More

    ವಿಮಾನ ನಿಲ್ದಾಣ, ಐಐಟಿ ಸ್ಥಾಪನೆಗೆ ಬಿಜೆಪಿ ಅಡ್ಡಗಾಲು

    ಚನ್ನರಾಯಪಟ್ಟಣ: ಹಾಸನದಲ್ಲಿ 500 ಕೋಟಿ ರೂ.ವೆಚ್ಚದ ಮಾರುಕಟ್ಟೆ ನಿರ್ಮಾಣ, ವಿಮಾನ ನಿಲ್ದಾಣ ಹಾಗೂ ಐಐಟಿ ಸ್ಥಾಪನೆಗೆ ಬಿಜೆಪಿಯವರು ಅಡ್ಡಗಾಲು ಹಾಕಿದರು ಎಂದು ಶಾಸಕ ಎಚ್.ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದರು.

    ತಾಲೂಕಿನ ದಂಡಿಗನಹಳ್ಳಿ ಹೋಬಳಿ ಎನ್.ಬಿಂಡೆನಹಳ್ಳಿಯಲ್ಲಿ ಶ್ರೀ ಕಂಬದ ನರಸಿಂಹಸ್ವಾಮಿ ಮತ್ತು ಶ್ರೀಆಂಜನೇಯಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಹಾಗೂ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


    ರೈತರು ಬೆಳೆದ ಬೆಳೆಗೆ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿ ಮಾಡದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ವ್ಯವಸಾಯ ಮಾಡಲು ಕಷ್ಟಸಾಧ್ಯ. ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ. ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡುವ 2000 ಶಾಲೆಗಳನ್ನು ತೆರೆಯಲು ಚಿಂತನೆ ಮಾಡಲಾಗಿತ್ತು. ಇಂದಿಗೂ 50ಕ್ಕೂ ಹೆಚ್ಚು ತಾಲೂಕು ಕೇಂದ್ರಗಳಲ್ಲಿ ಕಾಲೇಜುಗಳಿಲ್ಲ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಜಿಲ್ಲೆಯ ಹಲವು ತಾಲೂಕು ಹೋಬಳಿ ಕೇಂದ್ರಗಳಲ್ಲಿ ಶಾಲಾ ಕಾಲೇಜುಗಳ ಸ್ಥಾಪನೆಗೆ ಸಹಕಾರ ನೀಡಿದರು. ಎಚ್.ಡಿ.ದೇವೇಗೌಡ ಅವರು ಹಾಸನದಲ್ಲಿ ಇಂಜಿನಿಯರಿಂಗ್, ಡಿಪ್ಲೊಮಾ ಕಾಲೇಜು ತೆರೆಯಲು ಹಾಗೂ ಮೊಸಳೆ ಹೊಸಳ್ಳಿಯಲ್ಲಿ ಇಂಜಿನಿಯರಿಂಗ್ ಕಾಲೇಜು ತೆರೆದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೇವಲ ಏಳು ಸಾವಿರ ರೂ. ಪಾವತಿಸಿ ಇಂಜಿನಿಯರಿಂಗ್ ಪದವಿ ಪಡೆಯಲು ಶಿಕ್ಷಣ ಕ್ಷೇತ್ರಕ್ಕೆ ಶಕ್ತಿ ತುಂಬಿದರು. ಹಾಸನ-ಬೆಂಗಳೂರು ರೈಲ್ವೆ ಹಾಗೂ 2700 ಕೋಟಿ ರೂ. ವೆಚ್ಚದ ಹಾಸನ-ಬೆಂಗಳೂರು 4 ಪಥದ ರಸ್ತೆ ಅಭಿವೃದ್ಧಿಗೆ ಹಾಗೂ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.

    ಬಾಲಕೃಷ್ಣ ಹಾಗೂ ರೇವಣ್ಣ ಸೇರಿಕೊಂಡು ಹೇಮಾವತಿ ಸರ್ಕಾರ ಕಾರ್ಖಾನೆಯನ್ನು ಮುಚ್ಚಿದರು ಎಂದು ಸುಳ್ಳು ಆರೋಪ ಮಾಡಿದ್ದರು. ಆದರೆ ಇಂದು ಹೇಮಾವತಿ ಸಕ್ಕರೆ ಕಾರ್ಖಾನೆ ಐದು ಸಾವಿರ ಟನ್ ಕಬ್ಬು ಅರೆಯುವಂತೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಲಾಯಿತು. ಈ ಭಾಗದ ಜನತೆ ದೇವೇಗೌಡರ ಕುಟುಂಬಕ್ಕೆ ರಾಜಕೀಯ ಶಕ್ತಿ ನೀಡಿದ್ದೀರಿ, ದೇವೇಗೌಡರ ಕುಟುಂಬದ ಜನಸೇವೆ ಪರಾಮರ್ಶಿಸಿ ಮುಂದಿನ ದಿನಗಳಲ್ಲಿ ಜನಸೇವೆ ಮಾಡಲು ಶಕ್ತಿ ನೀಡಬೇಕೆಂದು ತಿಳಿಸಿದರು.


    ವಿಧಾನ ಪರಿಷತ್ ಸದಸ್ಯರಾದ ಡಾ.ಸೂರಜ್ ರೇವಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾನು ವೈದ್ಯ ವೃತ್ತಿ ಬಿಟ್ಟು ಅನಿರೀಕ್ಷಿತ, ಆಕಸ್ಮಿಕವಾಗಿ ಜನಸೇವೆ ಮಾಡಲು ಆ ದೇವರು ಅವಕಾಶ ಮಾಡಿಕೊಟ್ಟಿದ್ದು, ಈ ಭಾಗದಲ್ಲಿ ಸುಮಾರು 20ಕ್ಕೂ ಹೆಚ್ಚು ದೇವಸ್ಥಾನಗಳನ್ನು ನಮ್ಮ ಕುಟುಂಬ ಮುತುವರ್ಜಿಯಿಂದ ಅಭಿವೃದ್ಧಿಪಡಿಸಿದೆ. ಎನ್.ಬಿಂಡೇನಹಳ್ಳಿಯಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ಶೇ.70ರಷ್ಟು ರಸ್ತೆ ಕಾಮಗಾರಿಯನ್ನು ಪೂರ್ಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಸೌಕರ್ಯಗಳನ್ನು ಒಳಗೊಂಡ ಎರಡು ಮಹಡಿಯ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಎಲ್ಲ ಜನಾಂಗದ ಅಭಿವೃದ್ಧಿಗೂ ಅನುದಾನಗಳನ್ನು ನೀಡಲಾಗಿದ್ದು, ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.


    ಆರು ಕೋಟಿ ರೂ. ವೆಚ್ಚದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಮನೆಗೂ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ನಳಸಂಪರ್ಕ ಮಾಡಲಾಗುವುದು ಎಂದರು.


    ಎಚ್‌ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಪುಟ್ಟಸ್ವಾಮಿಗೌಡ, ಆನೆಕೆರೆ ಪ್ರಥಮ ದರ್ಜೆ ಗುತ್ತಿಗೆದಾರ ಮಂಜೇಗೌಡ ನೊರನಕ್ಕಿ ಗೇಟ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಚಂದ್ರೇಗೌಡ, ಉಪಾಧ್ಯಕ್ಷ ಬಿ.ಎಸ್.ಮಂಜುನಾಥ್, ಆನೆಕೆರೆ ಪಿಎಸಿಸಿಎಸ್ ನ ಅಧ್ಯಕ್ಷ ಸತೀಶ್, ಎನ್.ಬಿಂಡೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗೀತಾ ಮಂಜುನಾಥ್, ಮುಖಂಡರಾದ ನಂಜುಂಡಪ್ಪ, ನಂಜೇಗೌಡ, ಸುರೇಶ್, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts