More

    ವೇತನ ಪಾವತಿಗೆ ಆಂಬುಲೆನ್ಸ್ ಸಿಬ್ಬಂದಿ ಗಡುವು

    ಚಿತ್ರದುರ್ಗ: ಜಿಲ್ಲಾದ್ಯಂತ ಆರೋಗ್ಯ ಕವಚ 108ರಡಿ 24 ಅಂಬುಲೆನ್ಸ್ ಸಿಬ್ಬಂದಿಗೆ ಕಳೆದ ಡಿಸೆಂಬರ್‌ನಿಂದ ಈವರೆಗೂ ವೇತನ ಪಾವತಿಯಾಗಿಲ್ಲ ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಹೇಳಿದರು.
    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಕಾಲಕ್ಕೆ ವೇತನ ಪಾವತಿ ಆಗದೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆಗೆ ಶಾಶ್ವತ ಪರಿಹಾರವೂ ಸಿಕ್ಕಿಲ್ಲ. ಕಳೆದ 5 ವರ್ಷಗಳಿಂದ ಮೂರ‌್ನಾಲ್ಕು ತಿಂಗಳಿಗೊಮ್ಮೆ ಒಂದು ಸಾರಿ ವೇತನ ಪಡೆಯಲು ಪರದಾಡುವಂತಾಗಿದೆ ಎಂದರು.
    ಜಿಲ್ಲೆಯಲ್ಲಿ ಇಎಂಟಿ (ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಟೆಕ್ನಿಷಿಯನ್) ಹಾಗೂ ಪೈಲಟ್ (ಚಾಲಕರು) ಇದ್ದಾರೆ. ಈ ಮೊದಲು ಆಗಸ್ಟ್ 2022ರ ವರೆಗೆ ಇಎಂಟಿಗಳಿಗೆ 15,509 ರೂ. ಮತ್ತು ಚಾಲಕರಿಗೆ 15,731 ರೂ. ವೇತನವಿತ್ತು. 2022ರ ಸೆಪ್ಟೆಂಬರ್‌ನಲ್ಲಿ ಹೆಚ್ಚುವರಿ ವೇತನ ಸೇರಿ ಇಎಂಟಿಗೆ 36,608 ರೂ. ಮತ್ತು ಪೈಲಟ್‌ಗೆ 35,603 ರೂ. ದೊರೆಯುತ್ತಿತ್ತು ಎಂದು ತಿಳಿಸಿದರು.
    ಕಳೆದ ಸೆಪ್ಟೆಂಬರ್‌ನಿಂದ ಫೆಬ್ರವರಿ-2023ರ ವರೆಗೆ ಯಾವುದೇ ಕಾರಣ ನೀಡದೆ ಇಎಂಟಿಗಳಿಗೆ 4000 ರೂ., ಚಾಲಕರಿಗೆ 6000 ಏಕಾಏಕಿ ಕಡಿತಗೊಳಿಸಲಾಗಿದೆ. ಎರಡು ವರ್ಷದ ಹೆಚ್ಚುವರಿ ವೇತನ ಬಾಕಿ ಕೂಡ ಪಾವತಿಯಾಗಿಲ್ಲ. ಆರೋಗ್ಯ ಸಚಿವರು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರು ಮತ್ತು ಉಪನಿರ್ದೇಶಕರು ಹಾಗೂ ಸಂಸ್ಥೆ ಮುಖ್ಯಸ್ಥರು ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
    ಪ್ರತಿ ತಿಂಗಳು 5ರೊಳಗೆ ವೇತನ ಪಾವತಿಸಬೇಕೆಂದು ಆಗ್ರಹಿಸಿದ ಅವರು, 10 ದಿನದೊಳಗೆ ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ ಎಲ್ಲ ಸಿಬ್ಬಂದಿ ಸಾಮೂಹಿಕ ರಜೆ ಪಡೆದುಕೊಳ್ಳುವ ಮೂಲಕ ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.
    ಸಂಘದ ಜಿಲ್ಲಾಧ್ಯಕ್ಷ ಡಿ.ಕರಿಯಪ್ಪ, ಗೌರವಾಧ್ಯಕ್ಷ ಲೋಕೇಶ್, ಚಿತ್ರಲಿಂಗಪ್ಪ, ಶಿವಮೂರ್ತಿ, ಸುಂದರೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts