More

    ಜನವಸತಿ ಪ್ರದೇಶದಲ್ಲಿರುವ ಮದ್ಯದಂಗಡಿ ಸ್ಥಳಾಂತರಿಸಿ

    ಯಳಂದೂರು: ಪಟ್ಟಣದ ಮಧ್ಯ ಭಾಗದಲ್ಲೇ ಹಾಗೂ ಜನವಸತಿ ಪ್ರದೇಶದಲ್ಲೇ ಬಾರ್, ರೆಸ್ಟೋರೆಂಟ್ ಹಾಗೂ ಮದ್ಯದಂಗಡಿಗಳಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ನಾಗರಿಕರು ದೂರಿದರು.

    ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಎಸ್‌ಸಿ ಹಾಗೂ ಎಸ್‌ಟಿ ಜನಾಂಗದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ನಾಗರಿಕರು, ಪರಿಶಿಷ್ಟ ಜಾತಿ ಹಾಗೂ ವರ್ಗದ ಜನರು ಹೆಚ್ಚಾಗಿ ವಾಸಿಸುವ ಸ್ಥಳದಲ್ಲೇ ಬಾರ್‌ಗಳನ್ನು ತೆರೆಯಲಾಗಿದ್ದು, ಇವುಗಳನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

    ಪಟ್ಟಣದ ಬಳೇಪೇಟೆಯ ಜನವಸತಿ ಪ್ರದೇಶದಲ್ಲಿ 2 ಬಾರ್‌ಗಳು ಅಕ್ಕಪಕ್ಕದಲ್ಲೇ ಇವೆ. ಇಲ್ಲಿ ಪ್ರತಿನಿತ್ಯ ಮದ್ಯಪ್ರಿಯರ ಸಂತೆಯೇ ಇರುತ್ತದೆ. ಸಂಜೆಯಾಗುತ್ತಿದ್ದಂತೆ ಪಾನಮತ್ತರ ಸಂಖ್ಯೆ ಹೆಚ್ಚಾಗುತ್ತದೆ. ಕಿರಿದಾದ ರಸ್ತೆಯಲ್ಲಿ ವಾಹನ ಸವಾರರು , ಅದರಲ್ಲೂ ಮಹಿಳೆಯರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಸಂಚರಿಸಲು ಮುಜುಗರ ಪಡುವ ಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.

    ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವರ ಸಂಖ್ಯೆ ಅಧಿಕವಾಗಿದೆ. ಪಟ್ಟಣದ ಅಂಗಡಿ ಮಾಲೀಕರೇ ಹುಡುಗರನ್ನು ಇಟ್ಟುಕೊಂಡಿದ್ದು, ಬೈಕ್‌ನಲ್ಲಿ ಮದ್ಯವನ್ನು ಪ್ರತಿ ಹಳ್ಳಿಗಳಿಗೂ ಗೂಡಂಗಡಿಗಳಿಗೆ ಸಾಗಿಸುತ್ತಾರೆ. ಅಲ್ಲಿ ಹೆಚ್ಚು ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತದೆ. ಪರಿಶಿಷ್ಟರ ಬೀದಿಗಳಲ್ಲೇ ಇದರ ಹಾವಳಿ ಹೆಚ್ಚಾಗಿದ್ದು, ಯುವ ಸಮೂಹವನ್ನು ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ಮದ್ಯ ಸಾಗಣೆ ನಿಲ್ಲಿಸಲು ಪೊಲೀಸರು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

    ವೈ.ಕೆ.ಮೋಳೆ ಗ್ರಾಮದ ಪರಿಶಿಷ್ಟ ಜನಾಂಗದ ಬೀದಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕೆಲವರು ಅಡ್ಡಿ ಮಾಡುತ್ತಿದ್ದಾರೆ. ಕಂದಾಯ, ಸರ್ವೇ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಗ್ರಾಮೀಣ ಪ್ರದೇಶಕ್ಕೆ ರಾತ್ರಿ ವೇಳೆ ಪೊಲೀಸರು ಗಸ್ತು ಬರುತ್ತಿಲ್ಲ. ಇದರಿಂದ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದೆ ಎಂದು ದೂರಿದರು. ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ಸಬ್ ಇನ್ಸ್‌ಪೆಕ್ಟರ್ ನಂದೀಶ್‌ಕುಮಾರ್, ಕ್ರೈಂ ವಿಭಾಗದ ಪಿಎಸ್‌ಐ ಮಹದೇವ, ಎಎಸ್‌ಐ ಚಂದ್ರಶೇಖರ್, ಪಪಂ ಸದಸ್ಯರಾದ ಮಹೇಶ್, ರವಿ, ಮಾಜಿ ಸದಸ್ಯರಾದ ಜೆ.ಶ್ರೀನಿವಾಸ್, ಕಂದಹಳ್ಳಿ ನಾರಾಯಣ, ವೈ.ಕೆ.ಮೋಳೆ ನಾಗರಾಜು, ಶಿವನಂಜಶೆಟ್ಟಿ, ರಘು, ಶಾಂತರಾಜು, ಸೂರ್ಯನಾರಾಯಣ, ಮಹೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts