More

    ವಾಲಿ ಶ್ರೀ ಆಸ್ಪತ್ರೆಯಲ್ಲಿ ಕರೊನಾ ಚಿಕಿತ್ಸೆ

    ಬೀದರ್: ನಿರಂತರ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿರುವ ಅಕ್ಕಮಹಾದೇವಿ ಕಾಲೇಜು ಹಿಂಭಾಗದ ವಾಲಿ ಶ್ರೀ ಆಸ್ಪತ್ರೆಯು ಇದೀಗ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರ್ಧರಿಸಿದೆ. ಈ ಮೂಲಕ ಗಡಿ ಜಿಲ್ಲೆಯಲ್ಲಿ ಕರೊನಾ ರೋಗಿಗಳ ಚಿಕಿತ್ಸೆಗೆ ಮುಂದೆ ಬಂದ ಮೊದಲ ಖಾಸಗಿ ಆಸ್ಪತ್ರೆ ಎಂಬ ಖ್ಯಾತಿ ಪಡೆದಿದೆ.
    ಸೋಂಕಿತರ ಸಂಖ್ಯೆ ಕ್ರಮೇಣ ಹಚ್ಚಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆಯಾಗುತ್ತಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಬೇಕೆಂಬ ರಾಜ್ಯ ಸರ್ಕಾರದ ಕರೆಗೆ ವಾಲಿಶ್ರೀ ಆಸ್ಪತ್ರೆ ಸ್ಪಂದಿಸಿದೆ. ಇಲ್ಲಿ ಕರೊನಾ ಸೋಂಕಿತರಿಗಾಗಿ 25 ಹಾಸಿಗೆ ವಿಶೇಷ ವಾರ್ಡ್​ ಸ್ಥಾಪಿಸಲಾಗಿದೆ. ಮಂಗಳವಾರದಿಂದ (ಜು.21) ಇಲ್ಲಿ ಲಕ್ಷಣರಹಿತ (ಅಸಿಂಪ್ಟಾಮೆಟಿಕ್) ಕರೊನಾ ಸೋಂಕಿತರಿಗೆ ಸೇವೆ ನೀಡಲಾಗುತ್ತದೆ.
    ಜಿಲ್ಲಾಧಿಕಾರಿ ರಾಮಚಂದ್ರನ್, ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ವಿಶೇಷ ವಾರ್ಡ್​ ಪರಿಶೀಲಿಸಿ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಲಕ್ಷಣರಹಿತ ಸೋಂಕಿತರ ಚಿಕಿತ್ಸೆಗೆ ವಾಲಿಶ್ರೀ ಆಸ್ಪತ್ರೆಯವರು ನಿರ್ಧಾರ ಕೈಗೊಂಡಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತ್ತಪಡಿಸಿದರು.
    ವಾಲಿಶ್ರೀ ಆಸ್ಪತ್ರೆ ಅಧ್ಯಕ್ಷ ಡಾ.ರಜನೀಶ್ ವಾಲಿ ಮಾತನಾಡಿ, ಕೋವಿಡ್ ನಿಯಮದಂತೆ ವಾರ್ಡ್​ ಸಿದ್ಧಪಡಿಸಲಾಗಿದೆ. 25 ಬೆಡ್ಗಳನ್ನು ಕಾದಿರಿಸಲಾಗಿದೆ. ಪ್ರವೇಶ, ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಇದೆ. ಅಂತರ ಕಾಯ್ದುಕೊಳ್ಳುವಿಕೆ, ಸ್ಯಾನಿಟೈಸೇಷನ್ ಸೇರಿ ಚಿಕಿತ್ಸೆಗೆ ಸಂಬಂಧಿಸಿದಂತೆ ಎಲ್ಲ ನಿಯಮ ಪಾಲಿಸಲಾಗಿದೆ. ಸದಾ ಸಾಮಾಜಿಕ ಕಾಳಜಿಯಿಂದ ಕೆಲಸ ಮಾಡುತ್ತಿರುವ ಆಸ್ಪತ್ರೆ, ಇದೀಗ ಸೋಂಕಿತರಿಗೆ ಬೆಡ್ ಒದಗಿಸಿ ಕರೊನಾ ಸಂಕಷ್ಟದ ವೇಳೆ ಸಾರ್ವಜನಿಕರ ನೆರವಿಗೆ ಬಂದಿದೆ. ಮಂಗಳವಾರ ಜಿಲ್ಲಾಧಿಕಾರಿಗಳು ವಿಶೇಷ ವಾರ್ಡ್​ ಚಿಕಿತ್ಸೆಗೆ ಚಾಲನೆ ನೀಡುವರು ಎಂದು ತಿಳಿಸಿದರು. ಅಪರ ಡಿಸಿ ರುದ್ರೇಶ ಗಾಳಿ, ಆಸ್ಪತ್ರೆ ನಿರ್ದೇಶಕ ಡಾ.ರಾಜಶೇಖರ ಸೇಡಂಕರ್, ಐಎಂಎ ಜಿಲ್ಲಾಧ್ಯಕ್ಷ ಡಾ.ವಿ.ವಿ. ನಾಗರಾಜ, ಪ್ರಮುಖರಾದ ಆದೀಶ್ ವಾಲಿ, ಡಾ.ಮಕ್ಸೂದ್ ಚಂದಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts