More

    ವಿದ್ಯಾರ್ಥಿಗಳಿಗೆ ಅರಣ್ಯ ದರ್ಶನ

    ಹಾವೇರಿ: ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಅರಣ್ಯ ಮತ್ತು ವನ್ಯಜೀವಿಗಳ ಕುರಿತು ಜಾಗೃತಿ ಮೂಡಿಸಲು ಪ್ರಾದೇಶಿಕ ಅರಣ್ಯ ವಿಭಾಗದಿಂದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಜಿಲ್ಲೆಯಲ್ಲಿ 10 ಚಿಣ್ಣರ ವನದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಿ, 600 ವಿದ್ಯಾರ್ಥಿಗಳಿಗೆ ಅರಣ್ಯ ದರ್ಶನ ಮಾಡಿಸಿದ್ದಾರೆ.

    ವಿದ್ಯಾರ್ಥಿಗಳನ್ನು ನಿಸರ್ಗ ಸ್ನೇಹಿ ನಾಗರಿಕರನ್ನಾಗಿಸುವ ಉದ್ದೇಶದಿಂದ ಜಿಲ್ಲಾದ್ಯಂತ ಈ ಕಾರ್ಯಕ್ರಮಗಳನ್ನು ಅರಣ್ಯ ಇಲಾಖೆ ಹಮ್ಮಿಕೊಳ್ಳುತ್ತಿದೆ. ಹಾವೇರಿ ತಾಲೂಕಿನ ಪ್ರಾದೇಶಿಕ ಅರಣ್ಯ ಇಲಾಖೆಯ ಆಶ್ರಯದಲ್ಲಿ ಕಳ್ಳಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 50ವಿದ್ಯಾರ್ಥಿಗಳು ಹಾಗೂ ಶಾಲೆಯ ಶಿಕ್ಷಕರನ್ನು ಶಿವಮೊಗ್ಗ ಜಿಲ್ಲೆ ತಾವರೆಕೊಪ್ಪ, ಸಕ್ರೆಬೈಲ್, ಪಶ್ಚಿಮಘಟ್ಟಗಳ ಅರಣ್ಯ ಪ್ರದೇಶಗಳಿಗೆ ಕರೆದೊಯ್ಯಲಾಗಿತ್ತು.

    ಸಕ್ರೆಬೈಲ್ ಆನೆ ಬಿಡಾರದಲ್ಲಿ ಕಾಡು ಆನೆಗಳನ್ನು ಪಳಗಿಸುವ ತಂತ್ರಗಾರಿಕೆ, ಅವುಗಳ ಆಹಾರ ಪದ್ಧತಿ, ವಸತಿ ಮಾಹಿತಿ ಪಡೆದ ವಿದ್ಯಾರ್ಥಿಗಳು, ತಾವರೆಕೊಪ್ಪದಲ್ಲಿ ಹುಲಿ, ಸಿಂಹ, ಕರಡಿ, ಜಿಂಕೆ, ಚಿರತೆ ಸೇರಿ ಇತರ ಕಾಡು ಪ್ರಾಣಿಗಳ ಜೀವನಶೈಲಿಯ ಮಾಹಿತಿಯನ್ನು ಅರಣ್ಯಾಧಿಕಾರಿಗಳಿಂದ ಪಡೆದುಕೊಂಡರು. ನಿತ್ಯಹರಿದ್ವರ್ಣ ಕಾಡಿನಲ್ಲಿಯ ನರ್ಸರಿಗೂ ಭೇಟಿ ನೀಡಿದ ವಿದ್ಯಾರ್ಥಿಗಳು ಸಸ್ಯಗಳನ್ನು ಪೋಷಿಸುವ ಹಾಗೂ ವನ್ಯಜೀವಿ ಗಿಡಮರಗಳ ಕುರಿತು ಕಾರ್ಡಿಯಾ ಸಂಸ್ಥೆಯ ಡಾ. ಜಿ.ಟಿ. ಸುದರ್ಶನರಿಂದ ಮಾಹಿತಿ ಪಡೆದುಕೊಂಡರು. ಈ ಅರಣ್ಯ ದರ್ಶನ ಕಾರ್ಯಕ್ರಮದಿಂದ ಕಾಡಿನಂಚಿನಲ್ಲಿರುವ ಶಾಲೆಯ ಮಕ್ಕಳಿಗೆ ಕಾಡು ಪ್ರಾಣಿಗಳ ದಾಳಿಯಿಂದ ರಕ್ಷಿಸಿಕೊಳ್ಳುವ ಬಗೆ ಹಾಗೂ ವನ್ಯಜೀವಿ, ಅರಣ್ಯ ಸಂರಕ್ಷಣೆಯ ಅರಿವು ಮೂಡಿತು ಎಂದು ಕಳ್ಳಿಹಾಳ ಶಾಲೆಯ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಆರ್​ಎಫ್​ಒ ಉಮರಭಾಷಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts