More

    ಶವ ಹೊರತೆಗೆದು ಮರಣೋತ್ತರ ಪರೀಕ್ಷೆ, 4 ತಿಂಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದ ಅನ್ವರ್

    ನೆಲಮಂಗಲ: 4 ತಿಂಗಳ ಹಿಂದೆ ಹೃದಯಾಘಾತದಿಂದ ಮೃತಟ್ಟಿದ್ದರು ಎನ್ನಲಾದ ಅನ್ವರ್ (47) ಎಂಬಾತನ ಶವವನ್ನು ಬಿಲಾಲ್ ನಗರದ ಸ್ಮಶಾನದಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಈತನ ಸಾವಿನ ಬಗ್ಗೆ ಪಾಲಕರು ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಉಪಸ್ಥಿತಿಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.

    ನಗರದ ಕೋಟೆಬೀದಿ ನಿವಾಸಿ ಅನ್ವರ್ 25 ವರ್ಷಗಳ ಹಿಂದೆ ಸಲ್ಮಾಬೇಗಂ ಎಂಬಾಕೆಯನ್ನು ಮದುವೆಯಾಗಿದ್ದ. ಬಡ್ಡಿ ವ್ಯವಹಾರದ ಜತೆಗೆ ರಿಯಲ್ ಎಸ್ಟೇಟ್ ವ್ಯವಹಾರದ ಮೂಲಕ ಲಕ್ಷಾಂತರ ರೂಪಾಯಿ ಸಂಪಾದಿಸಿದ್ದ.

    ತಾಯಿ ಮಾಝಿಯನ್ನು ಸುಭಾಷ್‌ನಗರದ ಮನೆಯೊಂದರಲ್ಲಿ ಇರಿಸಿ ನೋಡಿಕೊಳ್ಳುತ್ತಿದ್ದ. 2020ರ ಡಿ.9ರ ಮಧ್ಯಾಹ್ನ 2 ಗಂಟೆಯಲ್ಲಿ ಅನ್ವರ್ ಮಗಳು ಸೀಮಾ, ಅನ್ವರ್ ಸಹೋದರಿ ಮುಬಿನಾಗೆ ಕರೆ ಮಾಡಿ ಅಪ್ಪ ಮೃತಪಟ್ಟಿರುವುದಾಗಿ ತಿಳಿಸಿದ್ದಳು. 2 ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಔಷಧದ ಅಂಗಡಿಯಿಂದ ಮಾತ್ರೆಗಳನ್ನು ತಂದು ಕೊಟ್ಟಿದ್ದೆವು. ಆದರೆ, ಶೌಚಗೃಹದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾಗಿ ಮಾಹಿತಿ ನೀಡಿದ್ದಳು.

    ಶವದ ಮೇಲೆ ಗಾಯದ ಗುರುತು: ಮೃತ ದೇಹದ ಮೇಲೆ ಗಾಯದ ಗುರುತುಗಳನ್ನು ತಾಯಿ ಮಾಝಿ ಹಾಗೂ ಅನ್ವರ್ ಸಹೋದರರಾದ ಭಾಷಾ ಮತ್ತು ಸಲೀಂ ಗಮನಿಸಿದ್ದರು. ಇದನ್ನು ಪೊಲೀಸರಿಗೆ ತಿಳಿಸಲು ಮುಂದಾದಾಗ ಅವರನ್ನು ಅನ್ವರ್ ಸೋದರಮಾವ ನವಾಬ್ ತಡೆದಿದ್ದ. ಅಲ್ಲದೆ, ಅದೇ ದಿನ ಸಾಯಂಕಾಲ ತರಾತುರಿಯಲ್ಲಿ ಅನ್ವರ್ ಅಂತ್ಯಕ್ರಿಯೆ ನಡೆಸಲಾಗಿತ್ತು. ಜತೆಗೆ, ಅನ್ವರ್ ಮೃತಪಟ್ಟ 30 ದಿನದ ಬಳಿಕ ಮುಬಿನಾಗೆ ಕರೆ ಮಾಡಿದ್ದ ಅನ್ವರ್ ಅಳಿಯ ರಸೀಕ್, ಮಾವ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ತಿಳಿಸಿದ್ದ. ಇದು ಅನುಮಾನಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿತ್ತು.

    ಮುಳುವಾಯಿತೇ ಪುತ್ರಿಯರ ಪ್ರೀತಿ-ಪ್ರೇಮ?: ಅನ್ವರ್‌ನ ಕಿರಿಯ ಮಗಳು ಹೀನಾ ಶಿವಮೊಗ್ಗ ಮೂಲದ ರಾಸೀಕ್ ಎಂಬ ಯುವಕನ್ನು ಪ್ರೀತಿಸಿ ಮದುವೆಯಾಗಿದ್ದಳು. ತುಮಕೂರಿನಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದ ಅನ್ವರ್ ಹಿರಿಯ ಮಗಳು ಸೀಮಾ ತಿಂಗಳ ಹಿಂದೆ ಬೆಂಗಳೂರು ಮೂಲದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ವಿಚಾರ ಅನ್ವರ್‌ಗೆ ತಿಳಿದಿತ್ತು. ಈ ವಿಚಾರವಾಗಿ ಮನೆಯಲ್ಲಿ ದಿನವೂ ಜಗಳವಾಗುತ್ತಿತ್ತು ಎನ್ನಲಾಗಿದೆ. ಈ ಕಾರಣದಿಂದಾಗಿ ಆತನನ್ನು ಕೊಲೆ ಮಾಡಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

    ಹಣದಾಸೆಗಾಗಿ ಕೊಲೆ ಶಂಕೆ: ಹಿರಿಯ ಪುತ್ರಿ ಸೀಮಾಳ ಪ್ರೀತಿಯ ವಿಚಾರವಾಗಿ ಪ್ರತಿದಿನದಂತೆ ಡಿ.9ರಂದು ಮನೆಯಲ್ಲಿ ಜಗಳವಾಗಿತ್ತು. ಇದನ್ನೇ ನೆಪವಾಗಿಸಿಕೊಂಡು ಅನ್ವರ್ ಪತ್ನಿ ಸಲ್ಮಾ ಬೇಗಂ, ಹಿರಿಯ ಪುತ್ರಿ ಸೀಮಾ, ಪುತ್ರ ಸಮೀಜಿ, ಕಿರಿಯ ಪುತ್ರಿ ಹೀಮಾ ಮತ್ತು ಅಳಿಯ ರಸೀಕ್, ಸೋದರಮಾವ ನವಾಬ್ ಹಾಗೂ ಆತನ ಪುತ್ರ ಸೈು ಸೇರಿಕೊಂಡು ಹಣದಾಸೆಗಾಗಿ ಅನ್ವರ್‌ನನ್ನು ಹೊಡೆದುಬಡಿದು ಕೊಲೆ ಮಾಡಿಬಹುದು ಎಂದು ಅನುಮಾನ ಮಾ.30ರಂದು ಅನ್ವರ್ ತಾಯಿ ಮಾಝಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
    ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನದಂತೆ ಶವಪರೀಕ್ಷೆಗೆ ಮುಂದಾಗಿದ್ದು, ತುಮಕೂರಿನ ಎಫ್‌ಎಸ್‌ಎಲ್ ವೈದ್ಯ ರುದ್ರಮೂರ್ತಿ ಮತ್ತು ಅವರ ತಂಡ ಸ್ಥಳದಲ್ಲೇ ಶವಪರೀಕ್ಷೆ ನಡೆಸಿತು.

    ಕೋಟೆ ಬೀದಿ ನಿವಾಸಿಯಾಗಿದ್ದ ಅನ್ವರ್ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಆತನ ತಾಯಿ ಮಾಝಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಆತನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ತುಮಕೂರಿನ ಎಫ್‌ಎಸ್‌ಎಲ್‌ಗೆ ವೈದ್ಯರಿಂದ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    ಕೆ. ಮಂಜುನಾಥ್, ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts