More

    ವಿದ್ಯಾರ್ಥಿಗಳು ‘ಹಳ್ಳಕ್ಕೆ’ ಬೀಳುವ ಭೀತಿ

    ಯಳಂದೂರು: ತಾಲೂಕಿನ ವೈ.ಕೆ.ಮೋಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೂತನವಾಗಿ ಶಾಲಾ ಕೊಠಡಿಗಳನ್ನು ನಿರ್ಮಿಸಲು ಪಿಲ್ಲರ್‌ಗಾಗಿ ತೋಡಿರುವ ಹಳ್ಳಗಳನ್ನು ಹಾಗೇ ಬಿಟ್ಟು ಒಂದೂವರೆ ತಿಂಗಳು ಕಳೆದರೂ ಇನ್ನೂ ಕಾಮಗಾರಿ ಆರಂಭಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪಾಲಕರು ಜೀವ ಕೈಯಲ್ಲಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಇಲ್ಲಿನ ಶಾಲಾ ಕೊಠಡಿಯನ್ನು ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಯ ವತಿಯಿಂದ ನ.23 ರಂದು ಶಾಸಕ ಎನ್.ಮಹೇಶ್ 10.60 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಸಂಬಂಧಪಟ್ಟ ಗುತ್ತಿಗೆದಾರ ಇಲ್ಲಿ ಪಿಲ್ಲರ್‌ಗಳನ್ನು ನಿರ್ಮಿಸಲು ಅಂದಾಜು 4 ಅಡಿಗೂ ಹೆಚ್ಚು ಆಳದ ಗುಂಡಿಗಳನ್ನು ತೋಡಿದ್ದಾರೆ. ಆದರೆ ಕಾಮಗಾರಿ ಇನ್ನೂ ಆರಂಭಿಸಿಲ್ಲ. ಶಾಲಾ ಮಕ್ಕಳಿಗೆ ಇದೇ ಆಟದ ಮೈದಾನವಾಗಿದ್ದು ಈಗ ಇತ್ತ ಮೈದಾನವೂ ಇಲ್ಲದೆ, ಅತ್ತ ಕೊಠಡಿಯ ನಿರ್ಮಾಣವೂ ಆಗದೆ ಸಮಸ್ಯೆಯಾಗಿದೆ.

    ಮೈದಾನಕ್ಕೆ ತೊಂದರೆ: ಶಾಲಾ ಮಕ್ಕಳಿಗೆ ಈ ಸ್ಥಳ ಆಟದ ಮೈದಾನವಾಗಿತ್ತು. ಅಲ್ಲದೆ ಇಲ್ಲೇ ನಿತ್ಯ ಮಕ್ಕಳು ಪ್ರಾರ್ಥನೆ, ರಾಷ್ಟ್ರಗೀತೆ ಹಾಡುವ ಸ್ಥಳವೂ ಇದೇ ಆಗಿದೆ. ಆದರೆ ಒಂದೂವರೆ ತಿಂಗಳಿಂದ ಇಲ್ಲಿ ಕಾಮಗಾರಿ ನೆಪವೊಡ್ಡಿ ಹಳ್ಳ ತೋಡಿರುವುದರಿಂದ ಇದಕ್ಕೆ ಸಮಸ್ಯೆಯಾಗಿದೆ. ಆಟಕ್ಕೆ ಬಿಟ್ಟಾಗ ಮಕ್ಕಳು ಹಳ್ಳದೊಳಗೆ ಬಿದ್ದು ಗಾಯಗಳಾಗುವ ಅಪಾಯವೂ ಇದೆ. ಈ ಬಗ್ಗೆ ಪಾಲಕರು ಹಲವು ಬಾರಿ ಮುಖ್ಯ ಶಿಕ್ಷಕರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದರೂ ಈ ಬಗ್ಗೆ ಕ್ರಮ ವಹಿಸಿಲ್ಲ.

    ಶಾಲೆಯಲ್ಲಿ 150 ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಒಂದೂವರೆ ತಿಂಗಳಿಂದ ಗುಂಡಿಗಳನ್ನು ತೋಡಲಾಗಿದೆ. ಆದರೆ ಕೊಠಡಿ ಕಾಮಗಾರಿಗಳು ಆರಂಭಗೊಂಡಿಲ್ಲ. ಶಾಸಕರು ಬೇಗ ಕಾಮಗಾರಿಯನ್ನು ಮುಗಿಸುವಂತೆ ಭೂಮಿಪೂಜೆ ಸಂದರ್ಭದಲ್ಲಿ ಹೇಳಿದ್ದಾರೆ. ಆದರೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರನಿಂದ ಕೆಲಸವನ್ನು ಮಾಡಿಸುವಲ್ಲಿ ವಿಫಲವಾಗಿದ್ದಾರೆ. ಮಕ್ಕಳು ಹಳ್ಳಕ್ಕೆ ಬಿದ್ದು ಗಾಯಗೊಳ್ಳುವ ಅಪಾಯವಿದ್ದು, ಈ ಬಗ್ಗೆ ಸಂಬಂಧಪಟ್ಟವರು ಶೀಘ್ರದಲ್ಲೇ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮದ ಎಂ. ನಾಗರಾಜು, ಪುಟ್ಟಶೆಟ್ಟಿ ಸೇರಿದಂತೆ ಹಲವರು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts