More

    ಕಂದಾಯ ಇಲಾಖೆ ದಾಖಲೆಗಳ ಡಿಜಿಟಲೀಕರಣ

    ಯಳಂದೂರು: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಜನಪರ ಕೆಲಸಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದು, ಕಂದಾಯ ಇಲಾಖೆಯ ದಾಖಲೆಗಳ ಡಿಜಿಟಲೀಕರಣವೂ ಇದರ ಒಂದು ಭಾಗವಾಗಿದೆ ಎಂದು ಪಶು ಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ತಿಳಿಸಿದರು.

    ಪಟ್ಟಣದ ಕಂದಾಯ ಇಲಾಖೆಯ ಕಚೇರಿಯಲ್ಲಿ ಆಯೋಜಿಸಿದ್ದ ತಾಲೂಕು ಕಚೇರಿ, ಸರ್ವೇ ಮತ್ತು ನೋಂದಣಿ ಇಲಾಖೆಯ ಎಲ್ಲ ದಾಖಲೆಗಳ ಡಿಜಿಟಲೀಕರಣಗೊಳಿಸುವ ‘ಭೂ ಸುರಕ್ಷಾ ಯೋಜನೆ’ಗೆ ಚಾಲನೆ ನೀಡಿ ಮಾತನಾಡಿದರು.

    ಇಡೀ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲೂ ಒಂದೊಂದು ತಾಲೂಕನ್ನು ಈ ಯೋಜನೆಯ ವ್ಯಾಪ್ತಿಗೆ ಪ್ರಾಯೋಗಿಕವಾಗಿ ಒಳಪಡಿಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಯಳಂದೂರು ತಾಲೂಕು ಮೊದಲಿಗೆ ಆಯ್ಕೆಯಾಗಿದೆ. ಈ ಯೋಜನೆಯಿಂದ ರೈತರ ಹಳೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಸುರಕ್ಷಿತವಾಗಿಡಬಹುದು. ಬೇಕಾದಾಗ ಸುಲಭವಾಗಿ ಪಡೆದುಕೊಳ್ಳಬಹುದು. ರೈತರು ವಿನಾಕಾರಣ ಕಚೇರಿಗೆ ಅಲೆಯುವುದು ತಪ್ಪುತ್ತದೆ. ಈ ಯೋಜನೆಗಾಗಿ 8 ಕಂಪ್ಯೂಟರ್, 3 ಸ್ಕ್ಯಾನರ್ ಹಾಗೂ 10 ಜನ ನುರಿತ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇನ್ನು 100 ದಿನದೊಳಗೆ ತಾಲೂಕಿನ ಎಲ್ಲ ದಾಖಲೆಗಳು ಡಿಜಿಟಲೀಕರಣಗೊಳ್ಳಲಿವೆ ಎಂದರು.

    ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ರೆಕಾರ್ಡ್ ರೂಂನಲ್ಲಿರುವ ಹಳೇ ದಾಖಲೆಗಳು ಪೇಪರ್‌ನಲ್ಲಿದ್ದು, ಇದು ನಶಿಸಿ ಹೋಗುವ ಅಪಾಯವಿತ್ತು. ನೂರಾರು ವರ್ಷಗಳ ದಾಖಲೆಗಳನ್ನು ಸುರಕ್ಷಿತವಾಗಿಡುವುದು ಸವಾಲಿನ ಕೆಲಸವಾಗಿತ್ತು. ಹಾಗಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ದೂರದೃಷ್ಟಿಯ ಫಲದಿಂದ ಇಂದು ಎಲ್ಲ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ತೀರ್ಮಾನಿಸಿರುವುದು ಉತ್ತಮ ನಿರ್ಧಾರವಾಗಿದೆ. ಇದಕ್ಕೆ ನಮ್ಮ ಜಿಲ್ಲೆಯಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯ ಯಳಂದೂರು ತಾಲೂಕು ಆಯ್ಕೆಯಾಗಿರುವುದು ನನಗೆ ಸಂತಸ ತಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ತಮ್ಮ ಭೂಮಿಯ ಎಲ್ಲ ದಾಖಲೆಗಳು ಲಭ್ಯವಾಗಲಿವೆ ಎಂದರು.

    ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಜಿಲ್ಲೆಯಲ್ಲಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವಲ್ಲಿ ಯಳಂದೂರು ತಾಲೂಕಿನ ಸಿಬ್ಬಂದಿ ಉತ್ತಮ ಸಾಧನೆ ತೋರಿದ್ದಾರೆ. ಹಾಗಾಗಿ, ಯಳಂದೂರನ್ನು ‘ಪೈಲಟ್ ತಾಲೂಕು’ ಆಗಿ ಆಯ್ಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಜಿಲ್ಲೆಯ ಇತರ ತಾಲೂಕುಗಳಿಗೂ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ತಹಸೀಲ್ದಾರ್ ಜಯಪ್ರಕಾಶ್, ಮಂಜುಳಾ, ಇಒ ಶ್ರೀನಿವಾಸ್, ಪಪಂ ಸದಸ್ಯ ಮಹೇಶ್, ಮುಖ್ಯಾಧಿಕಾರಿ ಮಹೇಶ್‌ಕುಮಾರ್, ರಾಜಸ್ವ ನಿರೀಕ್ಷಕ ಯದುಗಿರಿ, ಪ್ರವೀಣ್, ನಂಜುಂಡ ಇತರರಿದ್ದರು.

    ಶಾಸಕರನ್ನು ಹೊಗಳಿದ ಸಚಿವ: ಇದೇ ಸಂದರ್ಭದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರನ್ನು ಸಚಿವ ವೆಂಕಟೇಶ್ ಹೊಗಳಿದರು. ಕೃಷ್ಣಮೂರ್ತಿ ಯಾವಾಗಲೂ ತಮ್ಮ ಕ್ಷೇತ್ರದ ಸಮಸ್ಯೆಗಳ ನಿವಾರಣೆ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ. ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳಲು ದುಂಬಾಲು ಬೀಳುತ್ತಾರೆ. ಇವರ ತಂದೆ ಬಿ.ರಾಚಯ್ಯ ರಾಜ್ಯ ಕಂಡ ಅಪರೂಪದ ಮುತ್ಸದ್ದಿ ರಾಜಕಾರಣಿಯಾಗಿದ್ದು, ಇದು ರಕ್ತಗತವಾಗಿ ಇವರಿಗೆ ಬಂದಿದೆ. ನಾನು ಮೊದಲ ಬಾರಿ ಶಾಸಕನಾಗಿ ಬಂದಾಗ ಬಿ.ರಾಚಯ್ಯ ಅವರು ಮಾರ್ಗದರ್ಶನ ನೀಡಿದ್ದರು ಎಂದು ನೆನೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts