More

    ವಿವಿಧ ಘಟನೆಗಳಿಗೆ ಸಾಕ್ಷಿಯಾದ ಭಾರತ್ ಬಂದ್

    ಕೋಲಾರ: ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ಕೋಲಾರದಲ್ಲಿ ಭಾಗಶಃ ಬೆಂಬಲ ದೊರೆತಿದ್ದು, ಹೆದ್ದಾರಿ ತಡೆಗೆ ಯತ್ನಿಸಿದ ರೈತರ ಬಂಧನ, ಮಾತಿನ ಚಕಮಕಿ, ರಸ್ತೆಯಲ್ಲೇ ಅಡುಗೆ ತಯಾರಿ, ಬೈಕ್ ರ‌್ಯಾಲಿ ಸೇರಿ ವಿವಿಧ ಘಟನೆಗಳಿಗೆ ಸಾಕ್ಷಿಯಾಯಿತು.

    ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದವು, ಆದರೆ ಕೆಲಸ ಕಾರ್ಯಗಳಿಗೆಂದು ಕಚೇರಿಗೆ ಬಂದಿದ್ದ ಸಾರ್ವಜನಿಕರ ಸಂಖ್ಯೆ ಕಡಿಮೆ ಇತ್ತು. ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್, ಅಂಚೆ ಕಚೇರಿ, ಪೆಟ್ರೋಲ್ ಬಂಕ್ ಎಂದಿನಂತೆ ಕಾರ್ಯನಿರ್ವಹಿಸಿದವು.

    ಕೋಲಾರ ಬಸ್ ನಿಲ್ದಾಣ ಸೇರಿ ಎಲ್ಲ ತಾಲೂಕುಗಳಿಂದ ಬೆಂಗಳೂರು ಹಾಗೂ ತಾಲೂಕು ಕೇಂದ್ರಕ್ಕೆ ಸಂಚರಿಸುತ್ತಿದ್ದ 287 ಬಸ್‌ಗಳ ಪೈಕಿ 173 ಬಸ್ ಓಡಾಟ ನಡೆಸಿವೆ. ಬೆಳಗ್ಗೆ ಬಹುತೇಕ ಅಂಗಡಿ ಮುಂಗಟ್ಟು ಮುಚ್ಚಿದ್ದವಾದರೂ ನಗರದ ಡೂಂ ಲೈಟ್ ವೃತ್ತ, ಶಾರದಾ ಟಾಕೀಸ್ ರಸ್ತೆ, ಟೇಕಲ್ ರಸ್ತೆ, ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಹೋಟೆಲ್ ತೆರೆದಿದ್ದವು. ಮಧ್ಯಾಹ್ನದ ನಂತರ ಮತ್ತೆ ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ವಹಿವಾಟು ನಡೆಸಲಾಯಿತು.

    ಬಂಧನ: ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಸೇರಿ ವಿವಿಧ ಸಂಘಟನೆ ಮುಖಂಡರು ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಕೊಂಡರಾಜನಹಳ್ಳಿ ಬಳಿ ಹೆದ್ದಾರಿ ತಡೆಯಲು ಯತ್ನಿಸಿದಾಗ ಪೊಲೀಸರು ಅವಕಾಶ ನೀಡಲಿಲ್ಲ. ಪ್ರತಿಭಟನಾಕಾರರು ಪಟ್ಟು ಸಡಿಲಿಸದಿದ್ದಾಗ 35ರಿಂದ 40ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ ಗ್ರಾಮಾಂತರ ಠಾಣೆಗೆ ಕರೆದೊಯ್ದು ಬಿಟ್ಟು ಕಳುಹಿಸಿದರು.
    ಕೋಲಾರ ಬಸ್ ಡಿಪೋ ಮುಂದೆ ಕಾಂಗ್ರೆಸ್ ಮುಖಂಡರಾದ ಕೆ.ಜಯದೇವ್, ಊರುಬಾಗಿಲು ಶ್ರೀನಿವಾಸ್, ಇಕ್ಬಾಲ್ ಅಹಮದ್, ಮಂಜುನಾಥ್ ಮತ್ತಿತರರು ಪ್ರತಿಭಟನೆ ನಡೆಸಿದರು.

    ರೈತ ಸಂಘ, ಸಿಐಟಿಯು, ಕನ್ನಡಪರ ಸಂಘಟನೆ ಮುಖಂಡರಾದ ಕೆ.ನಾರಾಯಣಗೌಡ, ನಳಿನಿಗೌಡ, ರಾಮೇಗೌಡ, ರಮೇಶ್, ಟಿ.ಎಂ.ವೆಂಕಟೇಶ್, ಎನ್.ಎನ್.ಶ್ರೀರಾಮ್, ವಿ.ನಾರಾಯಣಸ್ವಾಮಿ, ವಿ.ಅಂಬರೀಷ್, ಕೆ.ಆರ್.ತ್ಯಾಗರಾಜ್, ಕೆ.ಶ್ರೀನಿವಾಸಗೌಡ, ಸ್ವಸ್ತಿಕ್ ಶಿವು, ಮುನ್ನಾ, ಐತಾಂಡಹಳ್ಳಿ ಮಂಜುನಾಥ್, ಚಾಂದ್‌ಪಾಷಾ, ಚಂಬೆ ರಾಜೇಶ್, ಕಲ್ವಮಂಜಲಿ ರಾಮುಶಿವಣ್ಣ, ನಾರಾಯಣಸ್ವಾಮಿ, ಪುಟ್ಟರಾಜು ಇತರರಿದ್ದರು.

    ರಸ್ತೆಯಲ್ಲೇ ಬಜ್ಜಿ, ಬೋಂಡಾ: ನಸುಕಿನಲ್ಲೇ ರಸ್ತೆಗಿಳಿದ ರೈತ ಸಂಘದ ಮುಖಂಡರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ವೃತ್ತದಲ್ಲಿ ಜಮಾಯಿಸಿ ಟಯರ್‌ಗೆ ಬೆಂಕಿ ಹಚ್ಚಲು ಮುಂದಾದರು. ಪೊಲೀಸರು ಆಕ್ಷೇಪಿಸಿದಾಗ ಮಾತಿನ ಚಕಮಕಿ ನಡೆಯಿತು. ರಸ್ತೆಯಲ್ಲೇ ಟೀ ಮಾಡಿ, ಕಡಲೆಕಾಯಿ, ಜೋಳ ಬೇಯಿಸಿ ಹಂಚಿದರು. ರೈತ ಸಂಘದ ಮಹಿಳಾ ಘಟಕ ಮುಖಂಡರು ಬಜ್ಜಿ ಬೋಂಡಾ ಮಾಡಿದರಲ್ಲದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರಿಗೆ ನಡು ರಸ್ತೆಯಲ್ಲೇ ಎಲೆ ಹಾಕಿ ಊಟ ಬಡಿಸಿ ವಿನೂತನವಾಗಿ ಪ್ರತಿಭಟಿಸಿದರು.

    ಬಸ್ ನಿಲ್ದಾಣಕ್ಕೆ ಎತ್ತಿನ ಬಂಡಿ: ರೈತ ಸಂಘಟನೆ ಹಾಗೂ ಕನ್ನಡಪರ ಸಂಘಟನೆ ಮುಖಂಡರು ಪ್ರಮುಖ ರಸ್ತೆಗಳಲ್ಲಿ ಎತ್ತಿನಬಂಡಿಗಳೊಂದಿಗೆ ಮೆರವಣಿಗೆಯಲ್ಲಿ ಬಂದು ಬಸ್ ನಿಲ್ದಾಣಕ್ಕೆ ನುಗ್ಗಿದರಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ಪ್ರಯಾಣಿಕರ ಪರದಾಟ: ಸಿಐಟಿಯು ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ರೈತ ಸಂಘದ ಅಬ್ಬಣಿ ಶಿವಪ್ಪ ನೇತೃತ್ವದ ತಂಡ ಕೆಎಸ್ಸಾರ್ಟಿಸಿ ಬಸ್ ಡಿಪೋ ಮುಂಭಾಗ ಧರಣಿ ಕುಳಿತು ಡಿಪೋ ಬಿಟ್ಟು ಬಸ್ ಹೊರಬರದಂತೆ ತಡೆ ಹಾಕಿದ್ದರು. ಇತ್ತ ನೂರಾರು ಪ್ರಯಾಣಿಕರು ಬಸ್ ಇಲ್ಲದೆ ಪರದಾಡುತ್ತಿದ್ದರು. ವೃತ್ತ ನಿರೀಕ್ಷಕ ರಂಗಶಾಮಯ್ಯ ಬಸ್ ನಿಲ್ದಾಣಕ್ಕೆ ದೌಡಾಯಿಸಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪೊಲೀಸ್ ಭದ್ರತೆಯೊಂದಿಗೆ ಬೆಂಗಳೂರು, ಹೊಸಕೋಟೆವರೆಗೆ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಮಾಲೂರು, ಕೆಜಿಎಫ್ ಇನ್ನಿತರ ತಾಲೂಕು ಕೇಂದ್ರಗಳಿಗೂ ಬಸ್ ವ್ಯವಸ್ಥೆ ಕಲ್ಪಿಸಲಾಯಿತು.

    ವಿದ್ಯಾರ್ಥಿಗಳ ಪರದಾಟ: ನಗರದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಬಂದ್ ಬಿಸಿ ತಟ್ಟಿದ್ದು, ಬಸ್‌ಗಳಿಲ್ಲದೆ ಆಟೋ ಅವಲಂಬಿಸಿ ಪರೀಕ್ಷೆ ಎದುರಿಸಲು ಪರೀಕ್ಷಾ ಕೇಂದ್ರದತ್ತ ತೆರಳಿದರು. ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಕ್ಲಾಸ್ ರದ್ದುಗೊಳಿಸಿದ್ದವು. ಪದವಿ ವಿದ್ಯಾರ್ಥಿಗಳಿಗೆ ರಜೆ ನೀಡದ ಕಾರಣ ಅನೇಕರು ನಗರಕ್ಕೆ ಬಂದು ಪರದಾಟ ಅನುಭವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts