More

    ವೈದ್ಯರು ಮಾನವೀಯ ಮೌಲ್ಯವುಳ್ಳವರಾಗಿ

    ಬೆಳಗಾವಿ: ವೈದ್ಯಕೀಯ ವೃತ್ತಿಯು ಒಂದು ಪವಿತ್ರವಾದ ಸೇವೆಯಾಗಿದೆ. ಅದನ್ನು ಸಮಾಜಮುಖಿಯಾಗಿ ಅರ್ಪಣೆ ಮಾಡಿದಾಗ ಅದರ ಪಾವಿತ್ರೃ ಹೆಚ್ಚಾಗುತ್ತದೆ ಎಂದು ಸಾಹಿತಿ ಡಾ. ಬಸವರಾಜ ಜಗಜಂಪಿ ಹೇಳಿದರು.

    ನಗರದ ಬಸವನ ಕುಡಚಿ ದೇವರಾಜ ಅರಸು ಕಾಲನಿಯ ಶಿವಬಸವೇಶ್ವರ ಟ್ರಸ್ಟ್ ಲಿಂಗೈಕ್ಯ ಚಿನ್ನಮ್ಮ ಹಿರೇಮಠ ವೃದ್ರಾಶ್ರಮದಲ್ಲಿ ಡಾ.ರಾಮಣ್ಣವರ ಚಾರಿ ಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನೀಟ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ವೈದ್ಯಕೀಯ ಪ್ರವೇಶ ಪಡೆದ ಬೈಲಹೊಂಗಲ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪುಸ್ತಕ ದಾಸೋಹ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆದಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ತಂದೆ-ತಾಯಿ ಕನಸನ್ನು ನೀವು ನನಸಾಗಿಸಿದ್ದೀರಿ. ಈ ಭರವಸೆ ಹೆಜ್ಜೆಗಳನ್ನು ಮುಂದಿನ ವೈದ್ಯಕೀಯ ಶಿಕ್ಷಣದಲ್ಲಿಯೂ ಕೂಡ ಮುಂದುವರಿಸಬೇಕು. ವೈದ್ಯರಾದರೆ ಸಾಲುವುದಿಲ್ಲ. ಮಾನವೀಯ ಮೌಲ್ಯ ಹೊಂದುವುದು ಅಷ್ಟೇ ಮಹತ್ವಪೂರ್ಣವಾದದ್ದು. ಜನಸಾಮಾನ್ಯರ ಸೇವೆ ಮಾಡುವುದರಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಆದರ್ಶ ವೈದ್ಯರ ಬದುಕನ್ನು ಅರಿಯಬೇಕು. ಒಬ್ಬ ಹೃದಯವಂತ ವೈದ್ಯ ಸಮಾಜಕ್ಕೆ ಸಂಜೀವಿನಿ ಆಗಿರುತ್ತಾನೆ ಎಂದರು.

    ಖ್ಯಾತ ಸ್ತ್ರೀರೋಗ ತಜ್ಞ ಡಾ. ದತ್ತಾತ್ರೇಯ ಗಿಜರೆ ಮಾತನಾಡಿ, ವೈದ್ಯಕೀಯ ಸೀಟು ದೊರೆತ ಮಾತ್ರಕ್ಕೆ ನಾವು ವೈದ್ಯರಾಗಲಿಲ್ಲ. ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕು. ಸಮಯ ಹಾಗೂ ಹಣ ಸದುಪಯೋಗಪಡಿಸಿಕೊಳ್ಳಬೇಕು. ವೈದ್ಯರಾದ ಮಾತ್ರಕ್ಕೆ ದೇವರು ಆಧ್ಯಾತ್ಮವನ್ನು ದೂರ ಸರಿಸುವುದಲ್ಲ ಅದರ ಹತ್ತಿರವಾಗುವುದು. ಅಂತಹ ಒಂದು ಶಕ್ತಿ ನಮ್ಮನ್ನು ಸದಾ ಆವರಿಸಿಕೊಂಡಿರುತ್ತದೆ. ಸಮಾಜದ ಆದರ್ಶ ವೈದ್ಯರಾಗಿ ಈ ಮಣ್ಣಿನ ಈ ದೇಶದ ಋಣ ತೀರಿಸಬೇಕು ಎಂದು ತಿಳಿಸಿದರು.

    ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಅತ್ಯಂತ ಪರಿಸರದಿಂದ ವಿದ್ಯಾರ್ಥಿಗಳೆಲ್ಲ ವೈದ್ಯಕೀಯ ವೃತ್ತಿಗೆ ಪ್ರವೇಶ ಪಡೆದು ನಾಡಿನ ಹೆಮ್ಮೆ ಹೆಚ್ಚಿಸಿದ್ದೀರಿ. ಭವಿಷ್ಯತ್ತಿನಲ್ಲಿಯು ಕೂಡ ಈ ಅಕ್ಷರ ಜ್ಞಾನದ ಯಾತ್ರೆ ಮುಂದುವರಿಯಲಿ. ಶಿಸ್ತು, ಸೌಜನ್ಯಗಳು ನಿಮ್ಮ ಬದುಕಿನ ಮೌಲ್ಯಗಳಾಗಲಿ ಎಂದು ಹಾರೈಸಿದರು.

    ರಾಮಣ್ಣವರ ಟ್ರಸ್ಟ್ ಕಾರ್ಯದರ್ಶಿ ಡಾ. ಮಹಾಂತೇಶ ರಾಮಣ್ಣವರ ಮಾತನಾಡಿ, ಪ್ರತಿ ವರ್ಷ ನೀಟ್ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆಯುವ ಬೈಲಹೊಂಗಲ ತಾಲೂಕಿನ ವಿದ್ಯಾರ್ಥಿಗಳನ್ನು ಗುರುತಿಸುವ ಮೂಲಕ ವೈದ್ಯಕೀಯ ಅಧ್ಯಯನಕ್ಕೆ ಬೇಕಾದ ಪಠ್ಯ ಹಾಗೂ ಉಪಕರಣಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸುವ ಕೆಲಸವನ್ನು ಟ್ರಸ್ಟ್ ಮಾಡುತ್ತಿದೆ ಎಂದರು. ಡಾ.ಮಹಾಂತ ಶೆಟ್ಟಿ, ವೃದ್ಧಾಶ್ರಮದ ಸಂಯೋಜಕ ಎಸ್.ಎಂ.ಚೌಗುಲಾ, ಮಹಾಂತೇಶ ಶೀಲವಂತ, ಡಾ.ಮಹೇಶ ಗುರುನಗೌಡರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts