More

    ವೈಭವದ ತರೀಕೆರೆ ತಾಲೂಕು ಉತ್ಸವ

    ತರೀಕೆರೆ: ಪಟ್ಟಣದಲ್ಲಿ ಗುರುವಾರ ಎರಡನೇ ತಾಲೂಕು ಉತ್ಸವದ ಹಿನ್ನೆಲೆಯಲ್ಲಿ ಹಬ್ಬದ ವಾತಾರಣ ಸೃಷ್ಟಿಯಾಗಿತ್ತು. ವಿವಿಧ ಇಲಾಖೆ ಅಧಿಕಾರಿಗಳು, ನೌಕರರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಕ್ಕಳು, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಜನಸಾಮಾನ್ಯರು ಸಂಭ್ರಮದಿಂದ ಪಾಲ್ಗೊಂಡಿದ್ದರು.

    ಆಧುನಿಕ ಜೀವನ ಶೈಲಿಯಲ್ಲಿ ಕಳೆದು ಹೋಗುತ್ತಿರುವ ಈ ಮಣ್ಣಿನ ಸೊಗಡು, ಭವ್ಯ ಪರಂಪರೆ ಬಿಂಬಿಸಿ ಮರುಕಳಿಸುವಂತಿದ್ದ ಉತ್ಸವದಲ್ಲಿ ಕೆಲ ಇಲಾಖೆ ನೌಕರರು ಮತ್ತು ಸಿಬ್ಬಂದಿ ಸಾಂಪ್ರದಾಯಿಕ ಉಡುಗೆ ತೊಟ್ಟು ಗಮನ ಸೆಳೆದರು. ಆವರಣದಲ್ಲಿ ಚಿನಕುರುಳಿಯಂತೆ ಓಡಾಡುತ್ತಿದ್ದ ಶಾಲಾ ಮಕ್ಕಳ ಉತ್ಸಾಹಕ್ಕೆ ಪಾರವೇ ಇರಲಿಲ್ಲ.

    ಡಾ. ಅಂಬೇಡ್ಕರ್ ಭವನದಲ್ಲಿ ವಿವಿಧ ಶಾಲೆ ಮಕ್ಕಳು ಸಿದ್ಧಪಡಿಸಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಇಟ್ಟಿದ್ದ ವಿವಿಧ ಮಾದರಿಗಳು, ತಾಪಂ ಆವರಣದಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಪಂ, ತಾಪಂ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಸಂಜೀವಿನಿ ಮಾಸಿಕ ಸಂತೆ ಪ್ರದರ್ಶನ ಹಾಗೂ ಮಾರಾಟ ಮೇಳ ಗಮನ ಸೆಳೆಯಿತು.

    ಗೋಪಾಲ, ಎಂ.ಸಿ.ಹಳ್ಳಿ, ಉಡೇವಾ, ಹಲಸೂರು, ಬೇಲೇನಹಳ್ಳಿ, ಕುಡ್ಲೂರು, ಕೋರನಹಳ್ಳಿ, ಸಿದ್ದರಹಳ್ಳಿ, ಬರಗೇನಹಳ್ಳಿ, ಕೆಂಚಿಕೊಪ್ಪ, ಮುಡುಗೋಡು ಮತ್ತಿತರ ಗ್ರಾ.ಪಂ ವ್ಯಾಪ್ತಿಗೊಳಪಡುವ ವಿವಿಧ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ತಯಾರಿಸಿದ್ದ ತಿಂಡಿ, ತಿನಿಸುಗಳು, ಸೌಂದರ್ಯವರ್ಧಕಗಳು, ಸಿದ್ಧ ಉಡುಪುಗಳು ಇನ್ನಿತರ ಉತ್ಪನ್ನಗಳನ್ನು ಜನ ಮುಗಿಬಿದ್ದು ಖರೀದಿಸಿದರು.

    ಪಟ್ಟಣದ ಅಮೇಜಿಂಗ್ ಇಂಗ್ಲೀಷ್ ಶಾಲೆ ವಿದ್ಯಾರ್ಥಿಗಳ ಪರಿಕಲ್ಪನೆಯಲ್ಲಿ ರೂಪುಗೊಂಡಿದ್ದ ತರೀಕೆರೆ ಸ್ಮಾರ್ಟ್ ಸಿಟಿ ಮಾದರಿ, ಬೆಟ್ಟದಹಳ್ಳಿ ಜಯಪ್ರಕಾಶ್ ನಾರಾಯಣ ಪ್ರೌಢಶಾಲೆ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ ಮಾದರಿ, ಪುರಸಭೆಯ ಮಳೆ ಕೊಯ್ಲು ಪ್ರಾತ್ಯಕ್ಷಿಕೆ ಜನರ ಮೆಚ್ಚುಗೆಗೆ ಪಾತ್ರವಾಯಿತು. ಬಯಲು ರಂಗ ಮಂದಿರ ಆವರಣದಲ್ಲಿ ನಿರ್ವಿುಸಿದ್ದ ತಾತ್ಕಾಲಿಕ ಸೆಲ್ಪಿ ಪಾಯಿಂಟ್ ಆಕರ್ಷಣೀಯವಾಗಿತ್ತು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts