More

    ವಿಜೃಂಭಣೆಯ ಗಣಪತಿ ದೇವರ ವಾರ್ಷಿಕ ರಥೋತ್ಸವ

    ಕುಶಾಲನಗರ: ಗಣಪತಿ ದೇವರ ವಾರ್ಷಿಕ ರಥೋತ್ಸವ ಶನಿವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.

    ಮಧ್ಯಾಹ್ನ 12.50ಕ್ಕೆ ಸಲ್ಲುವ ಅಭಿಜನ್ ಲಗ್ನದಲ್ಲಿ ಗಣಪತಿ ದೇವತಾ ಮೂರ್ತಿಯನ್ನು ಪುಷ್ಪಾಲಂಕೃತ ರಥದಲ್ಲಿರಿಸಿದ ಬಳಿಕ ಸ್ಥಳೀಯ ವೆಳ್ಳಾರ ಸಂಘದ ಅಧ್ಯಕ್ಷ ಮುನ್ನಸ್ವಾಮಿ, ಎನ್.ನವೀನ್, ಸಚಿನ್, ಸತ್ಯಭಾಮ ಮತ್ತಿತರರು ರಥಕ್ಕೆ ಸಂಪ್ರದಾಯದಂತೆ ಮೊದಲ ಪೂಜೆ ಮಾಡಿದರು. ನಂತರ ಅರ್ಚಕರ ತಂಡ ಪೂಜಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿತು.

    ರಥದ ಸಮೀಪದಲ್ಲಿ ಹೆಬ್ಬಾಲೆಯ ಜಗ್ಗ ಎಂಬುವರು ಜೋಡಿ ಎತ್ತುಗಳಿಗೆ ಗೋ ಪೂಜೆ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಗಣಪತಿ ದೇವರ ಘೋಷದೊಂದಿಗೆ ರಥವನ್ನು ಎಳೆದು ಪುನೀತರಾದರು.

    ದೇವಾಲಯದ ಮುಂಬದಿಯಿಂದ ಹೊರಟ ವಿನಾಯಕನ ರಥವನ್ನು ರಥಬೀದಿಯ ಆಂಜನೇಯಸ್ವಾಮಿ ದೇವಾಲಯದವರೆಗೆ ಎಳೆದು ತಂದು ಬಳಿಕ ಸ್ವಸ್ಥಾನಕ್ಕೆ ಮರಳಿಸಿದರು. ರಥೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ಹೃದಯ ಭಾಗದಲ್ಲಿರುವ ಗಣಪತಿ ದೇವಾಲಯವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರಬಾಬು ನೇತೃತ್ವದ ಅರ್ಚಕರ ತಂಡ ಪೂಜೆ ಹಾಗೂ ರಥಬಲಿ ಮೊದಲಾದ ಸೇವೆಗಳನ್ನು ನಡೆಸಿತು.

    ಈಡುಗಾಯಿ ಭಕ್ತಿ ಸಮರ್ಪಣೆ: ದೇವಾಲಯದ ಎದುರು ಅಲಂಕೃತ ರಥದೊಳಗೆ ಗಣಪತಿ ದೇವರನ್ನು ಪ್ರತಿಷ್ಠಾಪಿಸಿದೊಡನೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತ ಹಲವು ಭಕ್ತರು ನೂರಾರು ಸಂಖ್ಯೆಯಲ್ಲಿ ದೇವರ ಹೆಸರಿನಲ್ಲಿ ಈಡುಗಾಯಿ ಒಡೆದು ಹರಕೆ ತೀರಿಸಿದರು.

    ರಥೋತ್ಸವ ಸಾಗುತ್ತಿದ್ದ ರಥಬೀದಿಯ ಮಾರ್ಗದಲ್ಲಿದ್ದ ವಿದ್ಯುತ್ ತಂತಿಗಳನ್ನು ಸರಿಸುವ ಕಾಯಕದಲ್ಲಿ ಸ್ಥಳೀಯ ಸೆಸ್ಕ್ ಸಿಬ್ಬಂದಿ ತೊಡಗಿದ್ದರು. ಈಡುಗಾಯಿಯ ತೆಂಗಿನ ಕಂಠದ ಚೂರುಗಳು ಭಕ್ತರ ಬರಿಗಾಲಿಗೆ ತಾಗದಂತೆ ರಸ್ತೆಯನ್ನು ಸ್ವಚ್ಛಗೊಳಿಸುವ ಮೂಲಕ ಪಂಚಾಯಿತಿ ಪೌರಕಾರ್ಮಿಕರು ಕಾಯಕ ಮೆರೆದರು.

    ರಥೋತ್ಸವದ ಚಾಲನೆಗೂ ಮೊದಲು ದೇವಾಲಯದ ಮುಂದೆ ಸಂಪ್ರದಾಯದಂತೆ ಗೋಪೂಜೆ ನೆರವೇರಿಸಲಾಯಿತು. ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ರಥದ ಮುಂದೆ ಸಾಮೂಹಿಕ ಕರ್ಪೂರ ಹಚ್ಚುವುದರ ಜತೆಗೆ ಭಜನೆ ಮಾಡಿದರು. ಉದ್ಯಮಿ ಕೆ.ಜೆ.ಚಿನ್ನಸ್ವಾಮಿ ನೂರಾರು ಜನರಿಗೆ ಮಜ್ಜಿಗೆ ವಿತರಿಸಿದರು.

    ಜಾತ್ರೆ ಹಾಗೂ ಸಾಂಸ್ಕೃತಿಕ ಪ್ರದರ್ಶನಕ್ಕೆ ಸಿದ್ಧತೆ: ರಥೋತ್ಸವದ ಬಳಿಕ ಹತ್ತಾರು ದಿನಗಳು ನಡೆಯುವ ಜಾತ್ರೋತ್ಸವ ಈ ಬಾರಿಯೂ ನಡೆಯಲಿದೆ. ಕೋವಿಡ್ ಕಾರಣದಿಂದ ಸಭೆ, ಸಮಾರಂಭಗಳಿಗೆ ಅವಕಾಶವಿರಲಿಲ್ಲ. ಈ ಬಾರಿ ಅದ್ದೂರಿಯಾಗಿ ಜಾತ್ರೋತ್ಸವ ಆಚರಿಸುತ್ತಿರುವುದರಿಂದ ನ.22 ರವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿ.ಪಿ.ಶಶಿಧರ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
    ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ದೇವಾಲಯ ಸಮಿತಿ ವತಿಯಿಂದ ಮಾರ್ಕೆಟ್ ರಸ್ತೆಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಡಿವೈಎಸ್ಪಿ ಗಂಗಾಧರಪ್ಪ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

    ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್, ಕಾರ್ಯದರ್ಶಿ ಮುತ್ತಣ್ಣ, ಶ್ರೀನಿವಾಸರಾವ್, ಜಿ.ಎಲ್.ನಾಗರಾಜು, ವಿ.ಪಿ.ಶಶಿಧರ್, ಪುಂಡರೀಕಾಕ್ಷ, ಮುನಿಸ್ವಾಮಿ, ಬಾಬು, ಎಂ.ವಿ.ನಾರಾಯಣ, ಕೆ.ಎನ್. ದೇವರಾಜ್, ಡಿ.ವಿ.ರಾಜೇಶ್, ಎಚ್.ಡಿ.ಚಂದು ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts