ಬಳಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ದೇಗುಲದ ಆವರಣ ಹಾಗೂ ಆಸುಪಾಸಿನಲ್ಲಿ ಕುರಿ, ಕೋಳಿಗಳ ಬಲಿ ನೀಡುವುದು ಕಂಡುಬರಲಿಲ್ಲ. ಆದರೆ, ಪೊಲೀಸರ ಕಣ್ತಪ್ಪಿಸಿ ದೇಗುಲದ ಹಳ್ಳದ ಬಳಿಯ ಹೊರವಲಯ ಹಾಗೂ ಇನ್ನಿತರ ಕಡೆಗಳಲ್ಲಿ ಕುರಿ, ಕೋಳಿಗಳನ್ನು ಬಲಿ ನೀಡುವುದರ ಮೂಲಕ ಬಾಡೂಟದ ಪಂಕ್ತಿಸೇವೆಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. ಇನ್ನು ಕೂಡಲೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲೂ ಬಾಡೂಟ ಜೋರಾಗಿಯೇ ಇತ್ತು.
    ದಯಾನಂದ ಸ್ವಾಮೀಜಿ ಜಾಗೃತಿ: ಜಾತ್ರೆಯಲ್ಲಿ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ದಯಾನಂದ ಸ್ವಾಮೀಜಿ ಪ್ರಾಣಿ ಬಲಿ ನಿರ್ಮೂಲನೆ ಕುರಿತು ಭಕ್ತರಲ್ಲಿ ಜಾಗೃತಿ ಮೂಡಿಸಿದರು. ಪ್ರಾಣಿ ಬಲಿ ನೀಡದೇ ಸಾತ್ವಿಕ ಪೂಜೆಯನ್ನು ನೆರವೇರಿಸುವಂತೆ ಮನವಿ ಮಾಡಿದರು. ಈ ವೇಳೆ ಕೆಲ ಭಕ್ತರು ಆಕ್ಷೇಪವ್ಯಕ್ತಪಡಿಸಿದರು.

    ಸಾವಿರಾರು ಭಕ್ತರು ಭಾಗಿ: ಕೋವಿಡ್ ಹಿನ್ನೆಲೆ 2021ರಲ್ಲಿ ನಡೆದ ಜಾತ್ರೆಯಲ್ಲಿ ಸಾಂಪ್ರದಾಯಿಕ ಹಾಗೂ ಧಾರ್ಮಿಕ ವಿಧಿಗಳನ್ನು ಮಾತ್ರ ನೆರವೇರಿಸಲಾಯಿತು. ಅರ್ಚಕರನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು.

    ವಾಹನ ದಟ್ಟಣೆ: ಬಾಡೂಟದ ಹಿನ್ನ್ನೆಲೆಯಲ್ಲಿ ಬುಧವಾರ ಸಾವಿರಾರು ಭಕ್ತರು ಆಗಮಿಸಿದ್ದರು. ನಾಲ್‌ರೋಡ್, ಕೂಡಲೂರು ಮಾರ್ಗದಲ್ಲಿ ವಾಹನ ದಟ್ಟಣೆ ಉಂಟಾಯಿತು. ಪೊಲೀಸರು ಸುಗಮ ಸಂಚಾರಕ್ಕಾಗಿ ಹರಸಾಹಸಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts