More

    ವಿವಿಧ ರೈಲುಗಳಿಗೆ 391 ಹೆಚ್ಚುವರಿ ಕೋಚ್ ಅಳವಡಿಕೆ

    ಮೈಸೂರು: ಪ್ರಯಾಣಿಕರ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ವಿವಿಧ ರೈಲುಗಳಿಗೆ 391 ಹೆಚ್ಚುವರಿ ಕೋಚ್ ಅಳವಡಿಸಲಾಗಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರವಾಲ್ ಹೇಳಿದರು.

    ನಗರದ ರೈಲ್ವೆ ಕ್ರೀಡಾ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾತಂತ್ರೊೃೀತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

    ಪ್ರಸಕ್ತ ವರ್ಷದ ಗಮನಾರ್ಹ ಆರ್ಥಿಕ ಸಾಧನೆ ಮಾಡಲಾಗಿದೆ. ವಿಭಾಗವು ಕೋವಿಡ್ ಪ್ರಭಾವದಿಂದಾಗಿ ಎದುರಿಸುತ್ತಿರುವ ಸವಾಲುಗಳ ಹೊರತಾಗಿಯೂ ವಿಭಾಗದಿಂದ 2.57 ದಶಲಕ್ಷ ಟನ್‌ನಷ್ಟು ಸರಕು ಸಾಗಣೆ ಮಾಡಲಾಗಿದೆ. 9.73 ದಶಲಕ್ಷ ಪ್ರಯಾಣಿಕರನ್ನು ಸಾಗಿಸುವುದರೊಂದಿಗೆ ಒಟ್ಟು 352.66 ಕೋಟಿ ರೂ. ಆದಾಯ ಗಳಿಸಿದೆ ಎಂದು ತಿಳಿಸಿದರು.

    ಪ್ರಸಕ್ತ ವರ್ಷದಲ್ಲಿ ಮೈಸೂರು ವಿಭಾಗದ ಸಮಯಪಾಲನೆಯ ಕಾರ್ಯಕ್ಷಮತೆಯು ಸುಮಾರು ಶೇ.99ರಷ್ಟಿದೆ. ಹೆಚ್ಚುವರಿ ಕಾಯ್ದಿರಿಸದ ಹಾಗೂ ಮುಂಗಡ ಕಾಯ್ದಿರಿಸುವ ಟಿಕೆಟ್ ಕೌಂಟರ್ ಮತ್ತು ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರ ಅಳವಡಿಕೆಯೊಂದಿಗೆ ಪ್ರಯಾಣಿಕರಿಗೆ ತೊಂದರೆಮುಕ್ತ ಟಿಕೆಟ್ ವಿತರಣೆ ಸಾಧ್ಯವಾಗಿದೆ ಎಂದರು.

    ಕೋವಿಡ್ ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದು, ರೈಲ್ವೆ ತನ್ನ ಬದ್ಧತೆ ಮತ್ತು ಸಮರ್ಪಿತ ಕಾರ್ಯಪಡೆಯ ಮೂಲಕ ಈ ಪ್ರಯಾಣದ ಮುಂಚೂಣಿಯಲ್ಲಿದೆ. ಪ್ರಯಾಣಿಕರ ಪ್ರಯಾಣದ ಅನುಭವ ಸುಧಾರಿಸಲು ಹಲವಾರು ಕ್ರಮ ಪ್ರಾರಂಭಿಸಲಾಗಿದೆ. ಪ್ರಯಾಣಿಕರನ್ನು ಸಾಗಿಸುವ ಎಲ್ಲ ರೈಲುಗಳ ಸೇವೆಗಳನ್ನು ಕೋವಿಡ್ ಸಾಂಕ್ರಾಮಿಕದ ಪೂರ್ವಕಾಲದ ಮಟ್ಟಕ್ಕೆ ಪುನರಾರಂಭಿಸಿರುವುದು ಉಲ್ಲೇಖಾರ್ಹವಾಗಿದೆ ಎಂದು ಹೇಳಿದರು.

    ಹೆಚ್ಚುವರಿ ಪಾರ್ಕಿಂಗ್ ಸ್ಥಳ, ಶೌಚಗೃಹ, ಕುಡಿಯುವ ನೀರು, ಬೆಳಕು, ಮಾಹಿತಿ ವ್ಯವಸ್ಥೆ ಮತ್ತು ಪ್ರದರ್ಶನ ಫಲಕ ಅಳವಡಿಸಲಾಗಿದೆ. ಸಿಸಿ ಕ್ಯಾಮರಾ ಕಣ್ಗಾವಲು ವ್ಯವಸ್ಥೆಯ ನೆರವಿನಿಂದ ದೋಷರಹಿತ ಭದ್ರತಾ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಅರಸೀಕೆರೆ, ಬೀರೂರು ಮತ್ತು ಕಡೂರು ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಸಾಮರ್ಥ್ಯದ ಆರು ಲಿಫ್ಟ್ ಅಳವಡಿಸಲಾಗಿದೆ ಎಂದು ತಿಳಿಸಿದರು.

    ಮೈಸೂರು ರೈಲು ನಿಲ್ದಾಣಕ್ಕೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಅನುಕರಣೀಯ (ಪಂಚತಾರಾ 5 ಸ್ಟಾರ್ ರೇಟಿಂಗ್) ಜತೆಗೆ ಈಟ್ ರೈಟ್ ಸ್ಟೇಷನ್ ಪ್ರಮಾಣೀಕರಣ ನೀಡಿದೆ ಎಂದರು.

    ಹಸಿರು ಹೊದಿಕೆಯನ್ನು ವಿಸ್ತರಿಸಲು ವಿವಿಧ ರೈಲ್ವೆ ಆವರಣಗಳಲ್ಲಿ 435 ಸಸಿ ನೆಡಲಾಗಿದೆ. ಜಲ ಸಂರಕ್ಷಣೆ ಜಾಗೃತಿ ಮತ್ತು ಏಕ-ಬಳಕೆಯ ಪ್ಲಾಸ್ಟಿಕ್ ತೊಡೆದುಹಾಕುವ ಅಭಿಯಾನ ಕೈಗೊಳ್ಳಲಾಗಿದೆ. ಹಾಸನ, ಅರಸೀಕೆರೆ, ದಾವಣಗೆರೆ ಮತ್ತು ಶಿವಮೊಗ್ಗ ನಿಲ್ದಾಣಗಳಲ್ಲಿ 600 ಕೆ.ಜಿ ಸಾಮರ್ಥ್ಯದ ಸಾವಯವ ತ್ಯಾಜ್ಯ ಪರಿವರ್ತಕ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.

    ಸಮರ್ಪಿತ ಮತ್ತು ಬದ್ಧತೆ ಹೊಂದಿರುವ ಸಿಬ್ಬಂದಿಯ ಯೋಗಕ್ಷೇಮವು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಪ್ರಸಕ್ತ ವರ್ಷದಲ್ಲಿ 257 ಉದ್ಯೋಗಿಗಳು ಬಡ್ತಿ ಪಡೆದರೆ, 57 ಜನರಿಗೆ ಆರ್ಥಿಕ ಉನ್ನತೀಕರಣ ನೀಡಲಾಗಿದೆ ಎಂದು ತಿಳಿಸಿದರು.

    ಮೈಸೂರು ಯಾರ್ಡ್ ಮರು ನಿರ್ಮಾಣ ಕಾರ್ಯ ಮತ್ತು ನಾಗನಹಳ್ಳಿ ಕೋಚಿಂಗ್ ಟರ್ಮಿನಲ್‌ಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮೈಸೂರು ನಿಲ್ದಾಣದಲ್ಲಿ ಜನದಟ್ಟಣೆ ಕಡಿಮೆ ಮಾಡುವುದು ಮತ್ತು ನಾಗನಹಳ್ಳಿಯಿಂದ ಮೆಮು ರೈಲು ಸೇರಿದಂತೆ ಹೊಸ ರೈಲುಗಳ ಸೇವೆಗಳನ್ನು ಪ್ರಾರಂಭಿಸಲು ದಾರಿ ಮಾಡಿಕೊಡುವುದು ಇದರ ಉದ್ದೇಶವಾಗಿದೆ ಎಂದರು.

    ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ.ಮಂಜುನಾಥ್ ಕನಮಡಿ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts