More

    ವಿದ್ಯುತ್ ಕಣ್ಣಾಮುಚ್ಚಾಲೆ ಆಟ

    ಆಲೂರು: ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಬೆಳೆಗಳನ್ನು ಉಳಿಸುವ ಪ್ರಯತ್ನದಲ್ಲಿ ರೈತರು ಬಸವಳಿದಿದ್ದರೆ, ಗೃಹಿಣಿಯರು, ವ್ಯಾಪಾರಸ್ಥರು ಹಾಗೂ ಪರೀಕ್ಷೆ ತಯಾರಿಯಲ್ಲಿರುವ ವಿದ್ಯಾರ್ಥಿಗಳು ತೀವ್ರ ತೊಂದರೆ ಎದುರಿಸುವಂತಾಗಿದೆ.

    ಆಲೂರು ತಾಲೂಕಿನಲ್ಲಿ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪವರ್ ಸ್ಟೇಷನ್ ಇಲ್ಲದ ಕಾರಣ ಬೇಸಿಗೆ ಬಂತೆಂದರೆ ರೈತರು ಮತ್ತು ಸೆಸ್ಕ್ ಸಿಬ್ಬಂದಿ ಪರದಾಡುವಂತಾಗುತ್ತದೆ. ತಾಲೂಕಿಗೆ ಸದ್ಯಕ್ಕೆ 20ಕ್ಕೂ ಹೆಚ್ಚು ಮೆಗಾವಾಟ್ ವಿದ್ಯುತ್ ಬೇಕಾಗುತ್ತದೆ. ವರ್ಷ ಕಳೆದಂತೆ ಶೇ.10ರಷ್ಟು ಪ್ರಮಾಣ ಹೆಚ್ಚಾಗುತ್ತದೆ. ಪ್ರಸ್ತುತ ಕಂದಲಿ ಮತ್ತು ಬಾಳ್ಳುಪೇಟೆ ವಿದ್ಯುತ್ ಕೇಂದ್ರದಿಂದ ವಿದ್ಯುತ್ ಪಡೆಯಲಾಗುತ್ತಿದೆ. ಆಲೂರಿನಿಂದ ಕಂದಲಿ 4 ಕಿಮೀ ಮತ್ತು ಮಗ್ಗೆ 23 ಕಿಮೀ ಹಾಗೂ ಬಾಳುಪೇಟೆ 17 ಕಿಮೀ.ಅಂತರದಲ್ಲಿದೆ. ಕಂದಲಿ ಕೇಂದ್ರದಿಂದ ಅರ್ಧ ಭಾಗ, ಬಾಳುಪೇಟೆ ಕೇಂದ್ರದಿಂದ ಶೇ.25ರಷ್ಟು ವಿದ್ಯುತ್ ಪಡೆಯಲಾಗುತ್ತಿದೆ. ಮಗ್ಗೆ ಕೇಂದ್ರ ಸಂಪೂರ್ಣ ತಾಲೂಕಿಗೆ ಸರಬರಾಜು ಮಾಡುತ್ತಿದ್ದರೂ ಅಡಚಣೆ ಹೆಚ್ಚಾಗುತ್ತಿದೆ.

    ಕಸಬಾ ಹೋಬಳಿಗೆ ವಿದ್ಯುತ್ತನ್ನು ಮೂರು ಕೇಂದ್ರಗಳಿಂದಲೂ ಪಡೆಯಬೇಕಾಗಿದೆ. ಈ ಕೇಂದ್ರಗಳು ತಾಲೂಕು ಕೇಂದ್ರಕ್ಕೆ ದೂರವಿರುವುದರಿಂದ ಕಡಿಮೆ ವಿದ್ಯುತ್ ಪ್ರವಾಹದ ಜತೆಗೆ ಅಡಚಣೆಗಳು ನಿರಂತರವಾಗಿವೆ. ಮಗ್ಗೆ ಕೇಂದ್ರ ಬಹುತೇಕ ಕಾಫಿ ತೋಟ ಸೇರಿದಂತೆ ಕಾಡುಮೇಡುಗಳ ಪ್ರದೇಶವಾಗಿದೆ. ಯಾವುದೇ ಕೇಂದ್ರದಲ್ಲಿ ವಿದ್ಯುತ್ ಅಡ್ಡಿಯಾದರೆ ಕಸಬಾ ಹೋಬಳಿಗೆ ತೊಂದರೆಯಾಗುತ್ತದೆ.

    ಪರಿವರ್ತಕ ಸಾಮರ್ಥ್ಯ ಹೆಚ್ಚಿಸಿ: ಆಲೂರು ಪಟ್ಟಣದಿಂದ ವಿತರಣಾ ಕೇಂದ್ರಗಳು ದೂರವಾಗಿರುವುದರಿಂದ ಮಾರ್ಗಮಧ್ಯದಲ್ಲಿ ಅಡಚಣೆಯಾಗುತ್ತಿದೆ. ಸಮರ್ಪಕ ವಿದ್ಯುತ್ ಪೂರೈಸಲು ವೋಲ್ಟೇಜ್ ಇಲ್ಲದಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗುತ್ತದೆ. ಹೆಚ್ಚು ವಿದ್ಯುತ್ ಪವರ್ ಸ್ಟೇಷನ್ ಕೇಂದ್ರಗಳು ಸ್ಥಾಪನೆಗೊಂಡಲ್ಲಿ ಮಾತ್ರ ಈ ಸಮಸ್ಯೆ ಬಗೆಹರಿಸಬಹುದಾಗಿದೆ.

    ತಾತ್ಕಾಲಿಕವಾಗಿ ವಿದ್ಯುತ್ ಪರಿವರ್ತಕ ಸಾಮರ್ಥ್ಯವನ್ನು ಉನ್ನತೀಕರಣಗೊಳಿಸಿದರೆ ಬೇಸಿಗೆಯಲ್ಲಿ ರೈತರಿಗೆ ವಿದ್ಯುತ್ ಕೊಡಬಹುದಾಗಿದೆ, ಇಲ್ಲದಿದ್ದರೆ ಸಂಕಷ್ಟ ಎದುರಿಸಬೇಕಾಗುತ್ತದೆ. ಕಂದಲಿ ಕೇಂದ್ರ ಹತ್ತಿರವಿರುವುದರಿಂದ ಪಟ್ಟಣಕ್ಕೆ ಮಾತ್ರ ವಿದ್ಯುತ್ ಕೊಡುತ್ತಿದ್ದರೂ ಇಲ್ಲೂ ಕೆಲ ಸಮಯ ಅಡಚಣೆಯಾಗುತ್ತಿದೆ ಎಂಬುದು ಸಾರ್ವಜನಿಕರ ದೂರಾಗಿದೆ.

    ಈಗಾಗಲೇ ಗ್ರಾಮೀಣ ಭಾಗದಲ್ಲಿ ದಿನಕ್ಕೆ 6 ಗಂಟೆ ಮಾತ್ರ 3 ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಪಟ್ಟಣಗಳಲ್ಲಿ ಲೋಡ್ ಶೆಡ್ಡಿಂಗ್ ಸರ್ವೆ ಸಾಮಾನ್ಯವಾಗಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ಮಾರ್ಚ್ ಮತ್ತು ಏಪ್ರಿಲ್‌ಗಳಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಘಟ್ಟವಾದ ಈ ಪರೀಕ್ಷೆಗಳಿಗೆ ತಯಾರಿ ನಡೆಸಲು ಹಗಲು, ರಾತ್ರಿ ಶ್ರಮಪಡಬೇಕಾದ ಅಗತ್ಯವಿದೆ. ಆದರೆ ಸಂಜೆಯಾದರೆ ಗಂಟೆಗಟ್ಟಲೆ ವಿದ್ಯುತ್ ಕೈಕೊಡುವುದರಿಂದಾಗಿ ವಿದ್ಯಾರ್ಥಿಗಳ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ.

    ಸಮಯ ನಿಗದಿ ಇಲ್ಲದೆ ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಹೀಗೆ ಮನಸೋಇಚ್ಛೆ ನಿರಂತರವಾಗಿ ವಿದ್ಯುತ್ ಕಡಿತ ಮಾಡುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೊಶಕ್ಕೆ ಕಾರಣವಾಗಿದೆ. ಗೃಹಿಣಿಯರು, ವಿದ್ಯಾರ್ಥಿಗಳು, ವ್ಯಾಪಾರಸ್ಥರು, ರೈತರು ವಿದ್ಯುತ್ ಸಮಸ್ಯೆಯಿಂದ ರೋಸಿ ಹೋಗಿದ್ದಾರೆ.

    ಕುಡಿಯುವ ನೀರಿಗೂ ಸಮಸ್ಯೆ: ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಸಾರ್ವಜನಿಕರು ನೀರಿಗಾಗಿ ಪರದಾಡುವಂತಾಗಿದೆ. ರೈತರು ವಿದ್ಯುತ್ ವ್ಯತ್ಯಯದಿಂದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ರೈತರು ತಮ್ಮ ಕೊಳವೆ ಬಾವಿಗಳಲ್ಲಿ ಇರುವ ಅಲ್ಪಸ್ವಲ್ಪ ನೀರಿನಿಂದ ಜೀವನೋಪಾಯಕ್ಕಾಗಿ ಕೆಲ ಬೆಳೆಗಳನ್ನು ಬೆಳೆದು ಇನ್ನೇನು ಬೆಳೆ ಕೈಗೆ ಸಿಕ್ಕಿತು ಎನ್ನುವಷ್ಟರಲ್ಲಿ ವಿದ್ಯುತ್ ಅಭಾವದಿಂದ ಬೆಳೆ ಒಣಗಿ ನಷ್ಟ ಅನುಭವಿಸುವಂತಾಗಿದೆ. ಆದರೆ ಕಣ್ಣಿದ್ದೂ ಕುರುಡಾಗಿರುವ ಸೆಸ್ಕ್ ಮಾತ್ರ ಎಂದಿನಂತೆ ಗಾಢ ನಿದ್ರೆಗೆ ಜಾರಿದೆ.

    ಮಗ್ಗೆಯಲ್ಲಿ ಮಾತ್ರ ಪವರ್ ಸ್ಟೇಷನ್ ಲಭ್ಯ: ಪಕ್ಕದ ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಸೀಕೆರೆ ಹಾಗೂ ಹಾಸನ ತಾಲೂಕುಗಳಲ್ಲಿ ವಿದ್ಯುತ್ ಕೇಂದ್ರಗಳು ಮನೆಗೊಂದರಂತೆ ಇವೆ. ಆದರೆ, ಆಲೂರು ತಾಲೂಕಿನಲ್ಲಿ ಮಗ್ಗೆ ಗ್ರಾಮವನ್ನು ಹೊರತುಪಡಿಸಿದರೆ ಬೇರೆಲ್ಲೂ ವಿದ್ಯುತ್ ಪರಿವರ್ತಕ ಸ್ಟೇಷನ್‌ಗಳು ಇಲ್ಲ.
    ಮಗ್ಗೆ ಹಾಗೂ ಕೆ.ಹೊಸಕೋಟೆ ಹೋಬಳಿಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಳದಿಂದ 24 ಗಂಟೆಯೂ ವಿದ್ಯುತ್ ಪೂರೈಸುವ ಅನಿವಾರ್ಯತೆ ಇದೆ. ಆದ್ದರಿಂದ ಅಲೂರು ತಾಲೂಕಿಗೆ ಸುಮಾರು 4ರಿಂದ 5 ಪವರ್ ಸ್ಟೇಷನ್‌ಗಳಾದರೆ ಮಾತ್ರ ಸರಿಯಾಗಿ ವಿದ್ಯುತ್ ಪೂರೈಕೆ ಮಾಡಲು ಸಹಕಾರಿಯಾಗುತ್ತದೆ.

    ಜಮೀನು ನೀಡಿದರೂ ನಿರ್ಮಾಣಕ್ಕೆ ನಿರಾಸಕ್ತಿ: ತಾಲೂಕಿನ ಪಾಳ್ಯ ಹೋಬಳಿ ಕೊಡಿಗೆಹಳ್ಳಿ ಗ್ರಾಮದಲ್ಲಿ ಪವರ್ ಸ್ಟೇಷನ್ ತೆರೆಯಲು (ಎಐಯುಎಸ್‌ಎ) ನಿಯಮಾನುಸಾರವಾಗಿ ರೈತ ಶಿವರುದ್ರಪ್ಪ ಎಂಬುವರು ಜಮೀನು ನೀಡಲು ಒಪ್ಪಿದ್ದು, ಜಮೀನಿಗೆ ಜಂಟಿ ಪರಿಶೀಲನೆ ನಡೆಸಿ ವರದಿ ನೀಡಲಾಗಿದೆ. ಆದರೆ ಜಮೀನು ಮಾಲೀಕರು ಹೆಚ್ಚು ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ ಎನ್ನುವ ದೂರು ಕೇಳಿಬರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಜಾಗದ ಮಾಲೀಕರ ಜತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಮಾತ್ರ ಆಸಕ್ತಿ ತೋರುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.

    2000 ಅಡಿ ಆಳ ಕೊಳವೆಬಾವಿ ಕೊರೆದರೂ ನೀರು ಲಭ್ಯವಿಲ್ಲ. ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ನೀರು ಸಿಗದ ಪರಿಸ್ಥಿತಿಯಲ್ಲಿ ರೈತರು ಪರದಾಡುತ್ತಿದ್ದರೆ, ವಿದ್ಯುತ್ ಸಮಸ್ಯೆ ಮತ್ತಷ್ಟು ಬಾಧಿಸುತ್ತಿದೆ. ಪಂಪ್‌ಸೆಟ್‌ಗಳಿಗೆ ರಾತ್ರಿ 2 ಹಾಗೂ ಹಗಲು 2 ಗಂಟೆ ಮಾತ್ರ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದರಿಂದ ರೈತ ತೋಟದ ಬೆಳೆಗಳನ್ನು ಉಳಿಸಿಕೊಳ್ಳಲು, ಜಾನುವಾರುಗಳಿಗೆ ಮೇವು ಸಿಗದೆ ರೈೆತರು ಕಂಗಾಲಾಗಿದ್ದಾರೆ.
    < ಎಚ್.ಎಸ್.ಲಿಂಗರಾಜು, ರೈತ, ಚಿಕ್ಕಕಣಗಾಲು

    ವಿದ್ಯುತ್ ಯಾವಾಗ ಹೋಗುತ್ತದೆ ಎಂಬುದು ತಿಳಿಯುವುದಿಲ್ಲ. ಮಕ್ಕಳು ರಾತ್ರಿ ವೇಳೆ ಮೇಣದ ಬತ್ತಿ ಇಟ್ಟುಕೊಂಡು ಓದಬೇಕಿದೆ. ಬೆಳಗ್ಗೆ ಮತ್ತು ಸಂಜೆ ವಿದ್ಯುತ್ ಕಡಿತದಿಂದ ಮಕ್ಕಳ ಓದಿಗೆ ತೊಂದರೆಯಾಗಿದೆ. ಶಾಲೆಯಲ್ಲಿ ನೀಡಿದ ಹೋಮ್ ವರ್ಕ್ ಮಾಡಲು ಆಗುತ್ತಿಲ್ಲ. ಈ ವರ್ಷ ಅಧಿಕ ಬಿಸಿಲಿದ್ದು, ರಾತ್ರಿ ಕರೆಂಟ್ ಇಲ್ಲವಾದರೆ ಬದುಕಲು ಕಷ್ಟಕರವಾಗಿದೆ. ಈ ವರ್ಷ ನಮ್ಮ ಮಕ್ಕಳ ವ್ಯಾಸಂಗಕ್ಕೆ ಧಕ್ಕೆಯಾದರೆ ಅದಕ್ಕೆ ಸೆಸ್ಕ್ ಹಾಗೂ ಸರ್ಕಾರವೇ ಕಾರಣ.
    < ವಾಣಿಶ್ರೀ ಉಮೇಶ್, ರೈತ ಮಹಿಳೆ, ಹರಿಹಳ್ಳಿ

    ಪಾಳ್ಯ ಗ್ರಾಮದಲ್ಲಿ ಪವರ್ ಸ್ಟೇಷನ್ ತೆರೆಯುವ ಕುರಿತು ಈಗಾಗಲೇ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಒಂದೆರಡು ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಕೊಡಗಿಹಳ್ಳಿ ಗ್ರಾಮದಲ್ಲಿ ಪವರ್ ಸ್ಟೇಷನ್ ತೆರೆಯಲು ಗುರುತಿಸಿದ್ದ ಜಾಗದ ಸಮಸ್ಯೆ ಎದುರಾಗಿತ್ತು, ಇಲಾಖೆಯು ಜಾಗದ ಮಾಲೀಕರ ನಡುವೆ ಮಾತುಕತೆ ನಡೆಸಿದರೂ ಮಾಲೀಕ ಒಪ್ಪಂದಕ್ಕೆ ಬಾರದ ಕಾರಣ ಬೇರೆ ಜಾಗದಲ್ಲಿ ಸ್ಥಾಪಿಸಲು ಸರ್ಕಾರಿ ಸ್ಥಳವನ್ನು ಗುರುತಿಸಿ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಅನುಮತಿ ಸಿಕ್ಕ ಕೂಡಲೇ ಕ್ರಮ ಕೈಗೊಳ್ಳಲಾಗುವುದು.
    < ನಿರಂಜನ್, ಪ್ರಭಾರ ಎಇಇ, ಆಲೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts