More

    ವಿ ನೀಡ್ ಎಮರ್ಜೆನ್ಸಿ ಹಾಸ್ಪಿಟಲ್

    ಸುಭಾಸ ಧೂಪದಹೊಂಡ ಕಾರವಾರ

    ಅಂಕೋಲಾದಲ್ಲಿ ಸೋಮವಾರ ನಡೆದ ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ ಅವರ ಕಾರು ಅಪಘಾತ ಉತ್ತರ ಕನ್ನಡ ಜಿಲ್ಲೆಗೆ ತುರ್ತು ಚಿಕಿತ್ಸೆ ಆಸ್ಪತ್ರೆ ತುರ್ತಾಗಿ ಬೇಕು ಎಂಬ ಕೂಗನ್ನು ಮತ್ತಷ್ಟು ಹೆಚ್ಚಿಸಿದೆ.

    ಅಪಘಾತ ನಡೆದ 30 ರಿಂದ 40 ಕಿ.ಮೀ. ವ್ಯಾಪ್ತಿಯಲ್ಲಿ ಸುಸಜ್ಜಿತ ತುರ್ತು ಚಿಕಿತ್ಸೆ ಆಸ್ಪತ್ರೆ ಇದ್ದರೆ ಸಚಿವರ ಪತ್ನಿ ವಿಜಯಾ ಹಾಗೂ ಆಪ್ತ ಕಾರ್ಯದರ್ಶಿ ದೀಪಕ ಅವರ ಜೀವ ಉಳಿಸಬಹುದಿತ್ತೇನೋ ಎಂಬ ಚರ್ಚೆಯೂ ನಡೆದಿದೆ. ಜಾಲತಾಣಗಳಲ್ಲಿ ಹ್ಯಾಷ್ ಟ್ಯಾಗ್​ನೊಂದಿಗೆ ‘ವಿ ನೀಡ್ ಎಮರ್ಜೆನ್ಸಿ ಹಾಸ್ಪಿಟಲ್’ ಸಂದೇಶ ಮತ್ತೆ ಮುನ್ನೆಲೆಗೆ ಬಂದಿದೆ.

    ಉತ್ತರ ಕನ್ನಡವು ರಾಜ್ಯದ ಅತಿ ದೊಡ್ಡ ಜಿಲ್ಲೆಗಳಲ್ಲಿ ಒಂದು. ತಿರುವಿನ ಹೆದ್ದಾರಿಗಳಿರುವ ಕಾರಣ ಪದೇಪದೆ ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. 2020ರಲ್ಲೇ 218 ಕ್ಕೂ ಹೆಚ್ಚು ಗಂಭೀರವಾದ ಅಪಘಾತಗಳು ಸಂಭವಿಸಿವೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಆರೋಗ್ಯ ಸೌಲಭ್ಯ ವೃದ್ಧಿಯಾಗಿಲ್ಲ. ಟ್ರಾಮಾ ಸೆಂಟರ್, ವೆಂಟಿಲೇಟರ್ ಸೇರಿ ಹಲವು ಅಗತ್ಯ ಸೌಲಭ್ಯಗಳಿಲ್ಲ. ರಸ್ತೆ ಅಪಘಾತಗಳು, ಹೃದಯಾಘಾತದಂಥ ಸಂದರ್ಭಗಳಲ್ಲಿ ಇಲ್ಲಿನ ರೋಗಿಗಳನ್ನು ತುರ್ತು ಚಿಕಿತ್ಸೆಗಾಗಿ ದೂರದ ಉಡುಪಿ, ಗೋವಾದ ಬಾಂಬೋಲಿಂ, ಶಿವಮೊಗ್ಗ ಅಥವಾ ಹುಬ್ಬಳ್ಳಿಗೆ ಕೊಂಡೊಯ್ಯಬೇಕಾಗಿದೆ. ಯಾವುದೇ ಆಸ್ಪತ್ರೆಗೆ ತೆರಳುವುದಿದ್ದರೂ ಕನಿಷ್ಠ 100 ಕಿ.ಮೀ. ಪ್ರಯಾಣ ಅನಿವಾರ್ಯ ಎಂಬ ಪರಿಸ್ಥಿತಿ ಇದೆ. ತುರ್ತು ಚಿಕಿತ್ಸೆ ಸಿಗದೇ ಎಷ್ಟೋ ಜೀವಗಳು ಬಲಿಯಾದ ಉದಾಹರಣೆಗಳಿವೆ. ಲಾಕ್​ಡೌನ್ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಗಡಿಯನ್ನು ಬಂದ್ ಮಾಡಲಾಗಿತ್ತು. ಆಗ ಜಿಲ್ಲೆಯ ಜನ ಆರೋಗ್ಯ ಸೌಲಭ್ಯಕ್ಕಾಗಿ ಅಕ್ಷರಶಃ ಅಂಗಲಾಚುವ ಪರಿಸ್ಥಿತಿ ನಿರ್ವಣವಾಗಿತ್ತು.

    ನಿರಂತರ ಅಭಿಯಾನ: 2016ರಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಕಾರವಾರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಪ್ರಾರಂಭವಾದರೂ ಕೆಲವು ಸಲಕರಣೆ, ಮುಖ್ಯವಾಗಿ ತಜ್ಞ ವೈದ್ಯರ ಕೊರತೆ ಕಾಡುತ್ತಿದೆ. ಇದರಿಂದ ಜಿಲ್ಲೆಗೆ ತುರ್ತು ಚಿಕಿತ್ಸೆ ಆಸ್ಪತ್ರೆ ಬೇಕು ಎಂಬ ಕೂಗು 2019ರಲ್ಲಿ ಕೇಳಿ ಬಂದಿತ್ತು. ಜಿಲ್ಲೆಯ ಯುವಕರು ‘ವಿ ನೀಡ್ ಎಮರ್ಜೆನ್ಸಿ ಹಾಸ್ಪಿಟಲ್’ ಎಂಬ ಅಭಿಯಾನವನ್ನು ಜಾಲತಾಣಗಳಲ್ಲಿ ನಡೆಸಿದ್ದರು. ಪರಿಣಾಮ ಆಗಿನ ಸಿಎಂ ಎಚ್.ಡಿ.

    ಕುಮಾರಸ್ವಾಮಿ ಸಹ ಜಿಲ್ಲೆಗೆ ಸೌಲಭ್ಯ ಒದಗಿಸುವುದಾಗಿ ಉತ್ತರ ನೀಡಿದ್ದರು. ಆದರೆ, ಇದುವರೆಗೂ ಸೌಲಭ್ಯ ಮಾತ್ರ ಸಿಕ್ಕಿಲ್ಲ. ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ. ಈಗ ಕಾರವಾರ ಸರ್ಕಾರಿ ಮೆಡಿಕಲ್ ಕಾಲೇಜ್​ಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಒಪ್ಪಿಕೊಂಡಿದ್ದು, 120 ಕೋಟಿ ರೂ.ಗಳ ಸೌಲಭ್ಯ ಒದಗಿಸಲು ಕಡತ ಮಂಡಿಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದು ಕಾರವಾರ ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

    ರಾಜಕೀಯ ಇಚ್ಛಾ ಶಕ್ತಿಯ ಕೊರತೆ
    ಜಿಲ್ಲೆಯಲ್ಲಿ ಆರೋಗ್ಯ ಸೌಲಭ್ಯ ವೃದ್ಧಿಸುವಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಐದೈದು ಬಾರಿ ಆಯ್ಕೆಯಾದ ಸಂಸದರು. ಇಬ್ಬರು ಹಿರಿಯ ರಾಜಕಾರಣಿಗಳು ಉನ್ನತ ಹುದ್ದೆ ಅಲಂಕರಿಸಿದ್ದರೂ ಜಿಲ್ಲೆಯ ಜನರ ಜೀವ ರಕ್ಷಣೆಗೆ ಕನಿಷ್ಠ ಸೌಲಭ್ಯ ಕೈಗೊಳ್ಳದೇ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

    ವೈದ್ಯರು ಬೇಕು
    ಸೂಪರ್ ಸ್ಪೆಷಾಲಿಟಿ ಉಪಕರಣಗಳನ್ನು ಒದಗಿಸಬಹುದು. ಆದರೆ, ಅಷ್ಟೇ ಸೂಪರ್​ಸ್ಪೆಷಲಿಸ್ಟ್ ವೈದ್ಯರ ಅವಶ್ಯಕತೆಯೂ ಇದೆ ಎಂಬುದು ಹಿರಿಯ ವೈದ್ಯರ ಅಭಿಪ್ರಾಯ. ಸಾಕಷ್ಟು ಸೂಪರ್​ಸ್ಪೆಷಲಿಸ್ಟ್ ವೈದ್ಯರಿದ್ದರೂ ಅವರು ಸಣ್ಣ ಪಟ್ಟಣಗಳಲ್ಲಿ ಕೆಲಸ ಮಾಡಲು ಇಚ್ಛಿಸುವುದಿಲ್ಲ. ನರ ರೋಗ, ಹೃದ್ರೋಗ ಮುಂತಾದ ವಿಭಾಗಗಳಲ್ಲಿ ಪರಿಣತ ವೈದ್ಯರನ್ನು ಇಲ್ಲಿಗೆ ಕರೆತಂದಲ್ಲಿ ಜನರಿಗೆ ತುರ್ತು ಚಿಕಿತ್ಸೆ ಸಿಗಬಹುದು ಎನ್ನುತ್ತಾರೆ ಸರ್ಕಾರಿ ಮೆಡಿಕಲ್ ಕಾಲೇಜ್​ನ ನಿರ್ದೇಶಕ ಡಾ. ಗಜಾನನ ನಾಯಕ.

    ಜಿಲ್ಲೆಯ ಇನ್ನೆಷ್ಟು ಜೀವಗಳು ಬಲಿಯಾಗಬೇಕು…? ಸೂಪರ್ ಸ್ಪೆಷಾಲಿಟಿ ಎಮರ್ಜೆನ್ಸಿ ಹಾಸ್ಪಿಟಲ್ ಸೌಲಭ್ಯ ಒದಗಿಸುವಂತೆ ಶಾಸಕಿ ರೂಪಾಲಿ ನಾಯ್ಕ ಅವರು ಮಾಡಿದ ಪ್ರಯತ್ನಕ್ಕೆ ಸಿ.ಎಂ. ಬಿ.ಎಸ್. ಯಡಿಯೂರಪ್ಪ ಸ್ಪಂದಿಸಿರುವುದು ಸ್ವಾಗತಾರ್ಹ. ಆದರೆ, ಶೀಘ್ರದಲ್ಲಿ ಈ ಸೌಲಭ್ಯಗಳನ್ನು ಜಿಲ್ಲೆಗೆ ಒದಗಿಸಲು ಕ್ರಮ ವಹಿಸಬೇಕು.
    | ಶುಭಂ ಕಳಸ ಸಾಮಾಜಿಕ ಕಾರ್ಯಕರ್ತ ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts