More

    ವಿಪತ್ತು ನಿರ್ವಹಣೆಗೆ ಧರ್ಮವೇ ರಹದಾರಿ – ಶ್ರೀ ಓಂಕಾರ ಸ್ವಾಮೀಜಿ, -ಶಿವಾನುಭವ ಗೋಷ್ಠಿ 

    ದಾವಣಗೆರೆ: ಭಾರತೀಯರು ಧರ್ಮ-ಸಂಸ್ಕೃತಿ ಮಾರ್ಗದಲ್ಲಿ ನಡೆಯುತ್ತಿದ್ದು, ಎಂಥದ್ದೇ ಪ್ರಾಕೃತಿಕ ವಿಪತ್ತು ಎದುರಾದರೂ ಎದುರಿಸಲು ಸಾಧ್ಯವಾಗಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಬಾಡಾ ಕ್ರಾಸ್‌ನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 269ನೆಯ ನೂಲುಹುಣ್ಣಿಮೆ ಶಿವಾನುಭವ ಗೋಷ್ಠಿ ಹಾಗೂ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ವಿದೇಶಗಳಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ್ದು ಅಲ್ಲಿನ ಮಾನವರು ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ಕಾಪಾಡಲಿದೆ. ಭಾರತದಲ್ಲಿ ಧರ್ಮದ ಹಾದಿಯಲ್ಲಿ ನಡೆಯುತ್ತಿರುವ ಕಾರಣಕ್ಕೆ ಯಾವುದೇ ದೊಡ್ಡ ಅವಘಡವಾಗಿಲ್ಲ ಎಂದು ಹೇಳಿದರು.
    ಧರ್ಮ ಎಂದರೆ ಯುದ್ಧವಲ್ಲ. ನಮ್ಮ ಸುತ್ತಲಿನ ದೀನ-ದಲಿತರು, ಅಂಧ, ಅನಾಥರು, ಅಸಹಾಯಕರು, ಹಾಗೂ ನೊಂದವರಿಗೆ ಸ್ಪಂದಿಸುವ ಮತ್ತು ನೆರವಾಗುವುದೇ ಆಗಿದೆ. ಧರ್ಮ ಜಗತ್ತಿನ ಮೂಲಾಧಾರವಾಗಿದೆ. ಅದುವೇ ನಮ್ಮೆಲ್ಲರ ಜೀವನ ಸೂತ್ರವೂ ಆಗಿದೆ ಎಂದು ವಿಶ್ಲೇಷಿಸಿದರು.
    ನಮ್ಮ ಪೂರ್ವಜರು, ಹಿರಿಯರು, ಪಾಲಕರು ಹೇಳಿದ್ದನ್ನು ದಿನದ ಒಂದು ಹೊತ್ತು ಸ್ಮರಿಸುವುದು ಮತ್ತು ಅದನ್ನು ಅನುಸರಿಸಬೇಕು. ಮಹಾತ್ಮರ ದರ್ಶನ, ದಾನ-ಧರ್ಮ, ಗುರುಗಳನ್ನು ಗೌರವಿಸುವುದು ಇತ್ಯಾದಿಗಳಿಂದ ಭೌತಿಕ ಜೀವನದಲ್ಲಿನ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂದು ಹೇಳಿದರು.
    ಪುಟ್ಟರಾಜ ಕವಿ ಗವಾಯಿಗಳು ಅಲ್ಲದೆ ಅನೇಕ ಸಂತರು, ದಾರ್ಶನಿಕರು ಶರಣರು ಜನರಲ್ಲಿ ಆಧ್ಯಾತ್ಮಿಕ ಜ್ಞಾನ ತುಂಬಿ, ತಪಸ್ಸಿನ ಫಲದ ಮೂಲಕ ಮಹಾಬೆಳಕು ನೀಡಿ ಹೋಗಿದ್ದಾರೆ. ಮಾನವ ಕಲ್ಯಾಣ ಬಯಸುವುದೇ ಧರ್ಮದ ಉದ್ದೇಶವಾಗಿದೆ ಎಂದು ತಿಳಿಸಿದರು.
    ಇದು ಅಧಿಕ ಶ್ರಾವಣ ಮಾಸವಾಗಿದೆ. ಮೂರು ವರ್ಷಕ್ಕೊಮ್ಮೆ ಹೆಚ್ಚುವರಿ ದಿನಗಳು ಬರಲಿವೆ. ಅಧಿಕ ಮಾಸ ಸಂದರ್ಭದಲ್ಲಿ ಸೂರ್ಯನು ಫಲ ನೀಡುವುದಿಲ್ಲ. ಇದನ್ನು ಶೂನ್ಯ ಮಾಸ ಎಂದೂ ಕರೆಯಲಾಗುತ್ತದೆ. ಈ ಅವಧಿಯಲ್ಲಿ ಶುಭ ಕಾರ್ಯಗಳನ್ನು ಮಾಡುವುದು ನಿಷಿದ್ಧವಾಗಿದೆ. ಶ್ರಾವಣ ಮಾಸದಲ್ಲಿ ದಾರ್ಶನಿಕರ ಕಥೆ ಓದುವುದು, ಸಂಗೀತ ಆಸ್ವಾದಿಸಬೇಕು ಎಂದರು.
    ಪುಟ್ಟರಾಜ ಕವಿ ಗವಾಯಿಗಳ 10ನೆಯ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮ, ವೀರೇಶ್ವರ ಪುಣ್ಯಾಶ್ರಮದಲ್ಲಿ ಸೆ. 17ರಂದು ನಡೆಯಲಿದೆ. ಸಾರ್ವಜನಿಕರು, ಭಕ್ತರು ಭಾಗವಹಿಸಬೇಕೆಂದು ಹೇಳಿದರು.
    ಚಿತ್ರದುರ್ಗದ ಹಿಂದುಸ್ತಾನಿ ಗಾಯಕ ಸುಜೀತ್ ಕುಲಕರ್ಣಿ ಸಂಗೀತ ನಡೆಸಿಕೊಟ್ಟರು. ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಎ.ಎಚ್.ಶಿವಮೂರ್ತಿ ಸ್ವಾಮಿ, ಆಶ್ರಮದ ಸಹ ಕಾರ್ಯದರ್ಶಿ ಜಾಲಿಮರದ ಕರಿಬಸಪ್ಪ, ಧರಾಮ ಕಾಲೇಜು ಉಪನ್ಯಾಸಕ ಗಿರೀಶ್, ಕಿತ್ತೂರು ಕೊಟ್ರಪ್ಪ, ಬಸವನಗೌಡ ಪೊಲೀಸ್ ಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts