More

    ವೀರಶೈವ ಸಂಸ್ಕಾರದಿಂದ ಜೀವನದ ಉನ್ನತಿ  – ರಂಭಾಪುರಿ ಜಗದ್ಗುರುಗಳ ಅಭಿಮತ -ಜನಜಾಗೃತಿ ಧರ್ಮ ಸಮಾವೇಶ

    ದಾವಣಗೆರೆ: ವೀರಶೈವ ಧರ್ಮದ ಸಂಸ್ಕಾರಗಳು ಮಾನವ ಜೀವನದ ಉನ್ನತಿ ಹಾಗೂ ಶ್ರೇಯಸ್ಸಿಗೆ ಕಾರಣವಾಗಿವೆ ಎಂದು ರಂಭಾಪುರಿ ಜಗದ್ಗುರು ಶ್ರೀ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
    ನಗರದ ಅಭಿನವ ರೇಣುಕ ಮಂದಿರದಲ್ಲಿ ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಹಮ್ಮಿಕೊಂಡಿರುವ ಜನಜಾಗೃತಿ ಧರ್ಮ ಸಮಾವೇಶದ ಶುಕ್ರವಾರದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಮನುಷ್ಯನಲ್ಲಿ ಆತ್ಮಬಲ ಬೆಳೆಯಲು ಆಧ್ಯಾತ್ಮದ ಹಸಿವು ಬೇಕು. ಸಂಪತ್ತು ಬೆಳೆದಂತೆ ಸಭ್ಯತೆ ಮತ್ತು ಸಂಸ್ಕೃತಿ ಎಲ್ಲರಲ್ಲಿ ಬೆಳೆಯುವ ಅವಶ್ಯಕತೆಯಿದೆ. ಧರ್ಮದಲ್ಲಿ ಮಾರ್ಗವಿದೆ, ವೇಗವಿಲ್ಲ. ವಿಜ್ಞಾನದಲ್ಲಿ ವೇಗವಿದೆ ಮಾರ್ಗವಿಲ್ಲ. ಇವೆರಡರ ಸಮನ್ವಯದಿಂದ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದು ತಿಳಿಸಿದರು.
    ಅಂತರಂಗ ಬಹಿರಂಗ ಶುದ್ದಿಗೆ ಆದ್ಯತೆ ಕೊಟ್ಟ ವೀರಶೈವ ಧರ್ಮ ಸಂವೇದನಾಶೀಲ ಆದರ್ಶವನ್ನು ಹೊಂದಿದೆ. ವೀರಶೈವ ಧರ್ಮಕ್ಕೂ ಒಂದು ಸಂವಿಧಾನವಿದೆ. ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥ್ಥಲಗಳೇ ತತ್ವತ್ರಯಗಳಾಗಿವೆ. ಇವುಗಳ ಆಚರಣೆಯಿಂದ ಮಾನವ ಜೀವನ ಉಜ್ವಲವಾಗಲಿದೆ ಎಂದು ರೇಣುಕ ಗೀತೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟಪಡಿಸಿದ್ದಾರೆ ಎಂದರು.
    ಜನಸೇವಾ ಶಿರೋಮಣಿ ಪ್ರಶಸ್ತಿ ಸ್ವೀಕರಿಸಿದ ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕಿ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರೂ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಮುಖ್ಯವಾಗಿ ಮಕ್ಕಳು ಮೊಬೈಲ್ ಗೀಳಿನಿಂದ ಹೊರಬಂದು ಯೋಗ, ಪ್ರಾಣಾಯಾಮ-ಧ್ಯಾನದಲ್ಲಿ ತೊಡಗಬೇಕು. ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳು ಭದ್ರವಾಗಿ ನೆಲೆಗೊಂಡಾಗ ಆರೋಗ್ಯದಲ್ಲೂ ಸದೃಢತೆ ಹೊಂದಬಹುದು ಎಂದು ತಿಳಿಸಿದರು.
    ಆರೋಗ್ಯ ಸಬಲೀಕರಣ ಎಸ್.ಎಸ್.ಕೇರ್ ಟ್ರಸ್ಟ್‌ನ ಪ್ರಮುಖ ಗುರಿಯಾಗಿದ್ದು ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಮಹಿಳೆಯರು ಸಕ್ಕರೆ ಕಾಯಿಲೆ ಹಾಗೂ ಕ್ಯಾನ್ಸರ್‌ನಂತಹ ಕಾಯಿಲೆಗಳ ಬಗ್ಗೆ ಜಾಗೃತರಾಗಬೇಕು. ಪ್ರತಿವರ್ಷ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
    ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಧರ್ಮ ಮತ್ತು ಸಂಸ್ಕೃತಿ ಮರೆಯುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕೃತಿ ಅವಶ್ಯಕ ಎಂದರು.
    ಅಮ್ಮಿನಭಾವಿ ಅಭಿನವ ಶಾಂತಲಿಂಗ ಶಿವಾಚಾರ್ಯ ಶ್ರೀಗಳು ಮಾತನಾಡಿ, ಮಾನವ ಜೀವನದ ಉತ್ಕರ್ಷತೆಗೆ ಕಾರಣವಾಗಿರುವ ಧರ್ಮ ಮತ್ತು ಆಚರಣೆಯ ಅರಿವನ್ನು ಪಡೆಯಲು ಮುಂದಾಗಬೇಕು. ಧರ್ಮದ ದೋಣಿಗೆ ರಂಧ್ರ ಕೊರೆಯುವ ಕೆಲಸವನ್ನು ಯಾರೂ ಮಾಡಬಾರದು. ವೀರಶೈವ ಧರ್ಮದಲ್ಲಿರುವ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯ ಅರಿತು ಬಾಳಬೇಕೆಂದರು.
    ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ ನೇತೃತ್ವ ವಹಿಸಿದ್ದರು. ಮಾಜಿ ಶಾಸಕ ಮಹಿಮ ಪಟೇಲ್, ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಕಂಚಿಕೇರಿ ಸುಶೀಲಮ್ಮ, ಮಹಿಳಾ ಸಮಾಜದ ಅಧ್ಯಕ್ಷೆ ನೀಲಗುಂದ ಜಯಮ್ಮ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಡಿ.ಎಚ್.ಯು.ಸಿ.ಬಿ. ಬ್ಯಾಂಕ್ ಉಪಾಧ್ಯಕ್ಷೆ ಜಯಮ್ಮ, ವೀರಶೈವ ಮಹಾಸಭಾ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷೆ ಜ್ಯೋತಿ ರಾಧೇಶ್ ಜಂಬಿಗಿ, ದಾವಣಗೆರೆ ಅರ್ಬನ್ ಕೋ-ಆಪ್ ಬ್ಯಾಂಕ್ ನಿರ್ದೇಶಕಿ ಅಂದನೂರು ಅರ್ಚನಾ ರುದ್ರಮುನಿ ಇದ್ದರು. ಬಾದಾಮಿ ಮಲ್ಲಿಕಾರ್ಜುನ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts