More

    ವೃತ್ತಿಗೆ ಕಪ್ಪುಚುಕ್ಕೆ ಬರದಂತೆ ಕರ್ತವ್ಯ ನಿರ್ವಹಿಸಿ

    ಧಾರವಾಡ: ಕರೊನಾ ಸೋಂಕಿತರ ನೆರವಿಗಾಗಿ ಸರ್ಕಾರ ಉಚಿತ ಚಿಕಿತ್ಸೆ ಹಾಗೂ ಇತರ ಕ್ರಮ ಕೈಗೊಂಡಿದೆ. ಆಸ್ಪತ್ರೆಗಳು ಸರ್ಕಾರ ನಿಗದಿಗೊಳಿಸಿರುವ ದರಕ್ಕಿಂತ ಹೆಚ್ಚು ಹಣ ಪಡೆದು ವೈದ್ಯ ವೃತ್ತಿಗೆ ಕಪ್ಪುಚುಕ್ಕೆ ತಂದುಕೊಳ್ಳಬಾರದು. ಸೋಂಕಿತರ ಚಿಕಿತ್ಸೆಗೆ ಸರ್ಕಾರ ಕೈಗೊಂಡ ನಿರ್ಧಾರಗಳಿಗೆ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮನವಿ ಮಾಡಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನೇಮಕಗೊಂಡ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಕೆಪಿಎಂಇ ಕಾಯ್ದೆಯಡಿ ನೋಂದಾಯಿತ ಜಿಲ್ಲೆಯ ಆಸ್ಪತ್ರೆಗಳು ತಮ್ಮಲ್ಲಿನ ಶೇ. 50ರಷ್ಟು ಬೆಡ್, ಐಸಿಯು ಮತ್ತು ವೆಂಟಿಲೇಟರ್ ಬೆಡ್​ಗಳನ್ನು ಸರ್ಕಾರಕ್ಕೆ ಮೀಸಲಿಡಬೇಕು. ಕೋವಿಡ್ ಸೋಂಕಿತರನ್ನು ರೆಫರಲ್ ಮೂಲಕ ಕಳುಹಿಸಿದಾಗ ಖಾಸಗಿ ಆಸ್ಪತ್ರೆಯವರು ಬೆಡ್, ಐಸಿಯು ಇಲ್ಲ ಎನ್ನುವಂತಿಲ್ಲ. ನೋಡಲ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಆಸ್ಪತ್ರೆಗಳು ನಿರ್ದಿಷ್ಟ ಅಧಿಕಾರಿಯನ್ನು ನೇಮಿಸಬೇಕು ಎಂದರು.

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಈ ಸಂದರ್ಭದಲ್ಲಿ ಲಾಭ ಲೆಕ್ಕಿಸದೆ ವೈದ್ಯ ವೃತ್ತಿಯಲ್ಲಿರುವ ಪ್ರತಿಯೊಬ್ಬರೂ ಮಾನವೀಯತೆಯಿಂದ ನೆರವಾಗಬೇಕು. ಸರ್ಕಾರಗಳ ನಿರ್ಧಾರಗಳಿಗೆ ಬೆಂಬಲ ನೀಡಬೇಕು ಎಂದರು.

    ಉಚಿತ ಚಿಕಿತ್ಸೆ: ಸರ್ಕಾರದ ರೆಫರೆಲ್ ಮೂಲಕ ಖಾಸಗಿ ಆಸ್ಪತ್ರೆಯಲ್ಲಿ ಪಡೆಯಲು ಪಡೆಯಲು ಸೋಂಕಿತರ ಆಧಾರ ಕಾರ್ಡ್ ಮತ್ತು ಕೋವಿಡ್ ಪಾಸಿಟಿವ್ ವರದಿ ಬೇಕು. ಅಂಥವರಿಗೆ ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಸಚಿವ ಶೆಟ್ಟರ್ ತಿಳಿಸಿದರು.

    ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಪಂ ಸಿಇಒ ಡಾ. ಬಿ. ಸುಶೀಲಾ , ಪೊಲೀಸ್ ಆಯುಕ್ತ ಲಾಭೂರಾಮ, ಎಸ್ಪಿ ಪಿ. ಕೃಷ್ಣಕಾಂತ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಬೆಡ್​ಗಳ ನಿರ್ವಹಣೆಗೆ ನೇಮಕವಾಗಿರುವ ನೋಡಲ್ ಅಧಿಕಾರಿ ದೀಪಿಕಾ ಬಾಜಪೇಯಿ, ಉಪವಿಭಾಗಾಧಿಕಾರಿ ಡಾ. ಬಿ. ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಕಿಮ್್ಸ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಡಿಮ್ಹಾನ್ಸ್ ಮುಖ್ಯ ಆಡಳಿತಾಧಿಕಾರಿ ಷಣ್ಮುಖ, ನಿರ್ದೇಶಕ ಡಾ. ಮಹೇಶ ದೇಸಾಯಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಆರ್​ಸಿಎಚ್​ಒ ಡಾ. ಎಸ್.ಎಂ. ಹೊನಕೇರಿ, ಡಾ. ಶಶಿ ಪಾಟೀಲ, ಜಿಪಂ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಬಿ.ಎಸ್. ಮೂಗನೂರಮಠ, ವಿವಿಧ ಇಲಾಖೆಗಳ ಅಧಿಕಾರಿಗಳು, ಆಸ್ಪತ್ರೆಗಳ ಮುಖ್ಯಸ್ಥರು, ಇತರರು ಇದ್ದರು.

    97 ಮದುವೆಗೆ ಪರವಾನಗಿ

    ನವಲಗುಂದ: ತಾಲೂಕಿನಲ್ಲಿ 97 ಮದುವೆಗೆ ಪರವಾನಗಿ ನೀಡಲಾಗಿದೆ ಎಂದು ತಹಸೀಲ್ದಾರ್ ಪ್ರಕಾಶ ಹೊಳೆಯಪ್ಪಗೋಳ ಹೇಳಿದರು. ಮಿನಿ ವಿಧಾನಸೌಧದ ತಹಸೀಲ್ದಾರ್ ಸಭಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ 87 ನವಲಗುಂದ ಪಟ್ಟಣದಲ್ಲಿ 18 ಮದುವೆಗಳಿಗೆ ಅನುಮತಿ ನೀಡಲಾಗಿದೆ. ಒಂದು ವೇಳೆ ಮದುವೆ, ಸಮಾರಂಭ ಪರವಾನಗಿ ಪಡೆಯದೆ ನಡೆಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.16 ಗ್ರಾಮ ಪಂಚಾಯಿತಿಗಳಲ್ಲಿ 37 ಗ್ರಾಮಗಳಿಗೆ 8 ಜನ ನೋಡಲ್ ಅಧಿಕಾರಿಗಳು ನವಲಗುಂದ ಪಟ್ಟಣಕ್ಕೆ 10 ಜನರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಯಾವುದೇ ತೊಂದರೆ ಆದಲ್ಲಿ ತಹಸೀಲ್ದಾರ್ ಕೋವಿಡ್ ಸಹಾಯವಾಣಿ ಸಂಖ್ಯೆ: 08380229240 ಗೆ ನೇರವಾಗಿ ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರು.

    ಮಾಸ್ಕ್ ಹಾಕದ್ದಕ್ಕೆ ದಂಡ

    ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಶುಕ್ರವಾರ ಅವಳಿ ನಗರದಲ್ಲಿ ಮಾಸ್ಕ್ ಧರಿಸದ 94 ಜನರಿಗೆ 23,250 ರೂಪಾಯಿ ಹಾಗೂ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದ 174 ಜನರಿಗೆ 34,800 ರೂಪಾಯಿ ದಂಡ ವಿಧಿಸಲಾಗಿದೆ. ಒಟ್ಟು 598 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಹನಗರ ಪಾಲಿಕೆ ವತಿಯಿಂದ ಮಾಸ್ಕ್ ಧರಿಸದ ಐವರಿಗೆ 1250 ರೂಪಾಯಿ ಹಾಗೂ ಪರಸ್ಪರ ಅಂತರ ನಿರ್ವಹಣೆ ಮಾಡದ 35 ಜನರಿಗೆ 7000 ರೂಪಾಯಿ ದಂಡ ಹಾಕಲಾಗಿದೆ.

    ಸಹಾಯ ಪಡೆಯಿರಿ

    ಕರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಸಹಾಯವಾಣಿ (08047168111) ಆರಂಭಿಸಿದ್ದು, ಚಿಕಿತ್ಸೆಗೆ ಬೆಡ್ ಸಿಗದ ಸಂದರ್ಭದಲ್ಲಿ ಸೋಂಕಿತರ ಸಂಬಂಧಿಕರು ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಧಾರವಾಡದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಹಾಯವಾಣಿ ಸೇವೆ ದಿನದ 24 ಗಂಟೆ ಲಭ್ಯವಿದ್ದು, ಉಪ ವಿಭಾಗಾಧಿಕಾರಿ ನೋಡಲ್ ಅಧಿಕಾರಿಗಳಾಗಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಬೆಡ್ ಮಾಹಿತಿಯನ್ನು ಈ ಸಹಾಯವಾಣಿ ಮೂಲಕ ಪಡೆಯಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts