More

    ಶರಣ ಭೂಮಿಯಲ್ಲಿ ನೃತ್ಯ ರೂಪಕ ವೈಭವ

    ಬಸವಕಲ್ಯಾಣ: ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘದಿಂದ ತುಮ್ಹಾರೆ ಸಿವಾ ಔರ್ ಕೊಯಿ ನಹಿ (ನೀನಲ್ಲದೆ ಮತ್ತಾರೂ ಇಲ್ಲವಯ್ಯಾ) ಹಿಂದಿ ವಿಶಿಷ್ಟ ನೃತ್ಯರೂಪಕದ ಅದ್ಭುತ ಪ್ರದರ್ಶನ ಸೋಮವಾರ ಶರಣರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ಜರುಗಿತು.

    ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಮತ್ತು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಸಂಯುಕ್ತಾಶ್ರಯದಲ್ಲಿ ಬಸವೇಶ್ವರ ವೃತ್ತ ಸಮೀಪದಲ್ಲಿರುವ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ನೃತ್ಯ ರೂಪಕ ಪ್ರದರ್ಶನ ನಡೆಯಿತು. ಗುರು ಬಸವಣ್ಣನವರ ತತ್ವ-ಸಂದೇಶ, ಚಿಂತನೆಗಳನ್ನು ಸಮಾಜಕ್ಕೆ ಪರಿಚಯಿಸಲು ದೇಶಾದ್ಯಂತ ಸಂಚರಿಸುತ್ತಿರುವ ಸಾಣೇಹಳ್ಳಿ ತಂಡ ಶರಣಭೂಮಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಸಭಿಕರ ಗಮನ ಸೆಳೆಯಿತು. ತಂಡದ ಕಲಾವಿದರು ಮಸ್ತ್ ಅಭಿನಯ ನೀಡಿ ವೀಕ್ಷಕರಿಂದ ಭೇಷ್ ಎನಿಸಿಕೊಂಡರು.

    ಬಸವಣ್ಣನವರ ೪೪ ವಚನಗಳನ್ನು ಆಧರಿಸಿ ರೂಪಿಸಲಾಗಿರುವ ಅಪರೂಪದ, ಪ್ರದರ್ಶನ ಇದಾಗಿತ್ತು. ಸಂಗೀತಕ್ಕೆ ಪೂರಕ ಬೆಳಕಿನ ವ್ಯವಸ್ಥೆ, ಆಕರ್ಷಕ ಉಡುಪಿನಲ್ಲಿ ಕಲಾವಿದರಿಂದ ಅದ್ಭುತ ನೃತ್ಯ. ಇದಕ್ಕೆ ಮೇಳೈಸಿದ ಭಕ್ತಿ, ಭಾವ. ನೃತ್ಯದ ನಡುನಡುವೆ ವಚನ ವಿಶ್ಲೇಷಣೆ, ವ್ಯಾಖ್ಯಾನ. ಎಲ್ಲವೂ ವಿಶೇಷ ಮತ್ತು ವಿಶಿಷ್ಟತೆಯಿಂದ ಕೂಡಿತ್ತು. ನೃತ್ಯ ರೂಪಕ ವಚನ ಸಂಸ್ಕೃತಿಯ ವೈಭವವನ್ನೇ ಆನಾವರಣಗೊಳಿಸಿತು. ಸಹಸ್ರಾರು ಜನರು ಕಣ್ಮನ ತುಂಬಿಕೊಂಡರು.

    ಕಾರ್ಯಕ್ರಮ ಆರಂಭಕ್ಕೂ ಮುನ್ನ ಜನರು ಬಿಕೆಡಿಬಿ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದರಿಂದ ಕುರ್ಚಿಗಳು ಭರ್ತಿ ಆಗಿದ್ದವು. ಕೆಲವರು ನಿಂತುಕೊಂಡೇ ಕೊನೇವರೆಗೆ ವೀಕ್ಷಿಸಿದರು. ಪ್ರದರ್ಶನ ಮುಗಿಯುವವರೆಗೆ ಯಾರಿಗೂ ಕದಲದಂತೆ ಮಾಡುವಲ್ಲಿ ಕಲಾ ತಂಡ ಯಶಸ್ವಿ ಆಗಿರುವುದು ವಿಶೇಷ
    ನೃತ್ಯ ರೂಪಕ ಪ್ರದರ್ಶನಕ್ಕೆ ಚಾಲನೆ ನೀಡಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಘವೇಂದ್ರ ಚನ್ನಬಸಪ್ಪ ಮಾತನಾಡಿ, ೧೨ನೇ ಶತಮಾನದಲ್ಲಿ ಅನುಭವ ಮಂಟಪ ಪ್ರಪಂಚದ ಮೊದಲ ಸಂಸತ್ತು ಎಂದು ಬಿಂಬಿತವಾಗಿದೆ. ಶರಣರು ಯಾವುದೇ ಜಾತಿ ಭೇದ ಇಲ್ಲದೆ ಅನುಭವ ಮಂಟದಲ್ಲಿ ಸೇರಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಈ ಜಗತ್ತು ಕಟ್ಟಬೇಕೆನ್ನುವ ಬಸವಣ್ಣನ ಕನಸು, ಪರಿಕಲ್ಪನೆ ಅತ್ಯದ್ಭುತ ಎಂದು ಬಣ್ಣಿಸಿದರು.

    ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದೇವರು ಹಾಗೂ ಹಿರನಾಗಾಂವನ ಶ್ರೀ ಜಯಶಾಂತಲಿಂಗ ಮಹಾಸ್ವಾಮೀಜಿ ಮಾತನಾಡಿದರು. ಪೂಜ್ಯ ವಿ.ಸಿದ್ದರಾಮಣ್ಣ, ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಡಾ.ಸಿದ್ಧರಾಮ ಶರಣರು ಬೆಲ್ದಾಳ, ಡಾ.ಅಕ್ಕ ಗಂಗಾಂಬಿಕಾ, ಶ್ರೀ ಸಂಗಮೇಶ್ವರ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಪಂಚಾಕ್ಷರಿ ಸ್ವಾಮೀಜಿ, ಶ್ರೀ ಶಂಕರಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಬಿ.ಚನ್ನಪ್ಪ, ಸಿವಿಲ್ ನ್ಯಾಯಾಧೀಶೆ ಗಂಗವ್ವ ಐಯಟ್ಟಿ, ಸಿವಿಲ್ ನ್ಯಾಯಾಧೀಶ ಭರತ ಯೋಗೇಶ ಕರಗುದರಿ, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೊರಕೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಅನುಭವ ಮಂಟಪ ಟ್ರಸ್ಟ್ ಉಪಾಧ್ಯಕ್ಷ ವೈಜಿನಾಥ ಕಾಮಶೆಟ್ಟಿ, ತಾಳಂಪಳ್ಳಿ ಪ್ರತಿಷ್ಠಾನದ ಅಧ್ಯಕ್ಷರಾದ ಹಿರಿಯ ಉದ್ಯಮಿ ಧನರಾಜ ತಾಳಂಪಳ್ಳಿ, ಎಸ್‌ಬಿ.ಮಾಶಾಳಕರ್, ಪಂಡಿತ ನಾಗರಾಳೆ ಇತರರಿದ್ದರು. ಭಾಲ್ಕಿ ಹಿರೇಮಠ ಶ್ರೀ ಗುರುಬಸವ ಪಟ್ಟದೇವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಗರಸಭೆ ಮಾಜಿ ಸದಸ್ಯ ರವೀಂದ್ರ ಕೊಳಕುರ ವಂದಿಸಿದರು. ಶಿವಕುಮಾರ ಜಡಗೆ ನಿರೂಪಿಸಿದರು.

    ವಚನ ಸಾಹಿತ್ಯ ಬದುಕಿಗೆ ಬೆಳಕು
    ಜೀವನಕ್ಕೆ ಬೆಳಕು ಕೊಡುವುದೇ ವಚನ ಸಾಹಿತ್ಯ. ಇದನ್ನು ಓದುವ ಜತೆಯಲ್ಲಿ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕ ಆಗುತ್ತದೆ. ಮಹಾತ್ಮ ಬಸವಣ್ಣನವರು ವಚನಗಳಲ್ಲಿಯೇ ಇದ್ದಾರೆ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದೇವರು ಹೇಳಿದರು. ಸಾಣೇಹಳ್ಳಿ ಶ್ರೀಗಳು ಸದಾ ಹೊಸತನವನ್ನೇ ಮಾಡುತ್ತ, ನಿರಂತರ ರಚನಾತ್ಮಕ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾಣೇಹಳ್ಳಿ ಕಲಾ ತಂಡದಿAದ ಬಸವಣ್ಣನವರ ೪೪ ವಚನ ಒಳಗೊಂಡ ಅದ್ಭುತ ನೃತ್ಯ ರೂಪಕ ವಚನ ಸಂಸ್ಕೃತಿ ಅಭಿಯಾನ ದೇಶದ ೨೪ ರಾಜ್ಯಗಳಲ್ಲಿ ಸಂಚರಿಸಿ ಐತಿಹಾಸಿಕ ಸ್ಥಳ ಬಸವಣ್ಣನವರ ಪವಿತ್ರ ಪುಣ್ಯ ಭೂಮಿಗೆ ಬಂದಿದೆ ಎಂದರು.

    ನೀನಲ್ಲದೆ ಮತ್ತಾರೂ ಇಲ್ಲವಲ್ಲ ನೃತ್ಯ ರೂಪಕ ಅದ್ಭುತ, ಅರ್ಥಪೂರ್ಣ ಹಾಗೂ ವಿಶಿಷ್ಟವಾಗಿದೆ. ನಮಗೆಲ್ಲರಿಗೂ ಪರಮಾತ್ಮನೇ ಆಶ್ರಯ. ಪರಮಾತ್ಮನೆಂದರೆ ನಮ್ಮ ಕೈಯಲ್ಲಿರುವ ಲಿಂಗ. ಲಿಂಗವೇ ನಮ್ಮೆಲ್ಲರ ಸರ್ವಸ್ವ. ಲಿಂಗವನ್ನು ಭಕ್ತಿ-ಶ್ರದ್ಧೆಯಿಂದ ಪೂಜಿಸಿದರೆ ನಮ್ಮೆಲ್ಲರ ಮೇಲೆ ರಕ್ಷಾಕವಚ ಇರಲಿದೆ.
    |ಶ್ರೀ ಡಾ.ಬಸವಲಿಂಗ ಪಟ್ಟದೇವರು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts