More

    ವಾರ್ಡ್‌ನಂತೆ ಸಮಸ್ಯೆಗಳೂ ದೊಡ್ಡವು, ರಾಜೀವ್ ಗಾಂಧಿ ಆಶ್ರಯ ಬಡಾವಣೆ, ಸುಭಾಷ್‌ನಗರ ಒಳಗೊಂಡ ವಾರ್ಡ್

    ರಾಜೇಶ್.ಎಸ್.ಜಿ ಮುಕ್ಕೇನಹಳ್ಳಿ ದೊಡ್ಡಬಳ್ಳಾಪುರ
    ನಗರಸಭೆಯ ಮೊದಲ ವಾರ್ಡ್ ರಾಜೀವ್ ಗಾಂಧಿ ಆಶ್ರಯ ಬಡಾವಣೆ, ಸುಭಾಷ್ ನಗರವನ್ನು ಒಳಗೊಂಡಿದೆ. ಆಶ್ರಯ ಬಡಾವಣೆ ಇರುವ ಗಂಗಾಧರಪುರ, ರಾಜೀವ್ ಗಾಂಧಿ ಬಡಾವಣೆಯ 2 ಹಂತಗಳು, ಸುಭಾಷ್‌ನಗರ ಸೇರಿ ನಗರಸಭೆಯ ಅತಿದೊಡ್ಡ ವಾರ್ಡ್ ಎಂಬ ಹೆಗ್ಗಳಿಕೆ ಹೊಂದಿದೆ. ಬಡಾವಣೆಯಷ್ಟೇ ಬೃಹತ್ತಾದ ಸಮಸ್ಯೆಗಳೂ ಇಲ್ಲಿವೆ.

    ರಾಜೀವ್ ಗಾಂಧಿ ಮತ್ತು ಗಂಗಾಧರಪುರ ಬಡಾವಣೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಒಂದರ್ಥದಲ್ಲಿ ಇದು ರಸ್ತೆಯ ರೂಪವನ್ನೇ ಕಳೆದುಕೊಂಡಿದೆ ಎಂದರೂ ಅತಿಶಯೋಕ್ತಿಯಲ್ಲ. ಮಳೆಗಾಲದಲ್ಲಿ ಸಣ್ಣದಾಗಿದ್ದ ಗುಂಡಿಗಳು ಬೇಸಿಗೆ ವೇಳೆಗೆ ಹೊಂಡಗಳ ರೂಪು ಪಡೆದುಕೊಂಡಿವೆ. ಈ ರಸ್ತೆಯಲ್ಲಿ ಸಂಚರಿಸುವಾಗ ಜನ, ವಾಹನ ಸವಾರರಿಗೆ ನಿತ್ಯವೂ ನರಕ ದರ್ಶನವಾಗುತ್ತದೆ.
    ತುಮಕೂರು ರಸ್ತೆಯಿಂದ ಒಂದನೇ ಹಂತದ ರಾಜೀವ್ ಗಾಂಧಿ ಬಡಾವಣೆಗೆ ಸಂಪರ್ಕ ಒದಗಿಸುವ 1 ಕಿಮೀ ಉದ್ದದ ರಸ್ತೆಯಲ್ಲಿ ಜಲ್ಲಿ ಕಲ್ಲುಗಳೇ ಕಾಣಿಸುತ್ತವೆ. ಈ ರಸ್ತೆಯಲ್ಲಿ ಸಂಚರಿಸುವಾಗ ದ್ವಿಚಕ್ರವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ, ಗಂಭೀರವಾಗಿ ಗಾಯಗೊಳ್ಳುವುದು ನಿಶ್ಚಿತ.

    ಕುಡುಕರ ಹಾವಳಿ: ಚಂದ್ರಮೌಳೇಶ್ವರ ಬಡಾವಣೆಯಂತೂ ಕುಡುಕರ ಅಡ್ಡೆಯಾಗಿದೆ. ಮದ್ಯಪಾನ ಮಾಡಿ, ರಸ್ತೆಯಲ್ಲೇ ತೂರಾಡುವವರಿಂದ ಜನರಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ಬಡಾವಣೆಯಲ್ಲಿ ಹಗಲು ಸಮಯದಲ್ಲೇ ಮಹಿಳೆಯರು, ಮಕ್ಕಳು ಒಂಟಿಯಾಗಿ ಓಡಾಡದ ಸ್ಥಿತಿ ನಿರ್ಮಾಣವಾಗಿದೆ.
    ಗಂಗಾಧರಪುರ ಮತ್ತು ರಾಜೀವ್ ಗಾಂಧಿ ಬಡಾವಣೆಯ 2ನೇ ಹಂತದಲ್ಲೂ ಇದೇ ಪರಿಸ್ಥಿತಿ ಇದೆ. ಸಮೀಪದಲ್ಲೇ ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಇವೆ. ಇಲ್ಲಿಗೆ ಹೋಗಿ ಬರುವ ವಿದ್ಯಾರ್ಥಿಗಳ ಪಾಡು ತುಂಬಾ ಶೋಚನೀಯವಾಗಿದೆ.

    ಹುಡುಕಿದರೂ ಚರಂಡಿಗಳು ಸಿಗಲ್ಲ: ರಾಜೀವ್ ಗಾಂಧಿ ಬಡಾವಣೆಯ ಒಂದನೇ ಹಂತದಲ್ಲಿ ಚರಂಡಿಗಳೇ ನಿರ್ಮಾಣವಾಗಿಲ್ಲ. ಇದರಿಂದಾಗಿ ಮನೆಗಳ ಅಕ್ಕಪಕ್ಕದಲ್ಲೇ ಕೊಳಚೆ ಹರಿದು, ನಿತ್ಯವೂ ಜನರು ಜಗಳವಾಡುವ ದೃಶ್ಯ ಸಾಮಾನ್ಯವಾಗಿದೆ. ಮಳೆ ಬಂದರೆ ನೀರು ಮನೆಗಳಿಗೆ ನುಗ್ಗುತ್ತದೆ. ಇದರಿಂದ ಮಳೆಯಾದ ರಾತ್ರಿ ಜನರು ಜಾಗರಣೆ ಮಾಡುವುದು ಸಾಮಾನ್ಯವಾಗಿದೆ.

    ಸ್ವಚ್ಛತೆಯೂ ಮಾಯ: ವಾರ್ಡ್‌ನಾದ್ಯಂತ ಕಸದ ರಾಶಿಗಳೇ ನಿರ್ಮಾಣವಾಗುತ್ತಿವೆ. ರಸ್ತೆಗಳ ಸ್ವಚ್ಛತೆ ಜತೆಗೆ ಕಸದ ರಾಶಿ ತೆರವುಗೊಳಿಸುವ ಕೆಲಸವನ್ನೇ ನಗರಸಭೆ ಸಿಬ್ಬಂದಿ ಮರೆತುಬಿಟ್ಟಿದ್ದಾರೆ. ವಾರ್ಡ್ ತುಂಬೆಲ್ಲ ಅನೈರ್ಮಲ್ಯ ನಿರ್ಮಾಣವಾಗಿದ್ದು, ಎಲ್ಲೆಡೆಯೂ ದುರ್ನಾತ ಹಬ್ಬಿದೆ ಎಂದು ನಿವಾಸಿಗಳು ಅಲವತ್ತುಕೊಂಡರು.
    ಕುಡಿಯುವ ನೀರಿನ ಪೂರೈಕೆ ಕೂಡ ನಿಯಮಿತವಾಗಿ ಆಗುತ್ತಿಲ್ಲ. ಆದ್ದರಿಂದ, ನೀರಿಗಾಗಿ ತತ್ವಾರ ಉಂಟಾಗಿದೆ ಎಂದು ದೂರಿದರು.

    ಶಿಥಿಲಗೊಂಡ ಸಾರ್ವಜನಿಕ ಶೌಚಗೃಹ: ರಾಜೀವ್ ಗಾಂಧಿ ಆಶ್ರಯ ಬಡಾವಣೆಯ ಒಂದನೇ ಹಂತದಲ್ಲಿ ದಶಕಗಳ ಹಿಂದೆಯೇ ಸಾರ್ವಜನಿಕ ಶೌಚಗೃಹ ನಿರ್ಮಾಣಗೊಂಡಿದೆ. ಆದರೂ ಇದನ್ನು ಉದ್ಘಾಟಿಸಲಾಗಿಲ್ಲ. ಇದಕ್ಕೆ ಕಾರಣ ಏನೆಂಬುದು ಗೊತ್ತಾಗುತ್ತಿಲ್ಲ. ಪರಿಣಾಮ ಇಲ್ಲಿನ ಜನರ ಪಾಲಿಗೆ ಬಯಲೇ ಶೌಚಗೃಹವಾಗಿದೆ.

    ನಗರಸಭೆಯ ಮೊದಲ ವಾರ್ಡ್‌ನಲ್ಲಿ ಸಮಸ್ಯೆಗಳೂ ಮೊದಲ ಸ್ಥಾನದಲ್ಲಿವೆ. ಪ್ರಮುಖವಾಗಿ ರಸ್ತೆ ದುರಸ್ತಿಯಾಗುವ ಜತೆಗೆ ಚರಂಡಿಗಳು ನಿರ್ಮಾಣಗೊಳ್ಳಬೇಕಿದೆ. ಮಳೆ ಬಂದರೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗುತ್ತದೆ. ಈ ವಾರ್ಡ್ ಮೂರು ಬಡಾವಣೆಗಳನ್ನು ಒಳಗೊಂಡಿದ್ದು, ಪ್ರತಿ ಬಡಾವಣೆಗೂ ಒಂದೊಂದು ಉದ್ಯಾನ ನಿರ್ಮಿಸಬೇಕಿದೆ. ನಗರಸಭೆ ಸಾಮಾನ್ಯ ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸಿದ್ದೇನೆ. ಶೀಘ್ರವೇ ಸಮಸ್ಯೆಗಳು ಪರಿಹಾರವಾಗುವ ನಿರೀಕ್ಷೆ ಇದೆ.
    ಹಂಸಪ್ರಿಯಾ, ನಗರಸಭೆಯ 1ನೇ ವಾರ್ಡ್ ಸದಸ್ಯೆ

    ರಾಜೀವ್‌ಗಾಂದಿ ಆಶ್ರಯ ಬಡಾವಣೆಯಲ್ಲಿ ಸುಮಾರು 600ಕ್ಕೂ ಹೆಚ್ಚು ಮನೆಗಳಿದ್ದು, ಇಲ್ಲಿಯವರೆಗೂ ಶಾಶ್ವತ ಪರಿಹಾರವಾಗಿ ಮೂಲಸೌಕರ್ಯಗಳು ದೊರೆತಿಲ್ಲ. ಚರಂಡಿಗಳು, ರಸ್ತೆಗಳು ಇಲ್ಲದ ಇಲ್ಲಿನ ವಾರ್ಡಿನಲ್ಲಿ ಬಹುತೇಕ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದೊಡ್ಡಬಳ್ಳಾಪುರದ 31 ವಾರ್ಡ್‌ಗಳ ಪೈಕಿ ನಮ್ಮ ವಾರ್ಡ್ ಶಾಪಗ್ರಸ್ಥವಾಗಿದೆ. ಮಳೆ ಬಂದರಂತೂ ನಾವು ಭಯದಲ್ಲಿ ಬದುಕುವ ಪರಿಶ್ಥಿತಿ ಇದೆ.
    ಆಂಜಿ, ರಾಜೀವ್‌ಗಾಂಧಿ ಆಶ್ರಯ ಬಡವಾಣೆ ನಿವಾಸಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts