More

    ವೃತ್ತಿ ಕೌಶಲದಿಂದ ಯಶಸ್ಸು ಸಾಧ್ಯ

    ಬೆಳಗಾವಿ: ಕಲಿತ ವಿದ್ಯೆ ಬದುಕಿನಲ್ಲಿ ಶಾಶ್ವತವಾಗಿರುತ್ತದೆ. ಯಾವುದೇ ಕ್ಷೇತ್ರವಿರಲಿ ಕೌಶಲದಿಂದ ಮಾತ್ರ ಯಶಸ್ಸು ಸಿಗುತ್ತದೆ. ಆದ್ದರಿಂದ ಕೌಶಲ ಹೆಚ್ಚಿಸಿಕೊಳ್ಳಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಕರೆ ನೀಡಿದರು.

    ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್‌ನಲ್ಲಿ ಸೋಮವಾರ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ವಿದ್ಯೆ ಸಮಾಜದ ಏಳಿಗೆಗೆ ಬಳಕೆಯಾಗಬೇಕು. ಸಹೋದರ ಭಾವದೊಂದಿಗೆ ನಾವೆಲ್ಲರೂ ಒಟ್ಟಾಗಿ ಮುನ್ನಡೆಯಬೇಕು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕ ಪ್ರಪ್ರಥಮವಾಗಿ ಅನುಷ್ಠಾನಗೊಳಿಸಿದೆ. ಯುವ ಸಮುದಾಯ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಸ್ವಾತಂತ್ರ್ಯದ ಶತಮಾನೋತ್ಸವ ವೇಳೆಗೆ ಭಾರತವನ್ನು ಜಗತ್ತಿನ ಅತ್ಯಂತ ಬಲಿಷ್ಠ ದೇಶವಾಗಿ ಹೊರಹೊಮ್ಮಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಸರ್ಕಾರದ ಯೋಜನೆಗಳ ಸಹಭಾಗಿತ್ವದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಕಳೆದ 75 ವರ್ಷಗಳಲ್ಲಿ ಇದು ಸಾಬೀತಾಗಿದೆ. ಕರೊನಾ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದೆ. ಇಡೀ ಜಗತ್ತಿಗೆ ಕೋವಿಡ್ ಲಸಿಕೆ ಒದಗಿಸಿದೆ. ನವ ಪದವೀಧರರು ಮುಂಬರುವ ದಿನಗಳಲ್ಲಿ ಕ್ರೀಡೆ ಮತ್ತು ಕಲಾಕ್ಷೇತ್ರದಲ್ಲಿ ತೊಡಗಿಸಿಕೊಂಡು ದೈಹಿಕ, ಮಾನಸಿಕವಾಗಿ ಸದೃಢರಾಗಿ ಇರಬೇಕು. ಪರಿಸರ ಮಾಲಿನ್ಯ ಮತ್ತು ಅಸಮತೋಲನ ನಿರ್ವಹಣೆಗಾಗಿ ನಿರಂತರ ಪ್ರಯತ್ನ ಮಾಡಬೇಕು. ಶಿಕ್ಷಣ ಮತ್ತು ನೈತಿಕ ಮೌಲ್ಯವು ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಲಿ ಎಂದು ಹಾರೈಸಿದರು.

    ಘಟಿಕೋತ್ಸವ ಭಾಷಣ ಮಾಡಿದ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಬಿ.ತಿಮ್ಮೇಗೌಡ, ಆಯಾ ಕಾಲಕ್ಕೆ ಎದುರಾಗುವ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಜತೆಗೆ ಬದುಕುವ ಕಲೆ ಕಲಿಸುವುದೇ ಶಿಕ್ಷಣದ ಗುರಿಯಾಗಿದೆ. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸುವುದು ಸಾಧ್ಯ. ಕಲಿತ ವಿಷಯದ ಜ್ಞಾನವಷ್ಟೇ ಇದ್ದರೆ ಸಾಲದು, ಸಂದರ್ಭಕ್ಕೆ ಅನುಗುಣವಾಗಿ ಅದನ್ನು ಬಳಸುವುದೂ ಗೊತ್ತಿರಬೇಕು. ಅಂದಾಗ ಮಾತ್ರ ಶಿಕ್ಷಣದ ಉದ್ದೇಶ ಈಡೇರುತ್ತದೆ ಎಂದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ವಿವಿ ನೂತನ ಕ್ಯಾಂಪಸ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ ಎಂದರು.

    ಪ್ರದವಿ ಪ್ರದಾನ: ಸ್ನಾತಕೋತ್ತರ ವಿದ್ಯಾರ್ಥಿಗಳಾದ ಬಾಗಲಕೋಟೆ ಬಸವೇಶ್ವರ ಕಲಾ ಕಾಲೇಜಿನ ವಿದ್ಯಾರ್ಥಿನಿ ಶಶಿಕಲಾ ನಿಗರಿಗೆ 2 ಚಿನ್ನದ ಪದಕ, 1 ಕ್ಯಾಷ್ ಪ್ರೈಜ್ ಹಾಗೂ ಪದವಿ ಪ್ರದಾನ ಮಾಡಲಾಯಿತು. ಬೆಳಗಾವಿಯ ಕೆ.ಎಲ್.ಎಸ್. ಗೋಗಟೆ ಕಾಲೇಜಿನ ವಾಣಿಜ್ಯ ವಿಭಾಗದ ಶ್ವೇತಾ ಪಾಟೀಲ, ಜಮಖಂಡಿ ತುಂಗಳ ಬೇಸಿಕ್ ಅಪ್ಲಿಕೇಶನ್ ಕಾಲೇಜಿನ ಬಿ.ಎಸ್.ಸಿ. ವಿಭಾಗದ ಶ್ರೀದೇವಿ ಅರಕೇರಿ, ಬೆಳಗಾವಿ ರಾಣಿ ಚನ್ನಮ್ಮ ವಿವಿ ಸಮಾಜಶಾಸ್ತ್ರ ವಿಭಾಗದ ಲಕ್ಷ್ಮೀ ಮಗದುಮ, ಬಾಗಲಕೋಟೆ ಬಿ.ವಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜಿನ ಎಂಬಿಎ ವಿಭಾಗದ ಗುರಮ್ಮ ಬಳೆಗಾರ, ಜಮಖಂಡಿ ಬ್ಲೆಡ್ಸ್ ವಾಣಿಜ್ಯ, ಕಲಾ ಆ್ಯಂಡ್ ಸೈನ್ಸ್ ಕಾಲೇಜಿನ ಪ್ರಿಯಾಂಕ ಮಗದುಮ, ರಾಮದುರ್ಗದ ಸಿ.ಎಸ್.ಬಿ. ಕಾಲೇಜಿನ ಇಂಗ್ಲಿಷ್ ವಿಭಾಗದ ಮುಸ್ಕಾನ್ ಮುಲ್ಲಾ, ಹಾರೂಗೇರಿ ಎಸ್.ಪಿ.ಎಂ ಕಾಲೇಜಿನ ಕಲಾ ವಿಭಾಗದ ಸವಿತಾ ಕೊಳ್ಳೆನ್ನವರ, ಶ್ರೀ ಸಿದ್ದೇಶ್ವರ ಕಲಾ, ವಾಣಿಜ್ಯ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಕ್ರಾಂತಿ ಪೂಜೇರಿ ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಮಾಸ್ಟರ್ ಆಫ್ ಕಾಮರ್ಸ್ ವಿಭಾಗದ ಪೂಜಾ ಪರಸನ್ನವರಗೆ ಪದವಿ ಪ್ರದಾನ, ತಲಾ ಒಂದು ಚಿನ್ನದ ಪದಕ ನೀಡಲಾಯಿತು.

    ರಾಣಿ ಚನ್ನಮ್ಮ ವಿವಿ ಕುಲಸಚಿವೆ ರಾಜಶ್ರೀ ಜೈನಾಪುರ, ಮೌಲ್ಯಮಾಪನ ಕುಲಸಚಿವ ಪ್ರೊ. ಶಿವನಾಂದ ಗೊರನಾಳೆ, ಹಣಕಾಸು ಅಧಿಕಾರಿ ಪ್ರೊ. ಎಸ್.ಬಿ. ಆಕಾಶ, ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ವಿವಿಧ ವಿಭಾಗಗಳ ಡೀನ್, ವಿಭಾಗ ಮುಖ್ಯಸ್ಥರು, ವಿದ್ಯಾರ್ಥಿಗಳು ಮತ್ತು ಪಾಲಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts