More

    ವೈಜ್ಞಾನಿಕ ಕೃಷಿಯಿಂದ ಉತ್ತಮ ಇಳುವರಿ

    ಶಿರಸಿ: ಗ್ರಾಮೀಣ ಭಾಗದಲ್ಲಿ ವೈಜ್ಞಾನಿಕ ಕೃಷಿಗೆ ಆದ್ಯತೆ ನೀಡಿದರೆ ರೈತರು ಉತ್ತಮ ಇಳುವರಿ ಪಡೆಯಲು ಸಹಾಯವಾಗುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮಂಜು ಎಂ.ಜೆ., ಹೇಳಿದರು.

    ತಾಲೂಕಿನ ಮತ್ತಿಘಟ್ಟದ ಮುಂಡಗನಮನೆ ಸೇವಾ ಸಹಕಾರಿ ಸಂಘದ ಸಹಕಾರಿ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ತೆಂಗುಬೆಳೆ ಕುರಿತ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

    ಮತ್ತಿಘಟ್ಟದಂತಹ ದೂರದ ಹಳ್ಳಿಗೆ ವೈಜ್ಞಾನಿಕ ಕೃಷಿ ಸಲಹೆ ನೀಡುವುದು ಕೇಂದ್ರದ ಉದ್ದೇಶ. ಇದನ್ನು ರೈತರು ಅಳವಡಿಸಿಕೊಂಡರೆ ಆರ್ಥಿಕ ಸ್ವಾವಲಂಬಿಯಾಗಲು ಅನುಕೂಲವಾಗುತ್ತದೆ. ಕೇಂದ್ರದಲ್ಲಿ ಕೃಷಿ, ತೋಟಗಾರಿಕೆ ಮುಂತಾದ ಎಲ್ಲ ಕೃಷಿಗಳಿಗೆ ಮತ್ತು ಕೃಷಿ ಪೂರಕ ಚಟುವಟಿಕೆಗಳಿಗೆ ಬೇಕಾದ ಸಲಹೆ, ಮಾಹಿತಿಗಳು ಸಿಗುತ್ತವೆ. ಇದು ರೈತರೊಟ್ಟಿಗೆ ಇರುವ ಸಂಸ್ಥೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಂಡಗನಮನೆ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಮತ್ತಿಘಟ್ಟದ ತೆಂಗು ಪ್ರಸಿದ್ಧವಾಗಿದೆ. ಇದರ ರುಚಿ ಹಾಗೂ ಗುಣಮಟ್ಟ ಉತ್ತಮವಾಗಿದೆ. ವೈಜ್ಞಾನಿಕವಾಗಿ ಬೆಳೆ ಬೆಳೆಯುವ ಮೂಲಕ ಗುಣಮಟ್ಟ ಹಾಗೂ ಉತ್ಪನ್ನವನ್ನು ಹೆಚ್ಚಿಸಿಕೊಳ್ಳಬೇಕು. ಪ್ರಶ್ನೋತ್ತರದ ಮೂಲಕ ಅರಿವು ಹೆಚ್ಚಿಸಿಕೊಂಡು ಉತ್ತಮ ಕೃಷಿ ಮಾಡೋಣ ಎಂದರು.

    ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಡಾ . ಶಿವಶಂಕರಮೂರ್ತಿ ಅವರು ತೆಂಗು ಬೆಳೆಯ ಬೇಸಾಯ ಕ್ರಮ, ರೋಗ ಹತೋಟಿ, ಪೋಷಕಾಂಶ ಪೂರೈಕೆ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಸಂಘದ ಮಾಜಿ ಕಾರ್ಯದರ್ಶಿ ವಿ.ಆರ್. ಹೆಗಡೆ ಸ್ವಾಗತಿಸಿದರು. ಬೈಫ್ ಸಂಸ್ಥೆಯ ಸಂಯೋಜಕ ಎಂ.ಎನ್. ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಮುಂಡಗನಮನೆ ಸೊಸೈಟಿಯ ಮುಖ್ಯಕಾರ್ಯನಿರ್ವಾಹಕ ನಾಗಪತಿ ಭಟ್ಟ ನಿರ್ವಹಿಸಿದರು. ನಿರ್ದೇಶಕ ರಾಘವೇಂದ್ರ ಹೆಗಡೆ ವಂದಿಸಿದರು.

    ಈ ಭಾಗದ ಮುಖ್ಯ ಬೆಳೆ ಅಡಕೆಯಾಗಿದೆ. ಅದರೊಟ್ಟಿಗೆ ಇತರ ವಿವಿಧ ಬೆಳೆಗಳನ್ನೂ ಬೆಳೆಯಲಾಗುತ್ತಿದೆ. ಇದಕ್ಕೆ ವೈಜ್ಞಾನಿಕ ವಿಚಾರ, ತಿಳುವಳಿಕೆ ಸಿಕ್ಕರೆ ಉತ್ತಮ ಕೃಷಿ ಸಾಧ್ಯ. ಹಾಗೆ ಪ್ರಗತಿಪರ ಕೃಷಿಯಿಂದ ಆದಾಯ ಹೆಚ್ಚಿಸಿಕೊಳ್ಳಬೇಕು. ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ.

    | ಶಶಾಂಕ ಹೆಗಡೆ ಶೀಗೆಹಳ್ಳಿ, ಟಿಎಸ್​ಎಸ್ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts