More

    ವಿಮಾನ ನಿಲ್ದಾಣ ಹೆಸರಲ್ಲಿ ನೌಕರಿ ಆಮಿಷ

    ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹಾಗೂ ವಿಮಾನಯಾನ ಸಂಸ್ಥೆಗಳಲ್ಲಿ ಕೈತುಂಬ ಸಂಬಳ ನೀಡುವ ಉದ್ಯೋಗ ಖಾಲಿ ಇದೆ ಎಂದು ಫೇಸ್​ಬುಕ್, ವಾಟ್ಸ್ ಆಪ್, ಒಎಲ್​ಎಕ್ಸ್, ಮೇಲ್ ಸೇರಿದಂತೆ ವಿವಿಧೆಡೆ ನಕಲಿ ಜಾಹೀರಾತುಗಳ ಹಾವಳಿ ಹೆಚ್ಚಾಗಿವೆ.

    ‘ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ತುರ್ತು ನೇಮಕಾತಿ ಮಾಡಲಾಗುತ್ತಿದ್ದು, 22,000 ರೂ.ನಿಂದ 72,000 ರೂ.ವರೆಗೆ ಸಂಬಳ ನೀಡಲಾಗುವುದು. ಈ ಕೂಡಲೇ ಅರ್ಜಿ ಸಲ್ಲಿಸಿ’ ಎಂದು ಒಎಲ್​ಎಕ್ಸ್​ನಲ್ಲಿ ಜಾಹೀರಾತು ಪ್ರಕಟಗೊಂಡಿರುವುದು ಇದಕ್ಕೆ ತಾಜಾ ಉದಾಹರಣೆ.

    ಇದೇ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಂಚಕರು ಉದ್ಯೋಗದ ಆಮಿಷ ಒಡ್ಡುತ್ತಿರುವುದು ಬೆಳಕಿಗೆ ಬಂದಿದೆ. ಮುಗ್ಧ ವಿದ್ಯಾರ್ಥಿಗಳು, ನಿರುದ್ಯೋಗಿಗಳನ್ನು ಟಾರ್ಗೆಟ್ ಮಾಡುವ ಈ ಜಾಲ ವಾಟ್ಸ್ ಆಪ್, ಮೇಲ್​ಗೆ ಲಿಂಕ್ ಕಳುಹಿಸುವ ಮೂಲಕ ವಂಚಿಸುತ್ತಿದೆ.

    ಒಎಲ್​ಎಕ್ಸ್​ನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಹಳೇ ಟರ್ವಿುನಲ್ ಫೋಟೊದೊಂದಿಗೆ ಅಯೋಧ್ಯಾನಗರ ವಿಳಾಸದಿಂದ ಫೆ.23ರಂದು ಈ ಜಾಹೀರಾತು ಪ್ರಕಟಗೊಂಡಿದೆ. ಏರ್​ಲೈನ್ಸ್, ಏರ್​ಪೋರ್ಟ್, ಗ್ರೌಂಡ್ ಸ್ಟಾಫ್ ವಿಭಾಗದಲ್ಲಿ ತುರ್ತು ನೇಮಕಾತಿ ನಡೆದಿದ್ದು, ಹೊಸ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 22ರಿಂದ 72 ಸಾವಿರ ರೂ.ವರೆಗೆ ಸಂಬಳ ನೀಡಲಾಗುವುದು. 8, 10, 12ನೇ ತರಗತಿ, ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಸಂಬಳದ ಜತೆಗೆ ಇತರೆ ಸೌಲಭ್ಯಗಳನ್ನೂ ನೀಡಲಾಗುವುದು. ಆಸಕ್ತರು ಕೂಡಲೇ ಎಚ್​ಆರ್ ತಂಡವನ್ನು ಸಂರ್ಪಸಿ ಎಂದು ಸಂಪರ್ಕ ಕೊಂಡಿಯನ್ನೂ ನೀಡಲಾಗಿದೆ.

    ಅಭ್ಯರ್ಥಿಗಳು ಇಂತಹ ಯಾವುದೇ ಜಾಲಕ್ಕೆ ಬಲಿಯಾಗಬಾರದು. ಭಾರತೀಯ ವಿಮಾನ ನಿಲ್ದಾಣಗಳ ಅಭಿವೃದ್ಧಿ ಪ್ರಾಧಿಕಾರ (ಎಎಐ) ಅಥವಾ ಆಯಾ ವಿಮಾನಯಾನ ಸಂಸ್ಥೆಗಳ ಅಧಿಕೃತ ವೆಬ್​ಸೈಟ್ ಮೂಲಕ ಮಾತ್ರ ಪರಿಶೀಲನೆ ನಡೆಸಬೇಕು. ಎಎಐ ಯಾವುದೇ ಸ್ಥಳೀಯ ಉದ್ಯೋಗ ನೇಮಕಾತಿ ಮಾಡುವುದಿಲ್ಲ. ಎಲ್ಲವೂ ಆನ್​ಲೈನ್ ಅಧಿಕೃತ ವೆಬ್​ಸೈಟ್ ಮೂಲಕವೇ ನಡೆಯುತ್ತವೆ. ಮಾಹಿತಿಗೆ ಡಿಡಿಡಿ.ಚಚಜಿ.ಚಛ್ಟಿಟ ಸಂಪರ್ಕಿಸಬಹುದು ಎಂದು ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ್ ಠಾಕರೆ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಹಲವು ವಿದ್ಯಾರ್ಥಿಗಳಿಗೆ ವಂಚನೆ

    ಏರ್​ಪೋರ್ಟ್​ನಲ್ಲಿ ನೌಕರಿ ಕೊಡಿಸುವುದಾಗಿ ವಂಚಿಸುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಪಿಯುಸಿ, ಪದವಿ, ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲಿಂಕ್, ಜಾಹೀರಾತು ಕಳುಹಿಸುವ ಜಾಲ ಸಕ್ರಿಯವಾಗಿದೆ. ಇತ್ತೀಚೆಗಷ್ಟೇ ನಗರದ ಐಶ್ವರ್ಯ ಎಂಬ ವಿದ್ಯಾರ್ಥಿನಿಗೆ ಏರ್​ಪೋರ್ಟ್​ನಲ್ಲಿ ನೌಕರಿ ಕೊಡಿಸುವುದಾಗಿ ಮೇಲ್ ಕಳುಹಿಸಿದ್ದರು. ಆ ಮೇಲ್ ಮೂಲಕ ಸಂರ್ಪಸಿದಾಗ ಮೊದಲು ಅಪ್ಲಿಕೇಷನ್ ಶುಲ್ಕದ ಹೆಸರಲ್ಲಿ 2,000 ರೂ. ಪಡೆದಿದ್ದರು. ನಂತರ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದೇ ರೀತಿಯ ಹಲವು ವಂಚನೆಗಳು ನಡೆಯುತ್ತಲೇ ಇದ್ದು, ಪ್ರಕರಣ ದಾಖಲಿಸಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ.

    ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಅಥವಾ ಯಾವುದೇ ವಿಮಾನಯಾನ ಸಂಸ್ಥೆಗಳ ಉದ್ಯೋಗ ನೇಮಕಾತಿ ಅಧಿಕೃತ ವೆಬ್​ಸೈಟ್ ಮೂಲಕ ಮಾತ್ರ ನಡೆಯುತ್ತದೆ. ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ನಕಲಿ ಜಾಹೀರಾತು ಮತ್ತು ವಂಚಕರಿಂದ ದೂರ ಇರಬೇಕು.
    | ಪ್ರಮೋದಕುಮಾರ ಠಾಕರೆ, ನಿರ್ದೇಶಕ, ಹುಬ್ಬಳ್ಳಿ ವಿಮಾನ ನಿಲ್ದಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts