More

    ವೆಚ್ಚ ಮಂಜೂರಾತಿ ಸಮಿತಿ ರದ್ದತಿಗೆ ಕ್ರಮ

    ಬೆಳಗಾವಿ: ಜಿಪಂ ಸಿಇಒ, ವೈದ್ಯಾಧಿಕಾರಿಗಳು ಇರುವ ಜಿಲ್ಲಾ ಮಟ್ಟದ ಆರೋಗ್ಯ ಚಿಕಿತ್ಸಾ ವೆಚ್ಚದ ಮಂಜೂರಾತಿ ಸಮಿತಿಯಿಂದಲೇ ನೌಕರರ ವೈದ್ಯಕೀಯ ವೆಚ್ಚ ಪಾವತಿಸಲು ವಿಳಂಬವಾಗುತ್ತಿದೆ ಎಂದು ದೂರು ಬರುತ್ತಿವೆ. ಈ ಕುರಿತು ಜಿಪಂನಿಂದ ಮಾಹಿತಿ ಪಡೆದು, ಪರಿಶೀಲನೆ ನಡೆಸಿ ಸಮಿತಿಯನ್ನೇ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

    ಜಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 2ನೇ ಜಂಟಿ ಸಮಾಲೋಚನಾ ಸಭೆಯಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಗದೀಶ ಪಾಟೀಲ ಅವರು ಸಮಿತಿ ಕುರಿತಾಗಿ ದೂರು ನೀಡಿದ ಹಿನ್ನೆಲೆಯಲ್ಲಿ ಡಿಸಿ ಪ್ರತಿಕ್ರಿಯಿಸಿದರು.

    ಎಲ್ಲೂ ಇಲ್ಲ ಸಮಿತಿ: ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಇಂತಹ ಸಮಿತಿ ರಚನೆ ಮಾಡಿಲ್ಲ. ಈ ಕುರಿತು ಸರ್ಕಾರವೂ ಯಾವುದೇ ಆದೇಶ ಹೊರಡಿಸಿಲ್ಲ. ಆದರೂ, ಬೆಳಗಾವಿ ಜಿಲ್ಲೆಯಲ್ಲಿ ಸಮಿತಿ ರಚಿಸಿದ್ದಾರೆ. ಇದರಿಂದಾಗಿ ನೌಕರರು ಚಿಕಿತ್ಸಾ ವೆಚ್ಚ ಪಡೆದುಕೊಳ್ಳಲು ಸಮಸ್ಯೆ ಅನುಭವಿಸುವಂತಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ತಕ್ಷಣವೇ ಈ ಸಮಿತಿ ರದ್ದುಪಡಿಸಿ ನೌಕರರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಜಗದೀಶ ಪಾಟೀಲ ಒತ್ತಾಯಿಸಿದರು.

    ವಿಶೇಷ ಭತ್ಯೆ ನೀಡಿ: ಎರಡು ವರ್ಷದಿಂದ ಕೋವಿಡ್-19 ತುರ್ತು ಸಂದರ್ಭದಲ್ಲಿ ದಿನದ ಹೆಚ್ಚಿನ ಸಮಯ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೋವಿಡ್ ವಿಶೇಷ ಭತ್ಯೆ ಮಂಜೂರು ಮಾಡಬೇಕು. ಬೇರೆ ಜಿಲ್ಲೆಗಳಲ್ಲಿ ಸಿಬ್ಬಂದಿ ಬಡ್ತಿ ಪ್ರಕ್ರಿಯ ಆರಂಭವಾಗಿದೆ. ಆದರೆ, ಜಿಲ್ಲೆಯಲ್ಲಿ ಯಾವುದೇ ಪ್ರಕ್ರಿಯೆಗಳೇ ನಡೆಯುತ್ತಿಲ್ಲ. ಒಂದೇ ಹುದ್ದೆಗಳಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಬಡ್ತಿ ನೀಡಿ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ನೌಕರರು ವಿನಂತಿಸಿದರು.

    ಚಾಲಕರ ಸಂಘಕ್ಕೆ ಜಮೀನು: ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ.ಗ್ರಾಮದಲ್ಲಿ ಸರ್ಕಾರಿ ವಾಹನ ಚಾಲಕರಿಗೆ ನೀಡಲ್ಪಟ್ಟಿರುವ 2 ಎಕರೆ ಜಮೀನನ್ನು ರಾಜ್ಯ ಸರ್ಕಾರಿ ವಾಹನ ಚಾಲಕರ ಕೇಂದ್ರ ಸಂಘದ ಜಿಲ್ಲಾ ಶಾಖೆ ಹೆಸರಿಗೆ ನೋಂದಾಯಿಸಲು ಕ್ರಮ ವಹಿಸಲಾಗುವುದು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಸೂಚನೆ ನೀಡಲಾಗುವುದು ಎಂದು ಡಿಸಿ ಎಂ.ಜಿ. ಹಿರೇಮಠ ಇದೇವೇಳೆ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾಧಿಕಾರಿ ಗೌರಿಶಂಕರ ಕಡೆಚೂರು, ವಿವಿಧ ಇಲಾಖೆಯ ಅಧಿಕಾರಿಗಳು, ಸಂಘದ ಪದಾಧಿಕಾರಿಗಳು ಇದ್ದರು.

    ನಕಲಿ ಪತ್ರಕರ್ತರಿಗೆ ಲಗಾಮು ಹಾಕಿ: ಬೆಳಗಾವಿ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಪತ್ರಕರ್ತರ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದಾರೆ. ಕೆಲವರು ಬ್ಲಾೃಕ್‌ಮೇಲ್ ಮಾಡುತ್ತಿದ್ದಾರೆ. ಇದರಿಂದಾಗಿ ಕಚೇರಿಗಳಲ್ಲಿ ನೌಕರರು ಕೆಲಸ ಮಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ವಿನಾಕಾರಣ ಕರ್ತವ್ಯಕ್ಕೆ ಅಡ್ಡಿಪಡಿಸುವ ಕೆಲಸ ನಡೆಯುತ್ತಿದೆ. ಇಂತಹ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಹಿರೇಮಠ, ಸರ್ಕಾರಿ ನೌಕರರಿಗೆ ಬ್ಲಾೃಕ್‌ಮೇಲ್ ಮಾಡುವವರು ಮತ್ತು ನಕಲಿ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗುವುದು ಎಂದರು.

    ಸೇವಾ ಪುಸ್ತಕದ ನಕಲು ಪ್ರತಿ, ಹಿಂಬಾಕಿ ನೀಡಲು ಶಿಕ್ಷಕರ ಮನವಿ: ಶಿಕ್ಷಕರ ಸೇವಾ ಕಾಲಮಿತಿ, ವಿಶೇಷ ಬಡ್ತಿಗಳನ್ನು ವಿಳಂಬವಾಗಿ ಅಪ್‌ಡೇಟ್ ಮಾಡುತ್ತಿರುವುದರಿಂದ ಅರಿಯರ್ಸ್ ಬರುತ್ತಿಲ್ಲ. ಪ್ರಭಾರಿ ಮುಖ್ಯ ಶಿಕ್ಷಕರ ಭತ್ಯೆಯೂ ಮಂಜೂರಾಗುತ್ತಿಲ್ಲ. ಬಿಎಲ್‌ಒ ಆಗಿ ಕಾರ್ಯನಿರ್ವಹಿಸಿದ ಶಿಕ್ಷಕರಿಗೆ ಗಳಿಕೆ ರಜಾ ಸೇವಾ ಪುಸ್ತಕದಲ್ಲಿಯೂ ಮಂಜೂರಾಗಿಲ್ಲ. ಶಿಕ್ಷಕರ ಸೇವಾ ಪುಸ್ತಕ ಹಾಗೂ ಎಚ್‌ಆರ್‌ಎಂಎಸ್‌ನಲ್ಲಿ ವ್ಯತ್ಯಾಸ ಇರುವುದರಿಂದ ಇದನ್ನು ಸರಿಪಡಿಸಲು ಹಾಗೂ ಶಿಕ್ಷಕರಿಗೆ ಸೇವಾ ಪುಸ್ತಕದ ನಕಲು ಪ್ರತಿ ನೀಡಬೇಕು. ಅಲ್ಲದೆ, ಪಾವತಿಯಾಗದೆ ಉಳಿದಿರುವ ಹಿಂಬಾಕಿ ವೇತನವನ್ನು ಆರ್ಥಿಕ ವರ್ಷದಲ್ಲಿ ಪಾವತಿಸಬೇಕು ಎಂದು ಶಿಕ್ಷಕರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಹಿರೇಮಠ, 15 ದಿನಗಳಲ್ಲಿ ಶಿಕ್ಷಕರ ಈ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts