More

    ವಾರ ಕಳೆದರೂ ಆರಂಭವಾಗದ ಆರ್‌ಟಿಪಿಸಿಆರ್ ಹೈಟೆಕ್ ಪ್ರಯೋಗಾಲಯ

    ಚಿಕ್ಕಬಳ್ಳಾಪುರ: ಕರೊನಾ ಸೋಂಕು ಪತ್ತೆ ಹಾಗೂ ಸುರಕ್ಷತೆ ಖಾತ್ರಿಯ ಆರ್‌ಟಿಪಿಸಿಆರ್ ಹೈಟೆಕ್ ಪ್ರಯೋಗಾಲಯ ಜಿಲ್ಲಾಸ್ಪತ್ರೆಯಲ್ಲಿ ಉದ್ಘಾಟನೆಯಾಗಿ ವಾರವಾದರೂ ಕಾರ್ಯಾರಂಭ ಮಾಡದಿರುವುದು ತುರ್ತು ಆರೋಗ್ಯ ಸೇವೆಯ ಸಮಯದಲ್ಲೂ ಜನಪ್ರತಿನಿಧಿಗಳ ಉದ್ಘಾಟನೆ ನಾಟಕಕ್ಕೆ ಸಾಕ್ಷಿಯಾಗಿದೆ!.

    ಜು.11 ರಂದು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ದೇಶದಲ್ಲಿಯೇ ಮೊಟ್ಟ ಮೊದಲ ಪ್ರಯೋಗಾಲಯ ಉದ್ಘಾಟಿಸಿದರು. ಆದರೆ, ಇದುವರೆಗೂ ಪ್ರಾರಂಭವಾಗಿಲ್ಲ. ಮಾದರಿಗಳ ತ್ವರಿತ ಪರೀಕ್ಷೆಗೆ ತೊಡಕಾಗಿದ್ದು, ಸಿಬ್ಬಂದಿ ಸಾಮಾನ್ಯ ಕೇಂದ್ರದಲ್ಲೇ ಆತಂಕದಿಂದ ಕಾರ್ಯನಿರ್ವಹಿಸುವಂತಾಗಿದೆ.

    ಸಿಬ್ಬಂದಿಗೆ ತರಬೇತಿ, ಟ್ರಯಲ್ ಕೆಲಸ, ತಾಂತ್ರಿಕ ಸಮಸ್ಯೆ ಸೇರಿ ನಾನಾ ಕಾರಣಗಳಿಂದ ಕಾರ್ಯಾರಂಭಿಸಲು ತೊಡಕಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮಜಾಯಿಷಿ ನೀಡುತ್ತಿದೆ. ಲ್ಯಾಬ್ ಸಜ್ಜಾಗದಿದ್ದರೂ ಏಕೆ ಉದ್ಘಾಟನೆ ಮಾಡಬೇಕಿತ್ತು? ಜನಪ್ರತಿನಿಧಿಗಳ ಪ್ರಚಾರಕ್ಕೆ ಚಾಲನೆ ನೀಡಿ, ಬಳಿಕ ಬಳಸದೇ ಸುಮ್ಮನಿರುವುದು ಸರಿಯೇ ಎಂಬುದು ಸಾರ್ವಜನಿಕರ ಪ್ರಶ್ನೆ.

    ತ್ವರಿತ ಪರೀಕ್ಷೆಗೆ ತೊಡಕು : ಇಲ್ಲಿನ ಪ್ರಯೋಗಾಲಯದಲ್ಲಿ ಪ್ರತಿ ನಾಲ್ಕು ಗಂಟೆಗೆ 100 ಗಂಟಲು ದ್ರವ ಮಾದರಿ ಪರೀಕ್ಷಿಸಬಹುದು. ಲ್ಯಾಬ್ ಕಾರ್ಯಾರಂಭಿಸಿದರೆ ದಿನದಲ್ಲಿ 500 ಮಾದರಿಗಳ ವರದಿ ನೀಡಬಹುದು. ಲ್ಯಾಬ್ ಜು.11 ರಿಂದಲೇ ಕಾರ್ಯಾರಂಭಿಸಿದ್ದರೆ ಇಲ್ಲಿಯವರೆಗೂ ಕನಿಷ್ಠ 3 ಸಾವಿರ ಮಾದರಿಗಳ ಪರೀಕ್ಷಾ ವರದಿ ನೀಡಬಹುದಾಗಿತ್ತು.
    ಬೆಂಗಳೂರಿಗೆ ಕಳುಹಿಸಬೇಕಿತ್ತು!: ಈ ಹಿಂದೆ ಶಂಕಿತರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಇದರಿಂದ ಫಲಿತಾಂಶ ಬರಲು ವಿಳಂಬವಾಗುತ್ತಿತ್ತು. ಇದರ ನಡುವೆ ಹಳೇ ಜಿಲ್ಲಾಸ್ಪತ್ರೆ ಕರೊನಾ ಚಿಕಿತ್ಸಾ ಕೇಂದ್ರಕ್ಕೆ ಸೋಂಕು ಪತ್ತೆಯ ಎರಡು ಯಂತ್ರಗಳನ್ನು ನೀಡಲಾಗಿದ್ದು, ದಿನಕ್ಕೆ ಕನಿಷ್ಠ 50 ಮಾದರಿಯನ್ನು ಸ್ಥಳೀಯವಾಗಿ ಪರೀಕ್ಷಿಸಬಹುದು ಎನ್ನಲಾಗಿದೆ. ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಸಜ್ಜಿತ ಆರ್‌ಟಿಪಿಸಿಆರ್ ಪ್ರಯೋಗಾಲಯ ಸ್ಥಾಪಿಸಲಾಗಿದೆ, ಆದರೆ ಆರಂಭವಾಗಿಲ್ಲ.

    ಜಿಲ್ಲಾಸ್ಪತ್ರೆಯಲ್ಲಿ ಉದ್ಘಾಟನೆ ಕಂಡ ಆರ್‌ಟಿಪಿಸಿಆರ್ ಪ್ರಯೋಗಾಲಯ ತಾಂತ್ರಿಕ ಸಮಸ್ಯೆಗಳಿಂದ ಇನ್ನೂ ಪ್ರಾರಂಭವಾಗಿಲ್ಲ.
    ಡಾ ಬಿ.ಎಂ.ಯೋಗೀಶ್‌ಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts