More

    ವೇಗ ಪಡೆದ ಕೆ.ಸಿ.ವ್ಯಾಲಿ 2ನೇ ಹಂತ

    ವೇಗ ಪಡೆದ ಕೆ.ಸಿ.ವ್ಯಾಲಿ 2ನೇ ಹಂತ

    ಎನ್​. ಮುನಿವೆಂಕಟೇಗೌಡ ಕೋಲಾರ
    ಜಿಲ್ಲೆಯ 6 ತಾಲೂಕು ಮತ್ತು ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕು ಸೇರಿ ಒಟ್ಟು 272 ಕೆರೆಗಳಿಗೆ ನೀರು ಹರಿಸಲು ರೂಪಿಸಿರುವ ಮಹತ್ವಾಕಾಂಕ್ಷೆ ಕೆಸಿ ವ್ಯಾಲಿ ಯೋಜನೆಯ 2ನೇ ಹಂತದ ಪೈಪ್​ಲೈನ್​ ಹಾಗೂ ಪಂಪ್​ಹೌಸ್​ ಕಾಮಗಾರಿಯು ಪ್ರಗತಿಯಲ್ಲಿದ್ದು ತಿಂಗಳೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
    ಒಂದನೇ ಹಂತದಲ್ಲಿ 126 ಕೆರೆಗಳಿಗೆ ನೀರು ಹರಿದಿದ್ದು, 2ನೇ ಹಂತದಲ್ಲಿ ಮಂಜೂರಾಗಿರುವ ಕೆರೆಗಳಿಗೆ 446.23 ಕೋಟಿ ರೂಪಾಯಿ ವೆಚ್ಚದಲ್ಲಿ ಪೈಪ್​ಲೈನ್​ ಮತ್ತು ಪಂಪ್​ಹೌಸ್​ ಕಾಮಗಾರಿ ನಡೆಯುತ್ತಿದ್ದು, ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿದೆ.


    8 ತಂಡಗಳಿಂದ ಪೈಪ್​ಲೈನ್​ ಕಾಮಗಾರಿ: ಮುದುವಾಡಿ ಮತ್ತು ಸೋಮಯಾಜನಪಲ್ಲಿ ಪಂಪ್​ಹೌಸ್​ ಕಾಮಗಾರಿಗಳು ಶೇ.50ರಷ್ಟು ಪೂರ್ಣಗೊಂಡಿದೆ. 8 ತಂಡಗಳಿಂದ ಎಂಎಸ್​ ಪೈಪ್​ಲೈನ್​ ಅಳವಡಿಸುವ ಕಾಮಗಾರಿ ನಡೆದಿದ್ದು 15 ಕಿ.ಮೀ ಸಾಗಿದೆ. ಯಲ್ದೂರು, ಕೌತನಹಳ್ಳಿ ಬಳಿ ಪಂಪ್​ಹೌಸ್​ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. ನರಸಾಪುರ ಕೆರೆಯಿಂದ ಕಲ್ವಮಂಜಲಿ ಕೆರೆ ಮತ್ತು ಉರಿಗಿಲಿ ಕೆರೆಯವರೆಗೆ ಎಚ್​ಡಿಪಿಇ ಪೈಪ್​ಲೈನ್​ ಅಳವಡಿಸುವ ಕಾಮಗಾರಿಗಳು ಪೂರ್ಣಗೊಂಡಿದೆ. ಈ ತಿಂಗಳಲ್ಲಿಯೇ ಸದರಿ ಕೆರೆಗಳಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ.

    455 ಕೋಟಿ ರೂ. ವೆಚ್ಚದ ಕಾಮಗಾರಿ: 455 ಕೋಟಿ ರೂಪಾಯಿ ವೆಚ್ಚದ ಈ ಕಾಮಗಾರಿಯನ್ನು ಆದಿತ್ಯ ಕನ್ಸ್​ಟ್ರಕ್ಷನ್​ ಕಂಪನಿ, ಶ್ರೀ ರಾವೇಂದ್ರ ಪ್ರಭಾಕರ ಶೆಟ್ಟಿ, ಡೆಂಟಾ ಪ್ರಾಪರ್ಟೀಸ್​ ಇನಾಸ್ಟ್ರಕ್ಚರ್​ ಪೆ. ಲಿಮಿಟೆಡ್​, ಜಾಯಿಂಟ್​ ವೆಂಚರ್​, 1ನೇ ದರ್ಜೆ ಗುತ್ತಿಗೆದಾರರಿಗೆ ರ್ಟನ್​ಕೀ ಆಧಾರದ ಮೇಲೆ ಅನುಮೋದಿತ ಗುತ್ತಿಗೆ ಮೊತ್ತ 446.23 ಕೋಟಿಗಳಿಗೆ ಕರಾರು ನಿರ್ವಹಿಸಲಾಗಿರುತ್ತದೆ. 2022ರ ಮೇ 18ರಂದು ಗುತ್ತಿಗೆದಾರರಿಗೆ ಕಾಮಗಾರಿ ಸ್ಥಳ ಹಸ್ತಾಂತರಿಸಲಾಗಿತ್ತು.

    11 ಮೆ.ವಾ. ವಿದ್ಯುತ್​ ಸಂಪರ್ಕ: ಜಿಲ್ಲೆಯ 222 ಕೆರೆಗಳು ಹಾಗೂ ಚಿಂತಾಮಣಿ ತಾಲೂಕಿನ 50 ಕೆರೆಗಳು ಕೆರೆಗಳಿಗೆ 2ನೇ ಹಂತದ ಯೋಜನೆಯಿಂದ ನೀರು ಹರಿಸುವ ಯೋಜನೆ ಇದಾಗಿದೆ. 9 ಕಡೆಗಳಲ್ಲಿ ಪಂಪ್​ಹೌಸ್​ ನಿರ್ಮಿಸಿ ಪೈಪ್​ಲೈನ್​ ಮೂಲಕ ಎತ್ತರದ ರಿಡ್ಜ್​ ಪಾಯಿಂಟ್​ಗೆ ಪಂಪ್​ ಮಾಡಿ ಅಲ್ಲಿಂದ ಗುರುತ್ವಾಕರ್ಷಣದ ಆಧಾರದ ಮೇರೆಗೆ ನೀರು ಹರಿಸಲಾಗುವುದು. ಇದಕ್ಕೆ ಸುಮಾರು 11 ಮೆಗಾವಾಟ್​ ವಿದ್ಯುತ್​ ಸಂಪರ್ಕ ಅವಶ್ಯಕತೆಯಿದೆ. ವಿದ್ಯುತ್​ ಅಳವಡಿಕೆ ಮತ್ತು ಪಂಪ್​ ಮೋಟಾರ್​ ಅಳವಡಿಸಿದ ಬಳಿಕ 272 ಕೆರೆಗಳಿಗೆ ನೀರು ಹರಿಯಲಿದೆ. ಅವಿಭಜಿತ ಕೋಲಾರ ಜಿಲ್ಲೆಯ ಕೆರೆಗಳ ಅಂತರ್ಜಲ ಈ ಯೋಜನೆ ಅನುಕೂಲವಾಗಲಿದೆ. ಕೋಲಾರ ತಾಲೂಕಿನ 45, ಶ್ರೀನಿವಾಸಪುರ 73, ಮಾಲೂರು 33, ಬಂಗಾರಪೇಟೆ 17, ಮುಳಬಾಗಿಲು 42, ಕೆಜಿಎಫ್​ 12, ಚಿಂತಾಮಣಿ 52 ಒಟ್ಟು ಸೇರಿ 272 ಕೆರೆಗಳಿಗೆ 2ನೇ ಹಂತದ ಯೋಜನೆಗೆ ಒಳಪಟ್ಟಿವೆ.

    ಕಳೆದ ವರ್ಷದ ಮೇ ತಿಂಗಳಲ್ಲಿ ಕಾಮಗಾರಿ ಆರಂಭವಾಗಿದ್ದು ಡಿಸೆಂಬರ್​ ಅಂತ್ಯದವರೆಗೆ ಮಳೆಯಿದ್ದ ಕಾರಣ ಕಾಮಗಾರಿ ವಿಳಂಬವಾಯಿತು. ಆದಷ್ಟು ಬೇಗ ಪಂಪ್​ಹೌಸ್​ ಮತ್ತು ಪೈಪ್​ಲೈನ್​ ಕಾಮಗಾರಿ ಪೂರ್ಣಗೊಳಿಸಲಾಗುವುದು. ವಿದ್ಯುತ್​ ಸಂಪರ್ಕದ ಬಳಿಕ ಕೆರೆಗಳಿಗೆ ನೀರು ಹರಿಸಲಾಗುವುದು. ಶ್ರೀನಿವಾಸಪುರ ಪಟ್ಟಣದಲ್ಲಿ ಪೈಪ್​ಲೈನ್​ ಅಳವಡಿಕೆ ಕಾಮಗಾರಿ ವಿಳಂಬವಾಗುತ್ತಿದೆ. ಉಳಿದಂತೆ ಎಲ್ಲ ತಾಲೂಕುಗಳಲ್ಲಿ ಅಳವಡಿಸಲಾಗುತ್ತಿರುವ ಪೈಪ್​ಲೈನ್​ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತ ತಲುಪಿದೆ. ರವಿಸೂರನ್​
    ಸಣ್ಣ ನೀರಾವರಿ ಕಾರ್ಯಪಾಲಕ ಅಭಿಯಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts