More

    ವಿದ್ಯುತ್ ಅಕ್ರಮ ಸಂಪರ್ಕ ಪಡೆಯುವುದನ್ನು ನಿಲ್ಲಿಸಿ – ರಮೇಶ ಕತ್ತಿ

    ಹುಕ್ಕೇರಿ: ರೈತರಿಗೆ ಗುಣಮಟ್ಟದ ವಿದ್ಯುತ್ ದೊರೆಯಬೇಕಾದರೆ, ರೈತರು ಟಿಸಿಗಳಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯುವುದನ್ನು ನಿಲ್ಲಿಸಬೇಕು. ರೈತರು ಎಲ್ಲಿಯವರೆಗೆ ಇಂತಹ ಪ್ರವೃತ್ತಿ ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

    ತಾಲೂಕಿನ ಗುಡಸ ಗ್ರಾಮದ ನರಸಣ್ಣವರ ತೋಟದಲ್ಲಿ 100 ಕೆ.ವಿ. ಸಾಮರ್ಥ್ಯದ ವಿದ್ಯುತ್ ಪರಿವರ್ತಕದ ಮೇಲೆ ಹೆಚ್ಚುವರಿಯಾಗಿ ಅಳವಡಿಸಿದ 63 ಕೆ.ವಿ. ಸಾಮರ್ಥ್ಯದ ಟಿಸಿ ಉದ್ಘಾಟಿಸಿ ಮಾತನಾಡಿದರು. ರೈತರ ಬೇಡಿಕೆಗೆ ಅನುಗುಣವಾಗಿ ಟಿಸಿ ಅಳವಡಿಸಲಾಗಿರುತ್ತದೆ. ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಲೋಡ್ ಆದಲ್ಲಿ ಗುಣಮಟ್ಟದ ವಿದ್ಯುತ್ ದೊರೆಯುವುದಿಲ್ಲ ಜತೆಗೆ ಟಿಸಿ ಹಾಳಾಗುತ್ತದೆ.

    ಇದರಿಂದ ರೈತರಿಗೂ ಮತ್ತು ವಿದ್ಯುತ್ ಸರಬರಾಜು ಮಾಡುವ ಸಹಕಾರಿ ಸಂಘಕ್ಕೂ ಹಾನಿಯಾಗುತ್ತದೆ. ಇದನ್ನು ಅರ್ಥ ಮಾಡಿಕೊಂಡು ರೈತರು ಅಕ್ರಮ ಸಂಪರ್ಕ ಪಡೆದವರ ವಿರುದ್ಧ ಸಂಘಕ್ಕೆ ತಿಳಿಸಿದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾವುದು ಎಂದರು. ಒಂದು ವೇಳೆ ಹೆಚ್ಚುವರಿ ಸಂಪರ್ಕ ಬೇಕಾದಲ್ಲಿ ಸಂಘಕ್ಕೆ ತಿಳಿಸಿ ಅಧಿಕತ ಜೋಡಣೆ ಪಡೆದಲ್ಲಿ ಈ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.

    ಹಲವಾರು ವರ್ಷಗಳಿಂದ ವಾಣಿಜ್ಯ ಮತ್ತು ಮನೆ ಬಳಕೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡವರು ತಕ್ಷಣ ಭರಿಸಿ ಸಂಘದ ಅಭಿವದ್ಧಿಗೆ ಸಹಕರಿಸಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಸಿಬ್ಬಂದಿ ರೈತರಿಗೆ, ಗ್ರಾಹಕರಿಗೆ ತಿಳುವಳಿಕೆ ನೀಡುವಂತೆ ಸೂಚಿಸಿದರು.

    ರೈತರು ರಮೇಶ ಕತ್ತಿ ಅವರನ್ನು ಸತ್ಕರಿಸಿದರು. ನಂತರ ತಾಲೂಕಿನ ಎಲಿಮುನ್ನೋಳಿ ಗ್ರಾಮದ 100 ಕೆ.ವಿ. ಸಾಮರ್ಥ್ಯದ ಜಿನರಾಳಿ ತೋಟದ ವಿದ್ಯುತ್ ಪರಿವರ್ತಕದ ಮೇಲೆ ಹೆಚ್ಚುವರಿಯಾಗಿ ಅಳವಡಿಸಿದ 63 ಕೆ.ವಿ. ಸಾಮರ್ಥ್ಯದ ಟಿಸಿ ಉದ್ಘಾಟಿಸಿದರು.

    ಪಿಕೆಪಿಎಸ್ ಅಧ್ಯಕ್ಷ ಸದಾನಂದ ಹಿರೇಮಠ, ನಿರ್ದೇಶಕ ಮಲ್ಲಿಕಾರ್ಜುನ ನರಸನ್ನವರ, ಗ್ರಾಪಂ ಅಧ್ಯಕ್ಷ ಅಪ್ಪಣ್ಣ ಖಾತೇದಾರ, ಈರಪ್ಪ ಅಮ್ಮಣಗಿ, ರಂಜಿತ ಬಂಗಾರಿ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಬಸಗೌಡ ಮಗೆನ್ನವರ, ಗ್ರಾಪಂ ಅಧ್ಯಕ್ಷೆ ಸುಮಿತ್ರಾ ಕಟ್ಟಿ, ಅರುಣ ಹುದ್ದಾರ, ಮಹಾಲಕ್ಷ್ಮೀ, ಪಿಕೆಪಿಎಸ್ ಅಧ್ಯಕ್ಷ ಕೆಂಪಣ್ಣ ದೇಸಾಯಿ, ಉಪಾಧ್ಯಕ್ಷ ಜಿನಗೌಡ ಇಮಗೌಡನವರ, ಎಲಿಮುನ್ನೋಳಿ ಪಿಕೆಪಿಎಸ್ ಅಧ್ಯಕ್ಷ ಶಶಿಕಾಂತ ದೊಡ್ಡಲಿಂಗನವರ,ಬಿ.ಎಂ. ಮಗದುಮ್ಮ ಇತರರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts