More

    ವೀರರಾಣಿ ಕಿತ್ತೂರು ಚನ್ನಮ್ಮ ಮೆಗಾ ನಾಟಕಕ್ಕೆ ಅದ್ಭುತ ಸ್ಪಂದನೆ

    ಬೆಳಗಾವಿ: ಸ್ವಾತಂತ್ರೃ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮಳ ಜೀವನಾಧಾರಿತ ‘ಚನ್ನಮ್ಮ ಮೆಗಾ ನಾಟಕ ಪ್ರದರ್ಶನ’ಕ್ಕೆ ಹೆಚ್ಚಿನ ಸ್ಪಂದನೆ ಸಿಗುತ್ತಿದ್ದು, ಪ್ರತಿ ಪ್ರದರ್ಶನಕ್ಕೆ 35 ರಿಂದ 40 ಸಾವಿರ ಜನರು ಭಾಗಹಿಸುತ್ತಿದ್ದಾರೆ ಎಂದು ಧಾರವಾಡ ರಂಗಾಯಣ ಪ್ರಧಾನ ನಿರ್ದೇಶಕ ರಮೇಶ ಎಸ್.ಪರವಿನಾಯ್ಕರ ತಿಳಿಸಿದರು.

    ನಗರದ ಸಿಪಿಇಡಿ ಮೈದಾನದಲ್ಲಿ ಬುಧವಾರ ವಿಜಯಾ ಆರ್ಥೋ ಮತ್ತು ಟ್ರಾಮಾ ಸೆಂಟರ್ ( ವಿಒಟಿಸಿ) ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೂವರೆ ತಿಂಗಳ ಅವಧಿಯಲ್ಲಿ ಚನ್ನಮ್ಮ ಮೆಗಾ ನಾಟಕ 16 ಪ್ರದರ್ಶನ ಕಂಡಿದೆ. ಬೆಳಗಾವಿ ನಗರದ ಸಿಪಿಇಡಿ ಮೈದಾನದಲ್ಲಿ ಫೆ.23 ಮತ್ತು 24ರಂದು 17 ಮತ್ತು 18ನೇ ಪ್ರದರ್ಶನ ನಡೆಯಲಿದೆ. ನಾಟಕ ವೀಕ್ಷಣೆಗಾಗಿ 20 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

    ಧಾರವಾಡ ರಂಗಾಯಣ ಮತ್ತು ವಿಒಟಿಸಿ ನೇತೃತ್ವದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಳ ಹೋರಾಟ ದಿನಗಳನ್ನು ನೆನಪಿಸುವ ಈ ನಾಟಕ ನಗರದಲ್ಲಿ ಎರಡು ದಿನಗಳ ಕಾಲ ಸಂಜೆ 5.20ರಿಂದ ರಾತ್ರಿ 8.40ಗಂಟೆಯವರೆಗೆ ಪ್ರದರ್ಶನಗೊಳ್ಳಲಿದೆ. ಆನೆ, ಕುದುರೆ, ಒಂಟೆ ಸೇರಿದಂತೆ 250ಕ್ಕೂ ಅಧಿಕ ಕಲಾವಿದರು ವಿವಿಧ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಒಂದು ವರ್ಷ ಸಂಶೋಧಕರು, ಹಿರಿಯ ರಂಗಭೂಮಿ ಕಲಾವಿದರು, ಚಿಂತಕರ ಸತತ ಪರಿಶ್ರಮದ ಫಲವಾಗಿ ಚನ್ನಮ್ಮ ನಾಟಕ ಸಿದ್ಧಪಡಿಸಲಾಗಿದೆ. ಸರ್ಕಾರವು ಅನುದಾನ ನೀಡುವುದಾಗಿ ಭರವಸೆ ನೀಡಿದೆ. ಆದರೆ, ಇಲ್ಲಿಯವರೆಗೆ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದರು.

    ನಗರದ ವಿಜಯಾ ಆರ್ಥೋ ಮತ್ತು ಟ್ರಾಮಾ ಸೆಂಟರ್ ( ವಿಒಟಿಸಿ)ನಿರ್ದೇಶಕ ಡಾ.ರವಿ ಬಿ. ಪಾಟೀಲ ಮಾತನಾಡಿ, ಚನ್ನಮ್ಮಳ ಇತಿಹಾಸವನ್ನು ಪ್ರತಿಯೊಬ್ಬರಿಗೆ ತಿಳಿಸುವ ಉದ್ದೇಶದಿಂದಲೇ ಬೆಳಗಾವಿ ನಗರದಲ್ಲಿ ಎರಡು ದಿನಗಳ ಕಾಲ ಚನ್ನಮ್ಮ ಮೆಗಾ ನಾಟಕ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಅದರ ಸಂಪೂರ್ಣ ಖರ್ಚು ವೆಚ್ಚವನ್ನು ವಿಒಟಿಸಿ ಭರಿಸಲಿದೆ. ಉಚಿತವಾಗಿ ಪ್ರದರ್ಶನಗೊಳ್ಳುತ್ತಿರುವುದರಿಂದ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಗದಗ ತೋಂಟದಾರ್ಯ ಸಂಸ್ಥಾನಮಠ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಡಾ. ಅಲ್ಲಮ್ಮಪ್ರಭು ಸ್ವಾಮೀಜಿ, ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಇತರರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಕೀಲ ಬಸವರಾಜ ರೊಟ್ಟಿ ಇತರರಿದ್ದರು.

    ನಗರದ ಸಿಪಿಇಡಿ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವೀರರಾಣಿ ಕಿತ್ತೂರು ಚನ್ನಮ್ಮಳ ಜೀವನಾಧಾರಿತ ಚನ್ನಮ್ಮ ಮೆಗಾ ನಾಟಕವನ್ನು ಪ್ರತಿಯೊಬ್ಬರೂ ವೀಕ್ಷಣೆ ಮಾಡಬೇಕು. ಯುವ ಸಮುದಾಯಕ್ಕೆ ಈ ನಾಟಕ ಹೆಚ್ಚಿನ ಪ್ರೇರಣೆ ನೀಡಲಿದೆ.
    | ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹುಕ್ಕೇರಿ ಹಿರೇಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts