More

    ವಿಮೆ ಪರಿಹಾರ ವಿತರಣೆಗೆ ಸಕಾಲ

    ಬಸವರಾಜ ಇದ್ಲಿ ಹುಬ್ಬಳ್ಳಿ

    ಕಳೆದ ವರ್ಷದ ಮುಂಗಾರು- ಹಿಂಗಾರು ಬೆಳೆಗಳು ಅತಿವೃಷ್ಟಿಗೆ ಕೊಚ್ಚಿ ಹೋದವು. ಈಗ ಕೈಲಿದ್ದ ಅಷ್ಟಿಷ್ಟು ಬೆಳೆ ಮಾರಾಟ ಮಾಡೋಣವೆಂದರೆ ಯೋಗ್ಯ ಬೆಲೆಯೂ ಇಲ್ಲ, ಮಾರಾಟ ಮಾಡಲೂ ಆಗುತ್ತಿಲ್ಲ. ಇನ್ನು ತಮ್ಮದೇ ಹಕ್ಕಿನ ಹಣ ಬೆಳೆವಿಮೆ ಪರಿಹಾರ ಕನ್ನಡಿಯೊಳಗಿನ ಗಂಟಾಗಿದೆ.

    ಇದು ರಾಜ್ಯದ ರೈತರ ಸದ್ಯದ ಸ್ಥಿತಿ. ಅತಿವೃಷ್ಟಿ, ನೆರೆ ಇತ್ಯಾದಿ ಕಾರಣಕ್ಕೆ ಬೆಳೆ ಕಳೆದುಕೊಂಡು ರೈತರು ಸಂಕಷ್ಟದಲ್ಲಿದ್ದಾರೆ. ಇದೀಗ ಕರೊನಾ ಸೋಂಕು ತಡೆಗಟ್ಟಲು ಹೇರಿರುವ ಲಾಕ್​ಡೌನ್ ಪರಿಣಾಮ ಅನ್ನದಾತ ಹತ್ತಾರು ಸಮಸ್ಯೆಯಲ್ಲಿ ಸಿಲುಕಿದ್ದಾನೆ. ಕಷ್ಟಗಳ ಕೋಟಲೆಯಲ್ಲಿ ಬೆಂದಿರುವ ರೈತರಿಗೆ ಬೆಳೆವಿಮೆ ಪರಿಹಾರ ಸಂಜೀವಿನಿಯಾಗಬಾರದೇಕೆ?

    ರಾಜ್ಯ ಸರ್ಕಾರ ತನ್ನ ಕರ್ತವ್ಯ ಪೂರೈಸಿ ವಿಮಾ ಕಂಪನಿಗಳ ಮೇಲೆ ಒತ್ತಡ ಹೇರಿ ರೈತರಿಗೆ ನೆರವಾಗಬೇಕು. ರೈತಪರ ಸರ್ಕಾರ ಎಂಬುದನ್ನು ರುಜುವಾತು ಮಾಡಬೇಕು, ರೈತರ ಹಕ್ಕಿನ ಹಣ ಕೊಡಿಸಬೇಕು. ಧಾರವಾಡ ಜಿಲ್ಲೆಯಲ್ಲಿ ಶೇಂಗಾ, ಹೆಸರು, ಹತ್ತಿ, ಮೆಣಸಿನಕಾಯಿ, ಸೋಯಾಬಿನ್, ಉಳ್ಳಾಗಡ್ಡಿ ಹೀಗೆ ಹಲವು ಬೆಳೆಗೆ ಮುಂಗಾರಿನಲ್ಲಿ ಬೆಳೆವಿಮೆ ಮಾಡಿಸಿದ್ದಾರೆ. ಜಿಲ್ಲೆಯೊಂದರಲ್ಲೇ 2019ರ ಮುಂಗಾರು ಹಂಗಾಮಿನಲ್ಲಿ 92,361 ರೈತರು 1.10 ಲಕ್ಷ ಹೆಕ್ಟೇರ್ ಕ್ಷೇತ್ರಕ್ಕೆ ಬೆಳೆವಿಮೆ ಮಾಡಿಸಿದ್ದು, ರೈತರು, ಕೇಂದ್ರ- ರಾಜ್ಯ ಸರ್ಕಾರದ ಪಾಲು ಸೇರಿ ಒಟ್ಟು 164.89 ಕೋಟಿ ರೂ. ಪ್ರಿಮಿಯಂ ಹಣ ಇನ್ಶೂರೆನ್ಸ್ ಕಂಪನಿಗೆ ಸಂದಾಯವಾಗಿದೆ. ಇನ್ನು ಹಿಂಗಾರು ಹಂಗಾಮಿನಲ್ಲಿ 53.43 ಕೋಟಿ ರೂ. ಪ್ರಿಮಿಯಂ ಕಟ್ಟಲಾಗಿದೆ. ಭಾರತಿ ಅಕ್ಸಾ ಜನರಲ್ ಇನ್ಶೂರೆನ್ಸ್ ಕಂಪನಿ ಈ ಬಾರಿ ಬೆಳೆವಿಮೆ ತುಂಬಿಸಿಕೊಂಡಿದೆ. ಇದೇ ರೀತಿ ರಾಜ್ಯದ ಪ್ರತಿ ಜಿಲ್ಲೆಯಿಂದ ಬೆಳೆವಿಮೆಗೆ ಸಂಬಂಧಿಸಿದ ದತ್ತಾಂಶಗಳು ಕೇಂದ್ರ ಕಚೇರಿಗೆ ತಲುಪಿವೆಯಂತೆ. ಇಷ್ಟರಲ್ಲೇ ಬೆಳೆವಿಮೆ ಪರಿಹಾರ ರೈತರ ಖಾತೆಗೆ ಬರಬೇಕಿತ್ತು. ಆದರೆ, ಲಾಕ್​ಡೌನ್ ನೆಪ ಹೇಳಿ ಮುಂದೆ ಹಾಕಲಾಗುತ್ತಿದೆ. ಬೆಳೆವಿಮೆ ಪರಿಹಾರ ಸೆಟ್​ರೈಟ್ ಮಾಡಲು ಅಧಿಕಾರಿಗಳಿಗೆ ಇದಕ್ಕಿಂತ ಉತ್ತಮ ಸಮಯ ಬೇಕೆ? ಕೇಂದ್ರ ಆರ್ಥಿಕ ಮತ್ತು ಸಾಂಖಿಕ ಇಲಾಖೆ, ಕೃಷಿ ಇಲಾಖೆ ಆಯುಕ್ತರು ಇದನ್ನೆಲ್ಲ ಸರಿಪಡಿಸಿ ಯಾವ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಹಾನಿಯಾಗಿದೆ ಎಂಬುದರ ಮಾಹಿತಿ ವಿಮಾ ಕಂಪನಿಗೆ ರವಾನಿಸಬೇಕು. ಆ ನಂತರ ವಿಮಾ ಕಂಪನಿಗೆ ಪರಿಹಾರ ಹಣ ಪಾವತಿಸಲು ಹೇಳಬೇಕು. ಈ ಕೆಲಸವನ್ನು ರಾಜ್ಯದ ಹಿರಿಯ ಅಧಿಕಾರಿಗಳು ಮಾಡುವರೆ?

    ರೈತರು ಪ್ರಿಮಿಯಂ ತುಂಬಿದ್ದಾರೆ. ಬೆಳೆ ನಷ್ಟವಾದ ಕೂಡಲೇ ಪರಿಹಾರ ಬರಬೇಕು ಎಂಬುದು ನಿಯಮ. ಪ್ರತಿ ವರ್ಷ ಬೆಳೆವಿಮೆ ಪ್ರಿಮಿಯಂ ಕಟ್ಟಿ ಪರಿಹಾರಕ್ಕೆ ಕಾಯುವುದೇ ರೈತರ ಕೆಲಸವಾಗುತ್ತಿದೆ.

    2019ರ ಮುಂಗಾರು ಬೆಳೆವಿಮೆ ಇನ್ನೂ ಬಂದಿಲ್ಲ. ಹತ್ತಿ, ಮೆಣಸಿನಕಾಯಿ, ಉಳ್ಳಾಗಡ್ಡಿ ಬೆಳೆ ಸೇರಿ ಒಟ್ಟು 40 ಸಾವಿರ ರೂ. ಬೆಳೆವಿಮೆ ಪ್ರಿಮಿಯಂ ಕಟ್ಟಿದ್ದೇನೆ. ಅತಿವೃಷ್ಟಿಗೆ ಬೆಳೆ ಕೊಚ್ಚಿ ಹೋಗಿದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಹಿಂಗಾರು ಬೆಳೆಯೂ ಅಷ್ಟಾಗಿ ಬರಲಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಈಗ ವಿಮೆ ಪರಿಹಾರ ಕೊಡದಿದ್ದರೆ ಇನ್ಯಾವಾಗ ಕೊಡುತ್ತಾರೆ?
    | ಸುಭಾಸ ಬೂದಿಹಾಳ ಕೋಳಿವಾಡ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts