More

    ವಿದ್ಯುತ್ ಕಾಯ್ದೆ ತಿದ್ದುಪಡಿಗೆ ವಿರೋಧ

    ಹಾವೇರಿ: ಕೇಂದ್ರ ಸರ್ಕಾರವು 2003ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರುವ ಹಾಗೂ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣಕ್ಕೆ ಅವಕಾಶ ಮಾಡಿಕೊಡುವ ಪ್ರಸ್ತಾವನೆಯನ್ನು ಕೂಡಲೆ ಕೈಬಿಡಬೇಕು ಎಂದು ಒತ್ತಾಯಿಸಿ ಹೆಸ್ಕಾಂ ನೌಕರರ ವಿವಿಧ ಸಂಘಟನೆಗಳಿಂದ ನಗರದ ಹೆಸ್ಕಾಂ ಕಚೇರಿಯಲ್ಲಿ ಸೋಮವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.

    ಕವಿಪ್ರನಿ ನೌಕರರ ಸಂಘ, ಇಂಜಿನಿಯರ್ಸ್ ಅಸೋಸಿಯೇಷನ್, ಲೆಕ್ಕಾಧಿಕಾರಿಗಳ ಸಂಘ, ಡಿಪ್ಲೊಮಾ ಇಂಜಿನಿಯರ್ಸ್, ಎಸ್​ಸಿ, ಎಸ್​ಟಿ ಕಲ್ಯಾಣ ಸಂಸ್ಥೆ ಹಾಗೂ ನಿವೃತ್ತ ನೌಕರರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ನೌಕರರು ಕೈಗೆ ಕಪ್ಪುಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.

    ಕವಿಪ್ರನಿ ನೌಕರರ ಸಂಘದ ಉಪಕಾರ್ಯದರ್ಶಿ ವಿಜಯಕುಮಾರ ಮುದಕಣ್ಣನವರ ಮಾತನಾಡಿ, ಕೇಂದ್ರ ಸರ್ಕಾರದ ಪ್ರಸ್ತಾವಿತ 2003ರ ತಿದ್ದುಪಡಿಯು ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ ಮೂಲಕ ಖಾಸಗೀಕರಣ ಮಾಡುತ್ತಿರುವುದು ಕಾರ್ವಿುಕ ವಿರೋಧ ನೀತಿಯಾಗಿದೆ. ಇದರಿಂದ ನೌಕರರು, ರೈತರು ಹಾಗೂ ಗ್ರಾಹಕರಿಗೂ ಹೊರೆಯಾಗಲಿದೆ ಎಂದರು.

    ಕಾಯ್ದೆಗೆ ತಿದ್ದುಪಡಿ ತಂದರೆ ವಿದ್ಯುತ್ ಪ್ರಸರಣ ವ್ಯವಸ್ಥೆಯಲ್ಲಿ ಖಾಸಗಿ ಕಂಪನಿಗಳ ಕೈ ಬಲವಾಗಲಿದೆ. ಇದರಿಂದ ವಿದ್ಯುತ್ ಮಾರಾಟ, ಖರೀದಿ, ಪ್ರಸರಣ, ಸಬ್​ಲೈಸೆನ್ಸಿಂಗ್ ಹಾಗೂ ಪ್ರ್ಯಾಂಚೈಸಿ ವ್ಯವಸ್ಥೆ ಸಂಪೂರ್ಣವಾಗಿ ಖಾಸಗಿಯವರ ಪಾಲಾಗಲಿದೆ. ಹೆಸ್ಕಾಂ ನೌಕರರು ಮತ್ತು ಅಧಿಕಾರಿಗಳಿಗೆ ಈಗ ಸಿಗುವ ಸೌಲಭ್ಯಗಳು ದಮನವಾಗುತ್ತವೆ. ಬಡವರಿಗೆ, ರೈತರಿಗೆ ಉಚಿತವಾಗಿ ನೀಡುತ್ತಿರುವ ಸಬ್ಸಿಡಿ ದರದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ವಿದ್ಯುತ್ ದರ ಹೆಚ್ಚಳದ ಅಧಿಕಾರ ಖಾಸಗಿಯವರ ಪಾಲಾಗಲಿದೆ ಎಂದು ದೂರಿದರು.

    ವಿಭಾಗಾಧಿಕಾರಿ ಎಸ್. ಈರಣ್ಣ ಮಾತನಾಡಿ, ವಿದ್ಯುತ್ ನಿಯಮಾವಳಿಗಳಲ್ಲಿನ ತಿದ್ದುಪಡಿ ಸರಿಯಾದ ಕ್ರಮವಲ್ಲ. ಇದು ಕಾರ್ವಿುಕರು ಹಾಗೂ ಅಧಿಕಾರಿಗಳ ವಿರೋಧಿ ನೀತಿಯಾಗಿದೆ. ಸರ್ಕಾರ ತಕ್ಷಣ ಅದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

    ಹೆಸ್ಕಾಂ ಹಾವೇರಿ ವಿಭಾಗದ ಉಪವಿಭಾಗಾಧಿಕಾರಿಗಳಾದ ಸಿ.ಬಿ. ಹೊಸಮನಿ, ಜಾಗ್ರತದಳದ ಸಹಾಯಕ ಇಂಜಿನಿಯರ್ ಎನ್. ನಾಗರಾಜ, ಸ್ಥಳೀಯ ಸಮಿತಿಯ ಅಧ್ಯಕ್ಷ ಎಂ.ಎಸ್. ಕುಮ್ಮೂರ, ಕೇಂದ್ರ ಸಮಿತಿ ಸದಸ್ಯರಾದ ಎ.ಎಚ್. ಸಾಳುಂಕೆ, ಸಂಘಟನೆಯ ಮಾಜಿ ಕಾರ್ಯದರ್ಶಿ ಸಿ.ಎ. ಕೂಡಲಮಠ, ಸಿ.ಎನ್. ಬಡ್ನಿ, ನಿವೃತ್ತ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಟಿ. ಹಾವೇರಿ, ಸತೀಶ ಕುಲಕರ್ಣಿ, ಕೆ.ಎನ್. ಜಾನ್ವೇಕರ, ಎ.ಕೆ. ಯಮನೂರ, ಕೆ.ಎನ್. ಅಗಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts