More

    ವಾರ್ಡ್ ಸಮಿತಿ ರಚನೆಗೆ ನಿರಾಸಕ್ತಿ


    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಕಳಪೆ ಕಾಮಗಾರಿ, ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದ ಅಭಿವೃದ್ಧಿ ಕೆಲಸಗಳಿಂದಾಗಿ ನಾಗರಿಕರು ಬೇಸತ್ತಿದ್ದಾರೆ.
    ಅವ್ಯವಹಾರಗಳನ್ನು ನಿಯಂತ್ರಿಸಿ, ಗುಣಮಟ್ಟದ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಡಲು ನಾಗರಿಕ ವಾರ್ಡ್ ಕಮಿಟಿ ರಚಿಸಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಹೆಚ್ಚಿದೆ. ಆದರೆ, ಅಧಿಕಾರಿಗಳು, ಕೆಲ ಪುರಪಿತೃರು ವಾರ್ಡ್ ಸಮಿತಿ ರಚನೆಗೆ ನಿರಾಸಕ್ತಿ ತೋರುತ್ತಿದ್ದಾರೆ.
    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಾಕಷ್ಟು ಅನುದಾನ ಮಹಾನಗರಕ್ಕೆ ಹರಿದು ಬರುತ್ತಿದೆ. ಆದರೆ, ಈ ಅನುದಾನ ಸದ್ಭಳಕೆ ಆಗುತ್ತಿಲ್ಲ ಎಂಬ ಕೊರಗು ಅವಳಿ ನಗರದ ನಾಗರಿಕರದು. ಕೆಲವೆಡೆ ಗಟಾರುಗಳನ್ನು ನಿರ್ವಿುಸಿದ್ದರೂ ನೀರು ಸರಿಯಾಗಿ ಹರಿದು ಹೋಗುತ್ತಿಲ್ಲ, ರಸ್ತೆ ನಿರ್ವಿುಸಿದ ಕೆಲವೇ ದಿನಗಳಲ್ಲಿ ಮತ್ತೆ ಅಗೆಯುವುದು, ವಿವಿಧ ಇಲಾಖೆಗಳ ಮಧ್ಯೆ ಇರುವ ಸಂವಹನ ಕೊರತೆ ಸೇರಿ ಹಲವಾರು ಸಮಸ್ಯೆಗಳಿಂದ ಸಾರ್ವಜನಿಕರು ಬೇಸತ್ತಿದ್ದು, ನಾಗರಿಕ ವಾರ್ಡ್ ಸಮಿತಿ ರಚನೆಯಿಂದ ಮಾತ್ರ ಈ ಸಮಸ್ಯೆಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.
    ನಾಗರಿಕ ವಾರ್ಡ್ ಸಮಿತಿ ರಚನೆಗಾಗಿ ಕಳೆದ ಏ. 5 ಹಾಗೂ ಜೂ. 17ರಂದು ಆಸಕ್ತ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, 82 ವಾರ್ಡ್​ಗಳಿಂದ 627 ಅರ್ಜಿಗಳು ಮಾತ್ರ ಬಂದಿದ್ದವು. ಕೆಲ ವಾರ್ಡ್​ಗಳಿಂದ 10 ಅರ್ಜಿಗಳೂ ಬಂದಿರಲಿಲ್ಲ. ಹೀಗಾಗಿ, ಮತ್ತೊಮ್ಮೆ ಅರ್ಜಿ ಕರೆಯಬೇಕೋ ಅಥವಾ ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದರ ತೀರ್ವನವನ್ನು ಗುರುವಾರ ನಡೆಯಲಿರುವ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯ ನಿರ್ಧಾರಕ್ಕೆ ಬಿಡಲಾಗಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರದ ಆಧಾರದ ಮೇಲೆ ನಾಗರಿಕ ವಾರ್ಡ್ ಸಮಿತಿ ರಚನೆಯ ಭವಿಷ್ಯ ನಿಂತಿದೆ.
    ವಾರ್ಡ್ ಸಮಿತಿ ಕಾರ್ಯ: ಆಯಾ ವಾರ್ಡ್​ನಲ್ಲಿ ಕೈಗೊಳ್ಳಬೇಕಿರುವ ವಿವಿಧ ಕಾಮಗಾರಿಗಳನ್ನು ಗುರುತಿಸುವುದು, ಕಾಮಗಾರಿಗಳ ಆದ್ಯತೆ ನಿಗದಿಪಡಿಸುವುದು, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುವುದು, ಮತ್ತಿತರ ಕಾರ್ಯಗಳು.
    ಸಮಿತಿ ಹೀಗಿರಲಿದೆ: ಪ್ರತಿ ವಾರ್ಡ್​ನಲ್ಲಿ ನಾಗರಿಕರ ವಾರ್ಡ್ ಸಮಿತಿ ರಚಿಸಿದಲ್ಲಿ ಆಯಾ ವಾರ್ಡ್​ನಲ್ಲಿ ನಡೆಯಲಿರುವ ಅಭಿವೃದ್ಧಿ ಕಾರ್ಯಗಳ ಮೇಲೆ ಸಮಿತಿ ಸದಸ್ಯರು ನಿಗಾ ವಹಿಸುತ್ತಾರೆ. 10 ಸದಸ್ಯರು ಇರುವ ನಾಗರಿಕ ವಾರ್ಡ್ ಸಮಿತಿಯಲ್ಲಿ ಮೂವರು ಮಹಿಳೆಯರು, ಇಬ್ಬರು ಪರಿಶಿಷ್ಟ ಜಾತಿ, ಪಂಗಡದವರು ಮತ್ತು ಎರಡು ಸ್ಥಾನಗಳು ನೋಂದಾಯಿತ ಸ್ಥಳೀಯ ಕ್ಷೇಮಾಭಿವೃದ್ಧಿ ಸಂಘ-ಸಂಸ್ಥೆಗಳಿಗೆ ಮೀಸಲಿರುತ್ತವೆ. ಉಳಿದ 3 ಸ್ಥಾನಗಳು ಸಾಮಾನ್ಯ ವರ್ಗದ ನಾಗರಿಕರಿಗೆ ಲಭ್ಯವಿರುತ್ತವೆ. ಪ್ರತಿ ವಾರ್ಡ್​ನ ಪಾಲಿಕೆ ಸದಸ್ಯರು ಸಮಿತಿ ಅಧ್ಯಕ್ಷರಾಗಿರುತ್ತಾರೆ. ಪ್ರತಿ ವಾರ್ಡ್ ಸಮಿತಿಗೆ ಒಬ್ಬ ಅಧಿಕಾರಿಯನ್ನು ಸಮಿತಿಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗುತ್ತದೆ. ಆ ಅಧಿಕಾರಿ ಪಾಲಿಕೆ ನಿರ್ಣಯಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಮಿತಿಗೆ ಸಲ್ಲಿಸಬೇಕಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts