More

    ಶಾಲಾ ಕೊಠಡಿ ನಿರ್ಮಿಸಿಕೊಡಿ

    ಬೆಳಗಾವಿ: ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡುವುದಕ್ಕಾಗಿ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗೆ 10 ಸುಸಜ್ಜಿತ ಕೊಠಡಿ ನಿರ್ಮಿಸಿಕೊಡುವಂತೆ ಒತ್ತಾಯಿಸಿ ಬೆಳಗಾವಿ ತಾಲೂಕಿನ ಬೆಂಡಿಗೇರಿ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದರು.

    ಬೆಂಡಿಗೇರಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಾಣಗೊಂಡು 50 ವರ್ಷ ಕಳೆದಿವೆ. ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಆಕರ್ಷಣೆ ಕಳೆದುಕೊಂಡಿದೆ. ಅಲ್ಲದೆ, ಮಳೆಗೆ ಸೋರದಿರಲಿ ಎಂದು ಅಳವಡಿಸಿರುವ ತಗಡಿನಿಂದಾಗಿ ಮಳೆ ಸಂದರ್ಭ ಉಂಟಾಗುವ ಸಪ್ಪಳದಿಂದಾಗಿ ಶಿಕ್ಷಕರ ಪಾಠ, ಮಕ್ಕಳ ಏಕಾಗ್ರತೆಗೆ ತೊಂದರೆಯಾಗುತ್ತಿದೆ. ಹೀಗಾಗಿ, ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 437 ವಿದ್ಯಾರ್ಥಿಗಳಿದ್ದಾರೆ. ಆದರೆ, ಮಕ್ಕಳ ಅಧ್ಯಯನಕ್ಕಾಗಿ ಅಗತ್ಯ ಕೊಠಡಿಗಳೇ ಇಲ್ಲದಂತಾಗಿದೆ. ಶೈಕ್ಷಣಿಕ ಯುಗಕ್ಕೆ ಮಕ್ಕಳನ್ನು ಸಜ್ಜುಗೊಳಿಸಲು ವ್ಯವಸ್ಥಿತವಾದ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಗಣಕಯಂತ್ರಕೊಠಡಿ, ಸ್ಮಾರ್ಟ್ ಹಾಗೂ ಡಿಜಿಟಲ್ ಕ್ಲಾಸ್‌ರೂಂಗಳ ಅವಶ್ಯಕತೆ ಇದೆ. ಹೀಗಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಶೀಘ್ರ ಕ್ರಮ ಜರುಗಿಸಿ ವಿದ್ಯಾರ್ಥಿಗಳ ಅಕ್ಷರಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಗ್ರಾಮಸ್ಥರಾದ ಅಡಿವೆಪ್ಪ ಬೆಂಡಿಗೇರಿ, ಶೇಖರ ಮಾಳಾಯಿ, ರವೀಂದ್ರ ಮೆಳೇದ, ಸಿದ್ದಣ್ಣ ಹಾವಣ್ಣವರ, ಬ್ರಹ್ಮ ದೊಡಮನಿ, ಸೋಮಪ್ಪ ಶೀಗಿಹಳ್ಳಿ, ಶಿವಾನಂದ ಮಾಳಾಯಿ, ಭೀಮನಗೌಡ ಮೆಳೇದ, ಮಲ್ಲೇಶಿ ಕಾದ್ರೊಳ್ಳಿ, ಮಹಾಂತೇಶ ಉಪ್ಪಿನ, ಸಂಗಪ್ಪ ಕುಡಚಿ, ಶಿವಾನಂದ ಚಂಡು ಇತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts