More

    ‘ವಾರ್ಡ್ ಸಮಿತಿ’ ಪ್ರಕ್ರಿಯೆಗೆ ಗ್ರಹಣ!

    ಬೆಳಗಾವಿ: ಸ್ಥಳೀಯ ಆಡಳಿತದಲ್ಲಿ ನಾಗರಿಕರ ಸಹಭಾಗಿತ್ವದೊಂದಿಗೆ ವಾರ್ಡ್‌ಗಳಲ್ಲಿ ಪರಿಣಾಮಕಾರಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ‘ನಾಗರಿಕರ ವಾರ್ಡ್ ಸಮಿತಿ’ ರಚನೆ ಮಾಡಬೇಕೆಂಬ ಕಾಯ್ದೆ ಇದ್ದರೂ ಬೆಳಗಾವಿ ಮಹಾನಗರದಲ್ಲಿ ಸಮಿತಿ ರಚನೆಯಾಗದಿರುವುದಕ್ಕೆ ನಾಗರಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

    ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ಸ್ ಕಾಯ್ದೆಯನ್ವಯ ಮಹಾನಗರ ಪಾಲಿಕೆಗಳ ಪ್ರತಿಯೊಂದು ವಾರ್ಡ್‌ನಲ್ಲಿ ‘ನಾಗರಿಕರ ವಾರ್ಡ್ ಸಮಿತಿ’ ರಚಿಸಬೇಕೆಂಬ ಕಾನೂನಿದೆ. ಈಗಾಗಲೇ ಬೆಂಗಳೂರು, ಮಂಗಳೂರು ಸೇರಿ ಕರ್ನಾಟಕದ ಇತರ ಮಹಾನಗರ ಪಾಲಿಕೆಯಲ್ಲಿ ಎರಡು ವರ್ಷಗಳ ಹಿಂದೆಯೇ ಈ ಶಾಸನಾತ್ಮಕ ಕಾನೂನಿನಡಿ ವಾರ್ಡ್ ಸಮಿತಿ ರಚಿಸಲಾಗಿದೆ. ಆದರೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಮಿತಿ ರಚನೆಗೆ ಅಧಿಕಾರಿಗಳು ಆಸಕ್ತಿ ತೋರದ ಕಾರಣ ಸಮಿತಿ ರಚನೆ ಕಾರ್ಯ ನನೆಗುದಿಗೆ ಬಿದ್ದಿದೆ. ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಹಾಗೂ ಸಾರ್ವಜನಿಕರ ಹಣ ದುರ್ಬಳಕೆಯಾಗಬಾರದೆಂಬ ಉದ್ದೇಶದಿಂದ ‘ನಾಗರಿಕರ ವಾರ್ಡ್ ಸಮಿತಿ’ ರಚಿಸಲು ಆದೇಶವಿದೆ.

    ಸಮಿತಿಯಲ್ಲಿ ಯಾರಿರುತ್ತಾರೆ?: ‘ನಾಗರಿಕರ ವಾರ್ಡ್ ಸಮಿತಿ’ಯಲ್ಲಿ 3 ಮಹಿಳೆಯರು, ಪರಿಶಿಷ್ಟ ಜಾತಿ ಓರ್ವ ವ್ಯಕ್ತಿ, ಪರಿಶಿಷ್ಟ ಪಂಗಡದ ಓರ್ವ ವ್ಯಕ್ತಿ ಹಾಗೂ ನೋಂದಾಯಿತ ಸಂಘ-ಸಂಸ್ಥೆಗಳ ಇಬ್ಬರು ಸದಸ್ಯರು ಸೇರಿ 10 ಜನರಿರುತ್ತಾರೆ. ವಾರ್ಡ್ ಪ್ರತಿನಿಧಿಸುವ ಪಾಲಿಕೆ ಸದಸ್ಯ ಸಮಿತಿ ಕಾರ್ಯದರ್ಶಿಯಾಗಿರುತ್ತಾರೆ. ಮಹಾಪೌರರು ಸಮಿತಿ ಅಧ್ಯಕ್ಷರಾಗಿರುತ್ತಾರೆ. ಮಹಾನಗರ ಪಾಲಿಕೆ ಆಯುಕ್ತರ ನಿರ್ದೇಶನ ನೀಡುತ್ತಾರೆ. ಈ ಸಮಿತಿಯು ಪ್ರತಿ ತಿಂಗಳು ಸಭೆ ನಡೆಸಬೇಕು. ವಾರ್ಡ್‌ಗೆ ಬಿಡುಗಡೆಯಾದ ಅನುದಾನವು ಸಮಿತಿ ಗಮನಕ್ಕೆ ತಂದ ಬಳಿಕವೇ ಬಳಸಬೇಕೆಂಬ ನಿಯಮ ರೂಪಿಸಲಾಗಿದೆ. ವಾರ್ಡ್‌ನಲ್ಲಿ ಏನೇನು ಕುಂದು-ಕೊರತೆಗಳು ಇವೆ. ಯಾವ್ಯಾವ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಭೆ ಸೇರಿ ಚರ್ಚಿಸಿ, ಅನುಮೋದನೆಗೆ ಕಳುಹಿಸಬೇಕು. ಇಷ್ಟೆಲ್ಲ ಮಹತ್ವದ ಹೊಂದಿರುವ ವಾರ್ಡ್ ಸಮಿತಿ ರಚಿಸುವುದಕ್ಕೆ ನಿರಾಸಕ್ತಿ ತೋರಿಸಲಾಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

    ಹುಬ್ಬಳ್ಳಿ-ಧಾರವಾಡ, ಕಲಬುರಗಿಯಲ್ಲಿ ಮಹಾನಗರ ಪಾಲಿಕೆಯಲ್ಲಿ ಮಹಾಪೌರ, ಉಪಮಹಾಪೌರರ ಆಯ್ಕೆ ಆಗಿಲ್ಲ. ಆದರೆ,ನಾಗರಿಕರ ವಾರ್ಡ್ ಸಮಿತಿ ರಚಿಸುವುದಕ್ಕೆ ಸಂಬಂಧಿಸಿದಂತೆ ನೋಟಿಫಿಕೇಶನ್ ಆಗಿದೆ. ಬೆಳಗಾವಿಯಲ್ಲಿ ಇಂತಹ ಯಾವ ಪ್ರಕ್ರಿಯೆಯೂ ಆಗಿಲ್ಲ. ಸಮಿತಿ ರಚಿಸುವುದು ಇನ್ನೂ ಸಮಯ ಹಿಡಿಯಬಹುದು. ಆದರೆ, ಇಂತಹದ್ದೊಂದು ನಾಗರಿಕ ವಾರ್ಡ್ ಸಮಿತಿ ಇದೆ ಎಂಬ ಬಗ್ಗೆ ಅಧಿಕಾರಿಗಳು ನಗರದ ಜನರಲ್ಲಿ ಜಾಗೃತಿ ಮೂಡಿಸಿಲ್ಲ ಎನ್ನುವುದೇ ಸೋಜಿಗ.

    ಬೆಳಗಾವಿ ಮಹಾನಗರದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಪ್ರತಿ ವಾರ್ಡ್ ಗಳಲ್ಲೂ ಸಹ ನಾಗರಿಕರ ವಾರ್ಡ್ ಸಮಿತಿ ರಚಿಸುವ ಸಂಬಂಧ ಅಧಿಸೂಚನೆ ಹೊರಡಿಸುವಂತೆ ಮಹಾನಗರ ಪಾಲಿಕೆಗೆ ಮನವಿ ಮಾಡಲಾಗಿದೆ. ಬೆಳಗಾವಿ ನಾಗರಿಕರ ವಾರ್ಡ್ ಸಮಿತಿ ಬಳಗದಿಂದ ಸ್ಥಳೀಯ ಆಡಳಿತದಲ್ಲಿ ನಾಗರಿಕರ ಸಹಭಾಗಿತ್ವದ ಬಗ್ಗೆ ಕೆಲ ದಿನಗಳ ಹಿಂದೆ ಆಸಕ್ತ ನಾಗರಿಕರಿಗೆ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿತ್ತು. ಸಮಿತಿ ಬಗ್ಗೆ ತಿಳಿ ಹೇಳಲಾಗುತ್ತಿದೆ.
    |ಗೌರಿ ಗಜಬರ್, ಬೆಳಗಾವಿ ನಾಗರಿಕರ ವಾರ್ಡ್ ಸಮಿತಿ ಸಂಚಾಲಕಿ

    ಮಹಾನಗರ ಪಾಲಿಕೆ ಚುನಾಯಿತ ಸದಸ್ಯರು ಇನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ. ಹೀಗಾಗಿ ನಾಗರಿಕರ ವಾರ್ಡ್ ಸಮಿತಿ ರಚಿಸುವ ಕುರಿತಂತೆ ಸ್ಪಷ್ಟೀಕರಣ ಕೇಳಿ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಸ್ಪಷ್ಟೀಕರಣಕ್ಕಾಗಿ ಕಾಯುತ್ತಿದ್ದೇವೆ.
    |ರುದ್ರೇಶ ಘಾಳಿ ಮಹಾನಗರ ಪಾಲಿಕೆ ಆಯುಕ್ತ ಬೆಳಗಾವಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts