More

    ವೈಭವದಿಂದ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ

    ಚನ್ನರಾಯಪಟ್ಟಣ: ತಾಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರ ಬೂಕನಬೆಟ್ಟದ ಶ್ರೀ ರಂಗನಾಥಸ್ವಾಮಿ ಸನ್ನಿಧಿಯಲ್ಲಿ 92 ನೇ ವರ್ಷದ ದನಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ಗುರುವಾರ ಶ್ರೀ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.


    ಮಧ್ಯಾಹ್ನ 11.30ರಲ್ಲಿ ಶ್ರೀ ರಂಗನಾಥಸ್ವಾಮಿಯ ಕಳಸವನ್ನು ದೇಗುಲದಿಂದ ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ತಂದು ಬ್ರಹ್ಮರಥದ ತುತ್ತ ತುದಿಯಲ್ಲಿ ಪ್ರತಿಷ್ಠಾಪಿಸಲಾಯಿತು. ರಥಕ್ಕೆ ಅನ್ನ ಬಲಿಶಾಂತಿ ಜರುಗಿತು. ನಂತರ ಶ್ರೀ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ಭವ್ಯ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.


    ಮಧ್ಯಾಹ್ಮ 12.05ರಲ್ಲಿ ಶುಭ ಮೇಷ ಲಗ್ನ ಮುಹೂರ್ತದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಬ್ರಹ್ಮರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಹಗ್ಗ ಹಿಡಿದು ಗೋವಿಂದನಾಮ ಸ್ಮರಣೆಯೊಂದಿಗೆ ಬ್ರಹ್ಮ ರಥವನ್ನು ಎಳೆದರು. ನೆರೆದಿದ್ದ ಭಕ್ತರು ಬಾಳೆಹಣ್ಣು-ದವನ, ಹೂವು-ತುಳಸಿ ಪತ್ರೆಯನ್ನು ರಥದ ಮೇಲೆ ಎಸೆದು ಕರ್ಪೂರ ಬೆಳಗಿಸಿ ಹರಕೆ ಸಲ್ಲಿಸಿ ಪುನೀತರಾದರು.


    ವೇದಿಕೆ: ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಧಾರ್ಮಿಕ ಆಚರಣೆಯಿಂದಲೇ ನಮ್ಮ ಸಂಸ್ಕೃತಿಯು ಹಿರಿಮೆ ಹೊಂದಿದೆ. ಇಂತಹ ದೈವ ಸೇವೆಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಹೇಳಿದರು.


    ದೇಶ ಹಾಗೂ ರಾಜ್ಯಕ್ಕೆ ಚರ್ಮಗಂಟು ರೋಗ ಕಾಲಿಟ್ಟಿರುವ ವಿಚಾರ ರೈತರಲ್ಲಿ ಆತಂಕ ಮೂಡಿಸಿದ್ದು, ದನಗಳ ಜಾತ್ರೆ ನಡೆಸಲೂ ತೊಂದರೆಯಾಗುತ್ತಿದೆ. ಇದರಿಂದ ಜಾನುವಾರುಗಳನ್ನು ಮಾರಾಟ ಮಾಡುವ ಹಾಗೂ ಖರೀದಿ ಮಾಡುವ ರೈತ ವರ್ಗಕ್ಕೆ ದೊಡ್ಡ ತಲೆನೋವಾಗಿದೆ ಎಂದು ಆತಂಕವ್ಯಕ್ತಪಡಿಸಿದರು.


    ತಹಸೀಲ್ದಾರ್ ಬಿ.ಎಂ.ಗೋವಿಂದರಾಜ್, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಹೇಮಾವತಿ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ತೋಟಿ ಜಯರಾಂ, ಆರ್‌ಐ ವೀರಾಜ್, ಸಿಪಿಐ ಪ್ರಭಾಕರ್, ಹಿರೀಸಾವೆ ಪೊಲೀಸ್ ಠಾಣೆಯ ಪಿಎಸ್‌ಐ ಸುಬ್ಬಯ್ಯ, ದೇಗುಲದ ಪಾರುಪತ್ತೇದಾರ ರಂಗರಾಜ್, ಬೂಕ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts