More

    ಶಾಸಕ ಪ್ರಸಾದ ಅಬ್ಬಯ್ಯಗೆ ಕರೊನಾ ದೃಢ

    ಹುಬ್ಬಳ್ಳಿ: ಚೀನಾ ವೈರಸ್ ಹಾವಳಿ ನಗರದಲ್ಲಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಸಹ ಕರೊನಾ ಬಂದಿರುವುದು ದೃಢಪಟ್ಟಿದೆ. ಸ್ವತಃ ಶಾಸಕರು ಇದನ್ನು ಖಚಿತಪಡಿಸಿದ್ದಾರೆ.

    ಗುರುವಾರ ಅವರು ಗಂಟಲ ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದರು. ಶುಕ್ರವಾರ ವರದಿ ಪಾಸಿಟಿವ್ ಬಂದಿದೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪದಗ್ರಹಣ ಸಮಾರಂಭದಲ್ಲಿ ಶಾಸಕರು ಖುದ್ದು ಪಾಲ್ಗೊಂಡಿದ್ದರು. ಅಲ್ಲಿಯೇ ವೈರಸ್ ಅಂಟಿತೆ ಎಂಬ ಪ್ರಶ್ನೆಯೂ ಉದ್ಭವಿಸಿದೆ.

    ಹುಬ್ಬಳ್ಳಿ ಪೂರ್ವ ಕ್ಷೇತ್ರವನ್ನು ಒಳಗೊಂಡಂತೆ ನಗರದ ಪೂರ್ವ ಭಾಗವು ಹೆಚ್ಚು ಜನನಿಬಿಡ ಪ್ರದೇಶ, ಪ್ರಮುಖ ಮಾರುಕಟ್ಟೆಗಳನ್ನು ಒಳಗೊಂಡಿದ್ದು, ಹೆಚ್ಚಿನ ಪ್ರಕರಣಗಳು ಇಲ್ಲಿಂದಲೇ ವರದಿಯಾಗುತ್ತಿವೆ. ಪ್ರಸಾದ ಅಬ್ಬಯ್ಯ ಒಂದಲ್ಲ ಒಂದು ಕಾರಣಕ್ಕಾಗಿ ಜನರ ಮಧ್ಯೆ ಹೋಗುತ್ತಲೇ ಇದ್ದರು. ಬುಧವಾರದಿಂದ ಸ್ವಲ್ಪ ಅಸೌಖ್ಯ ಉಂಟಾಗಿ, ಗುರುವಾರ ಬೆಳಗ್ಗೆ ಗಂಟಲ ಕೆರೆತದ ಅನುಭವ ಆಗಿದ್ದರಿಂದ ಅವರು ಕಫ ಪರೀಕ್ಷೆ ಮಾಡಿಸಿಕೊಂಡಿದ್ದರು. ಶುಕ್ರವಾರ ವರದಿ ಬರುತ್ತಿದ್ದಂತೆ ಅವರು ಕಿಮ್್ಸ ಆವರಣದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಶಾಸಕರ ಕುಟುಂಬ ವರ್ಗದವರು, ಆಪ್ತ ಸಹಾಯಕರು, ವಾಹನ ಚಾಲಕರು, ಬೆಂಗಾವಲಿನವರು ಸೇರಿ ಸಮೀಪವರ್ತಿಗಳ ಗಂಟಲ ದ್ರವದ ಮಾದರಿ ಸಂಗ್ರಹಿಸಲಾಗಿದೆ. ಅವರೆಲ್ಲರನ್ನೂ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

    ಜನಪ್ರತಿನಿಧಿಗಳಿಗೆ ಕ್ವಾರಂಟೈನ್?: ಜು. 6ರಂದು ಏರ್ಪಾಟಾಗಿದ್ದ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಪ್ರಸಾದ ಅಬ್ಬಯ್ಯ ಪಾಲ್ಗೊಂಡಿದ್ದರು. ಅಂದಿನ ಸಭೆಯಲ್ಲಿ ಸಚಿವ ಜಗದೀಶ ಶೆಟ್ಟರ್, ಅಮೃತ ದೇಸಾಯಿ ಮತ್ತು ಕುಸುಮಾವತಿ ಶಿವಳ್ಳಿಯವರನ್ನು ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲ ಶಾಸಕರು, ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಮತ್ತು ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು. ಸಾಮಾನ್ಯ ನಿಯಮಗಳ ಪ್ರಕಾರ ಸೋಂಕಿತರ ಸಮೀಪಕ್ಕೆ ಬಂದವರು ಕ್ವಾರಂಟೈನ್​ಗೆ ಒಳಪಡಬೇಕು; ಈಗ ಸಚಿವರು, ಉಳಿದವರು ಕ್ವಾರಂಟೈನ್​ಗೆ ಒಳಗಾಗುತ್ತಾರೆಯೆ ಎಂಬ ಪ್ರಶ್ನೆ ಉದ್ಭವಿಸಿದೆ.

    ಲಕ್ಷಣ ಕಂಡರೆ ಪರೀಕ್ಷಿಸಿಕೊಳ್ಳಿ

    ‘ನನ್ನಲ್ಲಿ ರೋಗ ನಿರೋಧಕ ಶಕ್ತಿ ಪ್ರಬಲವಾಗಿದ್ದು, ಮತದಾರರ ಆಶೀರ್ವಾದದಿಂದ ಶೀಘ್ರ ಗುಣಮುಖನಾಗಿ ಮತ್ತೆ ಜನರ ಸೇವೆಗೆ ಹಿಂದಿರುಗುತ್ತೇನೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಕಟಣೆ ನೀಡಿರುವ ಅವರು, ‘ನನ್ನನ್ನು ಭೇಟಿಯಾದವರಲ್ಲಿ ಯಾರಿಗಾದರೂ ಕರೊನಾ ಲಕ್ಷಣಗಳು ಕಂಡುಬಂದಲ್ಲಿ ಕೂಡಲೆ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ವಿನಂತಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts