More

    ವ್ಯಾಜ್ಯ ತ್ವರಿತ ವಿಚಾರಣೆಗೆ ಸೂಚನೆ

    ಹುಬ್ಬಳ್ಳಿ: ಉಚ್ಚ ನ್ಯಾಯಾಲಯ ಸೇರಿದಂತೆ ವಿವಿಧ ಹಂತದ ನ್ಯಾಯಾಲಯಗಳಲ್ಲಿ ಬಾಕಿ ಇರುವ 5ರಿಂದ 10 ವರ್ಷದ ವ್ಯಾಜ್ಯಗಳನ್ನು ಆದ್ಯತೆ ಮೇರೆಗೆ ತ್ವರಿತವಾಗಿ ವಿಚಾರಣೆಗೆ ಒಳಪಡಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕ್ ಹೇಳಿದರು.

    ಹುಬ್ಬಳ್ಳಿಯ ನೂತನ ನ್ಯಾಯಾಲಯ ಆವರಣದಲ್ಲಿ 9.8 ಕೋಟಿ ರೂ.ವೆಚ್ಚದಲ್ಲಿ ನಿರ್ವಿುಸಿರುವ ವಕೀಲರ ಸಂಘದ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ತ್ವರಿತವಾಗಿ ನ್ಯಾಯದಾನ ನೀಡುವ ನಿಟ್ಟಿನಲ್ಲಿ ಹಳೆಯ ವ್ಯಾಜ್ಯಗಳ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ನ್ಯಾಯಾಧೀಶರಿಗೆ ಸೂಚನೆ ನೀಡಲಾಗಿದೆ. ವ್ಯಾಜ್ಯಗಳನ್ನು ತ್ವರಿತವಾಗಿ ಪರಿಹರಿಸುವಲ್ಲಿ ವಕೀಲರ ಸಹಾಯ ಅಗತ್ಯವಾಗಿದೆ.

    ಹುಬ್ಬಳ್ಳಿ ನ್ಯಾಯಾಲಯ ಸಂಕೀರ್ಣ ದೇಶದಲ್ಲಿ ಮಾದರಿಯಾಗಿದೆ. ಈಗ ಉತ್ತಮ ಸೌಲಭ್ಯಗಳುಳ್ಳ ವಕೀಲರ ಭವನ ನಿರ್ವಿುಸಲಾಗಿದೆ. ಸಂವಿಧಾನದ 21ನೇ ವಿಧಿ ಅನ್ವಯ ನಾಗರಿಕರಿಗೆ ನೀಡಿರುವ ಸ್ವಾತಂತ್ರ್ಯ ರಕ್ಷಣೆಯಲ್ಲಿ ವಕೀಲರ ಪಾತ್ರ ಮಹತ್ವವಾದದ್ದು ಎಂದರು.

    ಹೈಕೋರ್ಟ್ ನ್ಯಾಯಮೂರ್ತಿ ಅಶೋಕ ನಿಜಗಣ್ಣವರ ಮಾತನಾಡಿ, ತಾವು ವಕೀಲರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ನ್ಯಾಯಾಲಯ ಮತ್ತು ವಕೀಲರ ಸಂಘದಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದರು.

    ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಶ್ರೀನಿವಾಸ ಹರೀಶಕುಮಾರ ಮಾತನಾಡಿ, ಹಿರಿಯ ವಕೀಲರು ಕಿರಿಯರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಸಮರ್ಥ ವಕೀಲರನ್ನು ರೂಪಿಸಬೇಕು ಎಂದು ಸಲಹೆ ನೀಡಿದರು. ಧಾರವಾಡ ಹೈಕೋರ್ಟ್ ಪೀಠದ ಹಿರಿಯ ನ್ಯಾಯಮೂರ್ತಿ ಜಿ. ನರೇಂದರ್, ಶಿವಶಂಕರ ಬಿ. ಅಮರಣ್ಣವರ, ಪದ್ಮರಾಜ ಎನ್. ದೇಸಾಯಿ, ಹೈಕೋರ್ಟ್ ರಜಿಸ್ಟ್ರಾರ್ ಜನರಲ್ ರಾಜೇಂದ್ರ ಬದಾಮಿಕರ, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಉಮೇಶ ಅಡಿಗ ಮತ್ತಿತರರು ವೇದಿಕೆಯಲ್ಲಿದ್ದರು.

    ಜಿಲ್ಲಾಧಿಕಾರಿ ನಿತೇಶ ಪಾಟೀಲ, ಉಪವಿಭಾಗಾಧಿಕಾರಿ ಡಾ. ಬಿ. ಗೋಪಾಲಕೃಷ್ಣ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಬಿ. ಚೌಡಣ್ಣವರ ಸೇರಿದಂತೆ ಜಿಲ್ಲೆಯ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ವಕೀಲರು ಇತರರು ಭಾಗವಹಿಸಿದ್ದರು.

    ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ ಸ್ವಾಗತಿಸಿದರು. ಡಾ. ಜಿ.ಡಿ. ವಾರಂಗ ಪ್ರಾರ್ಥಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಗುರು ಎಫ್. ಹಿರೇಮಠ ವಂದಿಸಿದರು. ಮಹಾತ್ಮ ಗಾಂಧಿ ಪುಣ್ಯ ತಿಥಿ

    ಅಂಗವಾಗಿ ಕಾರ್ಯಕ್ರಮದಲ್ಲಿ ಎರಡು ನಿಮಿಷ ಮೌನಾಚರಿಸಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಪರಸ್ಪರ ಅಂತರದ ನಿಯಮಗಳ ಪಾಲನೆಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸಂತಸ ತಂದಿದೆ: ಇಡೀ ರಾಜ್ಯದಲ್ಲಿ ಅತಿದೊಡ್ಡ ವಕೀಲರ ಸಂಘದ ಕಟ್ಟಡ ಹುಬ್ಬಳ್ಳಿಯಲ್ಲಿ ಕಟ್ಟಿರುವುದು ಸಂತಸ ತಂದಿದೆ. ಕಟ್ಟಡ ಉಪನ್ಯಾಸ, ಚರ್ಚೆಗಳಿಗೆ ಸಾಕ್ಷಿಯಾಗಿ ವಕೀಲರ ವೃತ್ತಿ ಸಾಮರ್ಥ್ಯ ಹೆಚ್ಚಿಸಲಿ. ಕಾನೂನುಗಳಲ್ಲಿನ ದ್ವಂದ್ವಗಳನ್ನು ನಿವಾರಣೆ ಮಾಡಿ ಸ್ಪಷ್ಟತೆಯನ್ನು ತರಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ಲೋಕ ಅದಾಲತ್ ಹೆಚ್ಚಿಸಿ: ತ್ವರಿತ ನ್ಯಾಯದಾನ ಇಂದಿನ ಅಗತ್ಯವಾಗಿದೆ. ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆ ಇರುವ ಹಲವಾರು ವ್ಯಾಜ್ಯಗಳ ಪರಿಹಾರಕ್ಕೆ ಹೆಚ್ಚು ಲೋಕ ಅದಾಲತ್​ಗಳನ್ನು ಆಯೋಜಿಸಬೇಕು. ತಮ್ಮ ಇಲಾಖೆ ವ್ಯಾಪ್ತಿಯ ಕೆಐಎಡಿಬಿ ವ್ಯಾಜ್ಯಗಳನ್ನು ಕೈಗಾರಿಕೆ ಅದಾಲತ್ ಮೂಲಕ ಪರಿಹರಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts