More

    ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ

    ಬೆಳಗಾವಿ: ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾರಾಮ್ ಮೋಹನರಾಯ್ ಅವರು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಸಾಮಾಜಿಕ ಅನಿಷ್ಟಗಳು, ಮೂಢನಂಬಿಕೆಗಳನ್ನು ಬಲವಾಗಿ ವಿರೋಧಿಸಿ, ಅವುಗಳನ್ನು ತೊಲಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹಿರಿಯ ಸಾಹಿತಿ, ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ಗುರುದೇವಿ ಹುಲ್ಲೆಪ್ಪನವರಮಠ ಹೇಳಿದರು.

    ರಾಜಾರಾಮ್ ಮೋಹನರಾಯ್ ಅವರ 250ನೇ ಜನ್ಮ ದಿನಾಚರಣೆ, ಗ್ರಂಥಾಲಯ ಸಪ್ತಾಹ ಅಂಗವಾಗಿ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಹಿಳಾ ಸಬಲೀಕರಣ ಉಪನ್ಯಾಸ, ಜಾಗೃತಿ ಜಾಥಾ’ ಉದ್ಘಾಟನೆಯಲ್ಲಿ ಅವರು ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ರಾಮಕೃಷ್ಣ ಮರಾಠೆ ಮಾತನಾಡಿ, ರಾಜಾರಾಮ್ ಮೋಹನರಾಯ್ ಗ್ರಂಥಾಲಯ ಪ್ರತಿಷ್ಠಾನದಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

    ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಅವರು ಮಹಿಳಾ ಸಬಲೀಕರಣದಲ್ಲಿ ಶಿಕ್ಷಣದ ಮಹತ್ವ ಮತ್ತು ಮಕ್ಕಳ ಹಕ್ಕುಗಳ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್ ಗ್ರಂಥಾಲಯಗಳ ಮಹತ್ವ ಮತ್ತು ಓದುವಿಕೆಯ ಬಗ್ಗೆ ತಿಳಿಸಿದರು. ಗ್ರಂಥಾಲಯ ಉಪನಿರ್ದೇಶಕ ರಾಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜಾರಾಮ್ ಮೋಹನರಾಯ್ ಗ್ರಂಥಾಲಯ ಪ್ರತಿಷ್ಠಾನದ ವಿವಿಧ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಮಕ್ಕಳು ಗ್ರಂಥಾಲಯದ ಸದ್ಬಳಕೆ ಮಾಡಿಕೊಂಡು ಯಶಸ್ಸು ಗಳಿಸಬೇಕು ಎಂದರು. ರಾಮಯ್ಯ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಜಾಥಾಗೆ ಚಾಲನೆ ನೀಡಿದರು. ಜಾಥಾವು ಸಂಗೊಳ್ಳಿ ರಾಯಣ್ಣ ವೃತ್ತ, ಜಿಲ್ಲಾಧಿಕಾರಿ ಕಚೇರಿ ಆವರಣದ ಮೂಲಕ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಬಂದು ಮುಕ್ತಾಯವಾಯಿತು. ಜಾಥಾದಲ್ಲಿ ನಗರದ ಶಾಲಾ- ಕಾಲೇಜುಗಳ ಸುಮಾರು 300ಕ್ಕೂ ಅಧಿಕ ಮಕ್ಕಳು, ಸಾರ್ವಜನಿಕರು, ಓದುಗರು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ, ಪ್ರಮಾಣ ಪತ್ರ ಮತ್ತು ಪುಸ್ತಕ ನೀಡಲಾಯಿತು. ಎ.ಎ. ಕಾಂಬಳೆ ಸ್ವಾಗತಿಸಿದರು. ಇ.ಎನ್.ಅಂಬೇಕರ ನಿರೂಪಿಸಿದರು. ಪ್ರಕಾಶ ಇಚಲಕರಂಜಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts