More

    ವಿವಿಯಲ್ಲಿ ಆಂತರಿಕ ಸಂಪನ್ಮೂಲ ಸದ್ದು! : ಕಳೆದ ವರ್ಷ ಸಿಂಡಿಕೇಟ್ ಸಭೆಯಲ್ಲಿ ತೀವ್ರ ವಿರೋಧ 28 ಕೋಟಿ ರೂ., ಕಟ್ಟಡ ಬಳಕೆಗೆ ಆಕ್ಷೇಪ

    ತುಮಕೂರು : ವಿಶ್ವವಿದ್ಯಾಲಯದಲ್ಲಿ ಮತ್ತೆ ‘ಆಂತರಿಕ ಸಂಪನ್ಮೂಲ’ ಬಳಕೆ ವಿಚಾರ ಮುನ್ನೆಲೆಗೆ ಬಂದಿದೆ.
    ಕಳೆದ ವರ್ಷ ಸಿಂಡಿಕೇಟ್ ಸಭೆಯಲ್ಲಿ ಹೊಸ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೈಬಿಡಲಾಗಿದ್ದು, ಈ ವರ್ಷ ಮತ್ತೆ ‘ಬಜೆಟ್’ ಪ್ರಸ್ತಾವನೆಯಲ್ಲಿ ಇಣುಕಿದೆ.

    ಬಿದರಕಟ್ಟೆ ಬಳಿ ತುಮಕೂರು ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಕರೊನಾ ಗ್ರಹಣ ಹಿಡಿದಿದ್ದು ರಾಜ್ಯ ಸರ್ಕಾರ ಈ ಹಿಂದೆ ಮಂಜೂರು ಮಾಡಿರುವ ಹಣವನ್ನೇ ಈವರೆಗೆ ಬಿಡುಗಡೆ ಮಾಡಿಲ್ಲ. ಹಾಗಾಗಿ, ವಿವಿಯು ಹೊಸ ಕ್ಯಾಂಪಸ್ ನಿರ್ಮಾಣ ಕಾಮಗಾರಿಗಳಿಗೆ ತನ್ನ ಆಂತರಿಕ ಸಂಪನ್ಮೂಲ ಬಳಸಿಕೊಳ್ಳಲು ಮುಂದಾಗಿರುವುದು ಮತ್ತೆ ವಿವಾದ ಭುಗಿಲೇಳಲು ಕಾರಣವಾಗಿದೆ.

    ಬಜೆಟ್‌ನಲ್ಲಿ ಪ್ರಸ್ತಾಪ: ಆಂತರಿಕ ಸಂಪನ್ಮೂಲವನ್ನು ಆಯಾ ಶೀರ್ಷಿಕೆಯ ಅನುಸಾರ ವಿನಿಯೋಗಿಸಬೇಕೇ ಹೊರತು ವೇತನ ಸೇರಿ ಬೇರೆ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವಂತಿಲ್ಲ. ರಾಜ್ಯ ಸರ್ಕಾರ ಕ್ಯಾಂಪಸ್ ಕಟ್ಟಡ ಕಾಮಗಾರಿಗಳಿಗೆ ಮಂಜೂರು ಮಾಡಿರುವ ಅನುದಾನವನ್ನು ಬಿಡುಗಡೆ ಮಾಡದೇ ಇರುವುದರಿಂದ ಆಂತರಿಕ ಸಂಪನ್ಮೂಲ ನಿಧಿಗೆ ವಿವಿ ಕೈ ಹಾಕಲು ಮುಂದಾಗಿದೆ.

    ಜೂ.21ರಂದು ನಡೆಯಲಿರುವ ವಿವಿ ಸಾಮಾನ್ಯ ವಿದ್ಯಾವಿಷಯಕ ಪರಿಷತ್ (ಅಕಾಡೆಮಿಕ್ ಕೌನ್ಸಿಲ್) ಸಭೆಯ ಕಾರ್ಯಸೂಚಿಯ ವ್ಯವಹಾರಿಕ ಆಯವ್ಯಯ ಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಕಳೆದ ವರ್ಷ ಮೇ 20 ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಆಂತರಿಕ ಸಂಪನ್ಮೂಲವನ್ನು ಕಟ್ಟಡ ನಿರ್ಮಾಣಕ್ಕೆ ಬಳಸದಿರುವ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಶುಲ್ಕದ ರೂಪದಲ್ಲಿ ಪಡೆದ ಹಣ ವಿದ್ಯಾರ್ಥಿಗಳಿಗೆ ಬಳಕೆಯಾಗಬೇಕು.

    ಶೈಕ್ಷಣಿಕ ಚಟುವಟಿಕೆಗಳಿಗೆ ಸದ್ಭಳಕೆ ಮಾಡಿಕೊಳ್ಳುವಂತೆ ಸಿಂಡಿಕೇಟ್ ಸದಸ್ಯರು ಪಟ್ಟು ಹಿಡಿದು ಈ ವಿಚಾರವನ್ನು ಕೈಬಿಡಲಾಗಿತ್ತು. ಈಗ ಮತ್ತೆ ಕೌನ್ಸಿಲ್ ಸಭೆ ಮುಂದೆ ಠೇವಣಿ ರೂಪದಲ್ಲಿರುವ ಸಂಪನ್ಮೂಲವನ್ನು ಕ್ಯಾಂಪಸ್ ನಿರ್ಮಾಣಕ್ಕೆ ಮೀಸಲಿರಿಸುವುದಾಗಿ ಪ್ರಸ್ತಾವನೆ ಇಡಲಾಗಿದೆ. ಕೌನ್ಸಿಲ್ ಸಭೆಯಲ್ಲಿ ಒಂದು ವೇಳೆ ಒಪ್ಪಿಗೆ ಸಿಕ್ಕಿದರೂ ಸಿಂಡಿಕೇಟ್ ಸಭೆಯಲ್ಲಿ ಈ ವಿಷಯ ಮತ್ತೆ ಚರ್ಚೆಗೆ ಬರಲಿದ್ದು ಈಗಾಗಲೇ ಒಮ್ಮೆ ವಿರೋಧಿಸಿರುವ ಸಿಂಡಿಕೇಟ್ ಸದಸ್ಯರು ಇದನ್ನು ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ. ಆದರೂ, ಈ ಸಾಹಸಕ್ಕೆ ಮತ್ತೆ ಕೈಹಾಕಿರುವುದು ಅನುಮಾನಗಳನ್ನು ಹುಟ್ಟಹಾಕಿದೆ.

    ಕರೊನಾ ಗ್ರಹಣ : ಬಿದರಕಟ್ಟೆಯ 240 ಎಕರೆಯಲ್ಲಿ ವಿವಿಯ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 130 ಕೋಟಿ ರೂ., ಮೊತ್ತದ ವಿಸ್ತೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. 80 ಕೋಟಿ ರೂ.,ಗೆ ಆಡಳಿತಾತ್ಮಕ ಅನುಮೋದನೆ ಆಗಿದೆ. 2017ರಲ್ಲಿ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು. ಪ್ರಾರಂಭದಲ್ಲಿ ರಾಜ್ಯ ಸರ್ಕಾರ 5 ಕೋಟಿ ರೂ., ನೀಡಿತ್ತು.

    ಕಾಂಗ್ರೆಸ್ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಎಚ್.ಆಂಜನೇಯ ಅವರು ವಸತಿನಿಲಯ ನಿರ್ಮಾಣಕ್ಕಾಗಿ ಇಲಾಖೆ ವತಿಯಿಂದ 17.5 ಕೋಟಿ ರೂ., ಮಂಜೂರು ಮಾಡಿದ್ದರು. ಅದಾದ ಬಳಿಕ ಸರ್ಕಾರ ಈವರೆಗೆ ಬಿಡಿಗಾಸೂ ನೀಡಿಲ್ಲ. ಸರ್ಕಾರದಿಂದ 2017-18ನೇ ಸಾಲಿನಲ್ಲಿ 10 ಕೋಟಿ ರೂ., 2018-19ನೇ ಸಾಲಿನಲ್ಲಿ 15 ಕೋಟಿ ರೂ., 2019-20ನೇ ಸಾಲಿನಲ್ಲಿ 15 ಕೋಟಿ ರೂ., ಅನುದಾನ ಮಂಜೂರಾಗಿದೆ. ಆದರೆ, ಹಣ ಮಾತ್ರ ಬಿಡುಗಡೆ ಆಗಿಲ್ಲ. ಕಳೆದ ಎರಡು ವರ್ಷಗಳಿಂದ ಕರೊನಾ ಕಾರಣದಿಂದ ವಿವಿಯ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಹಣ ನೀಡಿಲ್ಲ. ತಮ್ಮ ಅವಧಿಯಲ್ಲಿ ಹೊಸ ಕ್ಯಾಂಪಸ್‌ಗೆ ಹೋಗುವ ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಕನಸಿಗೆ ಕರೊನಾ ಅಡ್ಡಿಯಾಗಿದೆ.

    ಆಂತರಿಕ ಸಂಪನ್ಮೂಲ ಬಳಸುವ ತುರ್ತು ವಿವಿಗೆ ಇಲ್ಲ. ಸರ್ಕಾರ ಅಥವಾ ಬೇರೆ ಮೂಲಗಳಿಂದ ಹಣವನ್ನು ಹೊಸ ಕ್ಯಾಂಪಸ್ ಕಾಮಗಾರಿಗೆ ತರಲಿ. ವಿದ್ಯಾರ್ಥಿಗಳಿಂದ ಶುಲ್ಕ ರೂಪದಲ್ಲಿ ಪಡೆದಿರುವ ಹಣ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು. ಕರೊನಾದಿಂದ ಅಭಿವೃದ್ಧಿಗೆ ಹಿನ್ನಡೆಯಾಗಿರುವುದು ನಿಜ. ಹಾಗಂತ ಆಂತರಿಕ ಸಂಪನ್ಮೂಲವನ್ನು ಬಳಸಲು ನಾವು ಒಪ್ಪುವುದಿಲ್ಲ.
    ಆರ್.ಕೆ.ಶ್ರೀನಿವಾಸ್‌ಸಿಂಡಿಕೇಟ್ ಸದಸ್ಯ, ತುಮಕೂರು ವಿವಿ

    —————–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts