More

    ವಿಭಜನೆಯ ತಂತ್ರದಿಂದ ಕೆಎಂಶಿ ಆಯ್ಕೆ

    ಅರಸೀಕೆರೆ: ಸಮುದಾಯಗಳ ನಡುವಿನ ವಿಭಜನೆಯ ತಂತ್ರದಿಂದಲೇ ಶಾಸಕ ಕೆ.ಎಂ.ಶಿವಲಿಂಗೇಗೌಡ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
    ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುವ ಮಾರ್ಗಮಧ್ಯೆ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಅಧಿಕಾರ, ಸ್ಥಾನಮಾನ ಅನುಭವಿಸುವ ವೇಳೆ ಕುಟುಂಬ ರಾಜಕಾರಣದ ಅರಿವಾಗಿರಲಿಲ್ಲ. ಆದರೆ ಇದೀಗ ದಿಢೀರ್ ಜ್ಞಾನೋದಯವಾಗಿದ್ದು ಹೆಂಡತಿ, ಮಕ್ಕಳನ್ನು ವೇದಿಕೆ ಹತ್ತಿಸಿಲ್ಲವೆಂದು ಹೇಳಿಕೊಳ್ಳುತ್ತಿದ್ದಾರೆ. ಕುಟುಂಬ ಸದಸ್ಯರನ್ನು ನಾವೇನು ಕರೆಯಬೇಡಿ ಎಂದು ಹೇಳಿದ್ದೇವೆಯೇ, ನಮ್ಮ ಬಗ್ಗೆ ಅದೇನೋ ಬಿಚ್ಚಿಡುತ್ತೇನೆ ಎಂದು ಸವಾಲು ಹಾಕಿದ್ದು ಶೀಘ್ರ ಬಿಚ್ಚಿಡಲಿ, ಸ್ವೀಕರಿಸಲು ಸಿದ್ಧರಿದ್ದೇವೆ. ಇಂತಹ ಬೆದರಿಕೆಗೆ ಹೆದರುವ ಜಾಯಮಾನ ನಮ್ಮದಲ್ಲ. ಯಾವ ಸಮುದಾಯದ ಜನರು ಬಂದಿದ್ದಾರೆ ಎಂಬುದನ್ನು ಗಮನಿಸಿ ಶಾಸನ ಸಭೆಯಲ್ಲಿ ಮಾತನಾಡುವ ತಂತ್ರಗಾರಿಕೆಯ ಆಟ ನಮ್ಮ ಬಳಿ ನಡೆಯುವುದಿಲ್ಲ. ಅರಸೀಕೆರೆ ಕ್ಷೇತ್ರಕ್ಕೆ ಇಂಜಿನಿಯರಿಂಗ್ ಕಾಲೇಜು ಬೇಡವೆಂದು ಅಧಿಕಾರಿಗಳು ಹೇಳಿದರೂ ಮಂಜೂರು ಮಾಡಿಕೊಟ್ಟವರು ಯಾರು, ಎಷ್ಟು ಅನುದಾನ ಕೊಟ್ಟಿದ್ದೇನೆ ಎನ್ನುವ ಪ್ರಶ್ನೆಗೆ ಮೊದಲು ಉತ್ತರ ನೀಡಲಿ ಎಂದು ಸವಾಲು ಹಾಕಿದರು.
    ರಾಯಣ್ಣ ಪ್ರತಿಮೆಗೆ ಸಹಮತ:
    ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ನಮ್ಮ ಸಹಮತವಿದ್ದು, ಎಲ್ಲರನ್ನೂ ನಾವು ಗೌರವಿಸುತ್ತೇವೆ. ಆದರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಯಾವ ಸಮುದಾಯದ ಪರ ನಿಂತರೆ ಎಷ್ಟು ಮತಗಳು ಬರುತ್ತವೆ ಎನ್ನುವ ಲೆಕ್ಕಾಚಾರವಿಟ್ಟು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕರೆತರುವ ಕಾರ್ಯಕ್ಕೆ ಮುಂದಾಗಿದ್ದಾರೆ. ಪಕ್ಷಾತೀತ ಹಾಗೂ ಜಾತ್ಯತೀತ ಹಿನ್ನೆಲೆಯಲ್ಲಿ ರೂಪಿಸುವ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲವಿದ್ದು, ಇಂತಹ ಸಮಾರಂಭಗಳಲ್ಲಿ ಸೇರುವ ಜನರ ಗುಂಪು ಮತಗಳಾಗಿ ಪರಿವರ್ತನೆಯಾಗುವುದಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಲಿ ಎಂದು ಕುಮಾರಸ್ವಾಮಿ ಟಾಂಗ್ ನೀಡಿದರು.
    ನಿರ್ದಾಕ್ಷಿಣ್ಯ ಕ್ರಮ:
    ಪಕ್ಷವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಹಿಂದೆಮುಂದೆ ನೋಡುವುದಿಲ್ಲ. ನಗರಸಭೆಯ ಕೆಲ ಜೆಡಿಎಸ್ ಸದಸ್ಯರು ಪಕ್ಷದ ವತಿಯಿಂದ ಆಯೋಜಿಸುತ್ತಿರುವ ಸಭೆ, ಸಮರಂಭ, ಕಾರ್ಯಕ್ರಮಗಳಿಗೆ ಗೈರಾಗುತ್ತಿದ್ದಾರೆ. ಇತ್ತೀಚೆಗೆ ನಗರದಲ್ಲಿ ನಡೆದ ಬೃಹತ್ ಸ್ವಾಭಿಮಾನಿ ಸಮಾವೇಶದಿಂದಲೂ ಅಂತರ ಕಾಯ್ದುಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ಇಂತಹ ಸದಸ್ಯರ ಚಲನವಲನ ಕುರಿತು ಅಗತ್ಯ ಮಾಹಿತಿ ಸಂಗ್ರಹಿಸಲಾಗಿದೆ. ಯಾರಾದರೂ ಪಕ್ಷವಿರೋಧಿ ಕೆಲಸದಲ್ಲಿ ತೊಡಗಿಸಿಕೊಂಡಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ನೇರ ಎಚ್ಚರಿಕೆ ನೀಡಿದರಲ್ಲದೆ, ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತಿರುವ ಏಳು ಸದಸ್ಯರು ನಮ್ಮ ಜತೆಗಿದ್ದು, ವಿವಾದ ಮುಗಿದ ಅಧ್ಯಾಯವಾಗಿದೆ. ಎತ್ತಿನಹೊಳೆ ನೀರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಹರಿಯಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.

    ವಕ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ಸಯ್ಯದ್ ಸಿಕಂದರ್, ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್, ಪುರಸಭೆ ಮಾಜಿ ಅಧ್ಯಕ್ಷ ಪಿ.ದೇವಕುಮಾರ್, ತಾಪಂ ಮಾಜಿ ಸದಸ್ಯರಾದ ಹೊಸೂರು ಗಂಗಾಧರ್, ಶೇಖರನಾಯ್ಕ, ಬಸವಲಿಂಗಪ್ಪ, ಮುಖಂಡರಾದ ಹರ್ಷವರ್ಧನ್, ರಮೇಶ್, ಮಲ್ಲಿಕಾರ್ಜುನ್ ಇದ್ದರು. ನಗರಸಭೆ ಸದಸ್ಯ ಈಶಣ್ಣ ಗಂಗಾನಗರ ಬಡಾವಣೆಯ ನಿವಾಸಿಗಳನ್ನು ಒಕ್ಕಲೆಬ್ಬಿಸದಂತೆ ಮನವಿ ಪತ್ರ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts